ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ದಾಪುರದಲ್ಲಿ ಬೃಹತ್ ಶೋಭಾಯಾತ್ರೆ: ಗಮನಸೆಳೆದ ಕೃಷ್ಣ– ರಾಧೆಯರು

ಸಿದ್ದಾಪುರದಲ್ಲಿ ಬೃಹತ್ ಶೋಭಾಯಾತ್ರೆ, ಸಾವಿರ ಸಂಖ್ಯೆಯಲ್ಲಿ ಪಾಲ್ಗೊಂಡ ಜನರು
Published : 2 ಸೆಪ್ಟೆಂಬರ್ 2024, 3:22 IST
Last Updated : 2 ಸೆಪ್ಟೆಂಬರ್ 2024, 3:22 IST
ಫಾಲೋ ಮಾಡಿ
Comments

ಸಿದ್ದಾಪುರ: ವಿಶ್ವ ಹಿಂದೂ ಪರಿಷತ್ ಷಷ್ಠಿಪೂರ್ತಿ ಸಮಾರೋಪ ಸಂಭ್ರಮದ ಪ್ರಯುಕ್ತ ಪಟ್ಟಣದಲ್ಲಿ ಶ್ರೀಕೃಷ್ಣ ರಾಧೆಯರ ಶೋಭಾಯಾತ್ರೆ ಭಾನುವಾರ ವಿಜೃಂಭಣೆಯಿಂದ ನಡೆಯಿತು.

ವಿರಾಜಪೇಟೆ ಪ್ರಖಂಡದ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಸಿದ್ದಾಪುರದ ದುರ್ಗಾ ಭಗವತಿ ದೇವಾಲಯದಲ್ಲಿ ಗೋಪೂಜೆ ನಡೆಯಿತು. ಬಳಿಕ ಚೆಂಡೆ ವಾದ್ಯಗಳೊಂದಿಗೆ ಸಿದ್ದಾಪುರ ಬಸ್‌ ನಿಲ್ದಾಣದವರೆಗೆ ನಡೆದ ಶೋಭಾಯಾತ್ರೆಯಲ್ಲಿ ನೂರಾರು ಮಂದಿ ಶ್ರೀಕೃಷ್ಣ- ರಾಧೆ ವೇಷಧಾರಿಗಳು ಭಾಗಿಯಾದರು. ಮೆರವಣಿಗೆಯಲ್ಲಿ ಸುಮಾರು ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.

ಕೊಳಲು ಹಿಡಿದ ಶ್ರೀಕೃಷ್ಣ ಹಾಗೂ ರಾಧೆಯರ ವೇಷವನ್ನು ಧರಿಸಿದ ಪುಟ್ಟ ಮಕ್ಕಳು ಶೋಭಾಯಾತ್ರೆಗೆ ಮೆರುಗು ತುಂಬಿದರು. ಸಿದ್ದಾಪುರದ ಎಸ್.ಎನ್.ಡಿ.ಪಿ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ಇಡೀ ಪಟ್ಟಣದಲ್ಲಿ ಎಲ್ಲಿ ನೋಡಿದರಲ್ಲಿ ಅಲ್ಲಿ ಕೇಸರಿ ಧ್ವಜಗಳೇ ಹಾರಾಡಿದವು. ಮೆರವಣಿಗೆಯಲ್ಲಿ ಭಾಗಿಯಾಗಿದ್ದವರು ಕೇಸರಿ ಶಾಲು ಧರಿಸಿದ್ದರು. ಇಡೀ ಪಟ್ಟಣ ಕೇಸರಿಮಯವಾಗಿತ್ತು.

ಕೃಷ್ಣ, ರಾಧೆಯ ವೇಷ ಧರಿಸಿದ ಪುಟ್ಟ ಮಕ್ಕಳನ್ನು ಎತ್ತಿಕೊಂಡು ಪೋಷಕರೂ ಹೆಜ್ಜೆ ಹಾಕಿದರು. ಚಿಕ್ಕಮಕ್ಕಳು ಕೊಳಲು ಹಿಡಿದು ಹೆಜ್ಜೆ ಹಾಕಿ ಸಂಭ್ರಮಿಸಿದರು.

ಭಾರತಾಂಬೆಯ ಬೃಹತ್ ಭಾವಚಿತ್ರವನ್ನು ವಾಹನದಲ್ಲಿ ಇರಿಸಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯುದ್ಧಕ್ಕೂ ಮಕ್ಕಳು, ಹಿರಿಯರು ಭಜನೆ ಮಾಡಿದರು. ಕೃಷ್ಣನ ಕುರಿತಾದ ಹಾಡುಗಳನ್ನು ಹಾಡಿದರು. ಹೂಮಾಲೆ, ತುಳಸಿಹಾರ ಧರಿಸಿದ, ನವಿಳುಗರಿ ಹಿಡಿದ, ಪುಟ್ಟ ಕೊಡವಿಡಿದ, ವಿವಿಧ ವಿನ್ಯಾಸಗಳ ಕಿರೀಟ, ಪೇಟ ಧರಿಸಿದ ಮಕ್ಕಳು ಸೂಜಿಗಲ್ಲಿನಂತೆ ಸೆಳೆದರು.

ನಂತರ ನಡೆದ ಮೊಸರು ಕುಡಿಕೆ ಒಡೆಯುವ ಸ್ಪರ್ಧೆಯನ್ನು ಎಲ್ಲರೇ ಎವೆಯಿಕ್ಕದೇ ನೋಡಿದರು. ಕುಡಿಕೆ ಒಡೆಯುತ್ತಿದ್ದಂತೆ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಸಂತಸ, ಸಂಭ್ರಮಗಳು ಇಡೀ ಪಟ್ಟಣದಲ್ಲಿ ಮೇಳೈಸಿದ್ದವು.

ಶ್ರೀಕೃಷ್ಣ- ರಾಧೆ ವೇಷಧಾರಿಗಳು ಬಸ್‌ ನಿಲ್ದಾಣದಲ್ಲಿ ನೃತ್ಯ ಮಾಡಿದರು
ಶ್ರೀಕೃಷ್ಣ- ರಾಧೆ ವೇಷಧಾರಿಗಳು ಬಸ್‌ ನಿಲ್ದಾಣದಲ್ಲಿ ನೃತ್ಯ ಮಾಡಿದರು

ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಕೆ.ಬೋಪಣ್ಣ, ಕಾರ್ಯಾಧ್ಯಕ್ಷ ಸುರೇಶ್‌ ಮುತ್ತಪ್ಪ, ಮುಖಂಡರಾದ ಸುಬ್ರಮಣಿ, ಯತೀಶ್ ಧನಂಜಯ, ಪ್ರವೀಣ್, ಎಸ್.ಎನ್.ಡಿ.ಪಿ ಅಧ್ಯಕ್ಷರಾದ ವಿ.ಕೆ.ಲೊಕೇಶ್, ಮುಖಂಡರಾದ ರೀಶಾ ಸುರೇಂದ್ರನ್, ರಮೇಶ್, ಸಂತೋಷ್, ಸುರೇಶ್, ಪೂರ್ಣಿಮಾ ಭಾಗವಹಿಸಿದ್ದರು.

ಹೆಚ್ಚುವರಿ ಎಸ್.ಪಿ ಸುಂದರ್ ಜಾಜ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಮಡಕೆ ಒಡೆಯಲು ಯತ್ನ
ಮಡಕೆ ಒಡೆಯಲು ಯತ್ನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT