ಸಾಮಾಜಿಕ ಭದ್ರತಾ ಯೋಜನೆ: ಗಡುವು

7
ಕೂಡಿಗೆಯಲ್ಲಿ ರೇಷ್ಮೆ ಮಾರುಕಟ್ಟೆ: ಸಚಿವ ಸಾ.ರಾ. ಮಹೇಶ್‌ ಭರವಸೆ

ಸಾಮಾಜಿಕ ಭದ್ರತಾ ಯೋಜನೆ: ಗಡುವು

Published:
Updated:
Deccan Herald

ಮಡಿಕೇರಿ: ‘ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯಗಳ ವಿತರಣೆಯಲ್ಲಿ ನೆಪಹೇಳಿಕೊಂಡು ತಪ್ಪು ಎಸಗುವಂತಿಲ್ಲ. ಒಂದು ತಿಂಗಳಲ್ಲಿ ಬಾಕಿಯಿರುವ ಅರ್ಜಿಗಳನ್ನು ವಿಲೇವಾರಿ ಮಾಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್‌ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಸಾರ್ವಜನಿಕರ ಕಷ್ಟಗಳಿಗೆ ಸ್ಪಂದಿಸಬೇಕು ಎನ್ನುವ ಕಾರಣಕ್ಕೆ ಒತ್ತಡ ಹೇರುತ್ತೇವೆ. ಆಗಲೂ ಕೆಲಸಗಳು ನಡೆಯದಿದ್ದರೆ ಅಮಾನತು ಖಚಿತ’ ಎಂದು ಎಚ್ಚರಿಕೆ ನೀಡಿದರು.

‘ನನ್ನ ಗಮನಕ್ಕೆ ಬಾರದೇ ಜಿಲ್ಲಾಧಿಕಾರಿ ಅವರು ವರ್ಗಾವಣೆಗೊಂಡ ಅಧಿಕಾರಿಗಳನ್ನು ಬಿಡುಗಡೆ ಮಾಡುವಂತಿಲ್ಲ. ಬಾಡಿಗೆಯ ಮನೆ ಸಿಗದ ಅಧಿಕಾರಿಗಳು ಶನಿವಾರ, ಭಾನುವಾರ ಮಾತ್ರ ತಮ್ಮೂರಿಗೆ ತೆರಳಬೇಕು. ಕೆಲಸ ದಿನಗಳಲ್ಲಿ ಕರ್ತವ್ಯ ನಿರತ ಸ್ಥಳಗಳಲ್ಲೇ ತಂಗಬೇಕು’ ಎಂದು ಖಡಕ್‌ ಸೂಚನೆ ನೀಡಿದರು.

‘ರೇಷ್ಮೆ ಮಾರುಕಟ್ಟೆ ಕಲ್ಪಿಸಿದರೆ ಪ್ರಯೋಜನ ಆಗಲಿದೆಯೇ’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಮಹೇಶ್, ‘ಕೂಡಿಗೆಯ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ರೈತರು ಮಳೆ ಪರಿಹಾರಕ್ಕೆ ಸಲ್ಲಿಸಿದ್ದ ಅರ್ಜಿಗಳನ್ನು ಶೀಘ್ರವೇ ವಿಲೇವಾರಿ ಮಾಡಬೇಕು. ಸಮೀಕ್ಷೆ ವರದಿ ಬಂದಿದ್ದರೂ ಪರಿಹಾರ ವಿತರಿಸದೇ ಅರ್ಜಿಗಳನ್ನು ಬಾಕಿ ಉಳಿಸಿಕೊಳ್ಳಲು ಕಾರಣವೇನು ಎಂದು ಸಚಿವರು ಪ್ರಶ್ನಿಸಿದರು.

ಶಾಸಕ ಎಂ.ಪಿ. ಅಪ್ಪಚ್ಚುರಂಜನ್‌, ‘ತಾಲ್ಲೂಕು ಕಚೇರಿಗಳಲ್ಲಿ ಆರ್‌ಟಿಸಿ ವಿತರಣೆ ಮಾಡುತ್ತಿಲ್ಲ. ರೈತರಿಗೆ ತೊಂದರೆ ಆಗುತ್ತಿದ್ದು ಸೋಮವಾರದಿಂದ ಹೆಚ್ಚುವರಿ ಕೌಂಟರ್‌ ತೆರೆದು ಆರ್‌ಟಿಸಿ ವಿತರಣೆ ಮಾಡಬೇಕು’ ಎಂದು ತಹಶೀಲ್ದಾರ್ ಅವರಿಗೆ ಸೂಚಿಸಿದರು.

ಬದುಕಿದ್ದವರನ್ನೂ ಸಾಯಿಸಿದರು!: ವಿರಾಜಪೇಟೆ ಕ್ಷೇತ್ರದಲ್ಲಿ ಹಿಂದಿನ ತಹಶೀಲ್ದಾರ್‌ ಒಬ್ಬರು ಬದುಕಿದ್ದವರನ್ನು ಮರಣವನ್ನಪ್ಪಿದ್ದಾರೆ ಎಂದು ವರದಿ ನೀಡಿದ್ದಾರೆ ಎಂದು ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದರು.

‘ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರು ಸ್ಥಳಕ್ಕೆ ತೆರಳಿಯೇ ವರದಿ ಮಾಡಬೇಕು. ಪ್ರತಿ ಗ್ರಾಮದ ಜನನ ಮರಣದ ವಿವರ ದಾಖಲಿಸಬೇಕು. ಹಾಗಿದ್ದರೆ ಮಾತ್ರ ದಾಖಲಾತಿಯಲ್ಲಿ ಸ್ಪಷ್ಟತೆ ಮೂಡಲಿದೆ’ ಎಂದು ಸಚಿವರು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಸುನಿಲ್‌ ಸುಬ್ರಮಣಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್‌, ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್‌ ಹಾಜರಿದ್ದರು.

ಡಿ.ಸಿ, ಬೋಪಯ್ಯ ವಾಗ್ವಾದ!
ಸಭೆಯ ಆರಂಭದಲ್ಲಿಯೇ ಶಾಸಕ ಕೆ.ಜಿ. ಬೋಪಯ್ಯ ಹಾಗೂ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರ ನಡುವೆ ಮಳೆಹಾನಿ ಪರಿಹಾರ ಸಂಬಂಧ ಜಟಾಪಟಿ ನಡೆಯಿತು.

‘ನಿಮ್ಮ ಖಾತೆಯಲ್ಲಿ ₹ 9 ಕೋಟಿಯಷ್ಟು ಹಣ ಇಟ್ಟುಕೊಂಡಿದ್ದರೂ, ಯಾವ ಕಾರಣದಿಂದ ಖರ್ಚು ಮಾಡಿಲ್ಲ. ಪರಿಹಾರದ ಹಣವನ್ನು ನಿಮ್ಮ ಖಾತೆಯಲ್ಲಿ ಇಟ್ಟುಕೊಂಡಿದ್ದೀರಾ? ಮಾಕುಟ್ಟ ರಸ್ತೆ ಕುಸಿದಿದ್ದರೂ, ಹಣ ಬಿಡುಗಡೆ ಮಾಡಿಲ್ಲ. ಸಚಿವರನ್ನು ಕೇಳಿದರೆ ಜಿಲ್ಲಾಧಿಕಾರಿ ಖಾತೆಯಲ್ಲಿರುವ ಅನುದಾನ ಮೊದಲು ಖರ್ಚು ಮಾಡಿ ಎಂದು ಹೇಳುತ್ತಾರೆ’ ಎಂದು ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಅದಕ್ಕೆ ಜಿಲ್ಲಾಧಿಕಾರಿ ಶ್ರೀವಿದ್ಯಾ ಪ್ರತಿಕ್ರಿಯಿಸಿ, ‘ನಿಮ್ಮ ಗಮನಕ್ಕೆ ತಂದೇ ಹಣ ಖರ್ಚು ಮಾಡಲಾಗುವುದು. ತುರ್ತು ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲಾಗುತ್ತಿದೆ. ಎಲ್ಲ ಇಲಾಖೆಯ ವರದಿಗಳನ್ನೂ ತರಿಸಿಕೊಳ್ಳಲಾಗುತ್ತಿದೆ’ ಎಂದು ಸ್ಪಷ್ಟನೆ ನೀಡಿದರು.

‘ಬೇಕಾದ ರೀತಿಯಲ್ಲಿ ಅಧಿಕಾರ ನಡೆಸುವುದಿದ್ದರೆ ನಾವೇಕೆ ಸಭೆಗೆ ಬರಬೇಕು. ಕಾನೂನು ಗೊತ್ತಿಲ್ಲದೇ ಇರುವಷ್ಟು ಮುಟ್ಟಾಳ ನಾನ್ನಲ್ಲ’ ಎಂದು ಬೋಪಯ್ಯ ಖಾರವಾಗಿ ಪ್ರತಿಕ್ರಿಯಿಸಿದರು.

ಮಧ್ಯಪ್ರವೇಶಿಸಿದ ಸಚಿವ ಮಹೇಶ್‌, ‘ಎಲ್ಲ ಅಧಿಕಾರಿಗಳೂ ಜಿಲ್ಲಾಧಿಕಾರಿ ಅವರಿಗೆ ವರದಿ ಸಲ್ಲಿಸಬೇಕು. ಬಳಿಕ ಅರ್ಜಿಗಳನ್ನು ತಕ್ಷಣವೇ ವಿಲೇವಾರಿ ಮಾಡಬೇಕು’ ಎಂದು ಸೂಚಿಸಿದರು.

ಸಿಇಒ ವಿರುದ್ಧವೂ ಗರಂ: ‘ಏನ್ರಿ ಸಿಇಒ ಅವರೇ; ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ನಿಮ್ಮ ಅಧೀನದಲ್ಲಿ ಕೆಲಸ ನಿರ್ವಹಿಸಬೇಕೆಂದು ಹೇಳುತ್ತೀರಾ’ ಎಂದು ಬೋಪಯ್ಯ ಗುಡುಗಿದರು.

‘ಸಿಬ್ಬಂದಿ ಮಾತ್ರವೇ ನನ್ನ ವ್ಯಾಪ್ತಿಗೆ ಬರಲಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಪ್ರಶಾಂತ್‌ಕುಮಾರ್‌ ಮಿಶ್ರಾ ಸ್ಪಷ್ಟನೆ ನೀಡಿದರು.

ಜೆಡಿಎಸ್‌ನಿಂದ ಸ್ವಾಗತ

ಉಸ್ತುವಾರಿ ಸಚಿವರಾದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಸಾ.ರಾ.ಮಹೇಶ್ ಅವರನ್ನು ಮಡಿಕೇರಿಯಲ್ಲಿ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರು ಸ್ವಾಗತಿಸಿದರು.

ನಗರದ ಸುದರ್ಶನ ವೃತ್ತದ ಬಳಿ ಜಮಾಯಿಸಿದ ಕಾರ್ಯಕರ್ತರು ಸಚಿವರಿಗೆ ಜೈಕಾರ ಕೂಗಿ, ಹಾರ ಹಾಕಿ ಬರಮಾಡಿಕೊಂಡರು. ನಂತರ, ನಗರದ ಗುಡ್ಡೆಮನೆ ಅಪ್ಪಯ್ಯಗೌಡ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜಿ.ಟಿ. ಸರ್ಕಲ್‌ನಲ್ಲಿರುವ ಜನರಲ್ ತಿಮ್ಮಯ್ಯ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಮಂಗೇರೀರ ಮುತ್ತಣ್ಣ ವೃತ್ತದವರೆಗೆ ಕಾಲ್ನಡಿಗೆಯಲ್ಲಿ ಸಾಗಿದರು. ಜೆಡಿಎಸ್ ಜಿಲ್ಲಾ ಅಧ್ಯಕ್ಷ ಸಂಕೇತ್ ಪೂವಯ್ಯ ಹಾಜರಿದ್ದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !