ಶುಕ್ರವಾರ, ಡಿಸೆಂಬರ್ 2, 2022
19 °C

‘ರಸ್ತೆ, ಚರಂಡಿ ಸಮಸ್ಯೆ ಬಗೆಹರಿಸಿ’- ಶಾಸಕ ಅಪ್ಪಚ್ಚು ರಂಜನ್‌ಗೆ ನಿವಾಸಿಗಳ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ನಗರದ ದೇಚೂರು ಬಡಾವಣೆ, ಮಂಗಳಾದೇವಿ ನಗರ, ಚೈನ್ ಗೇಟ್ ಬಡಾವಣೆ, ಪಿಡಬ್ಲ್ಯೂಡಿ ಕ್ವಾಟ್ರಸ್‍ ಸೇರಿದಂತೆ ಮತ್ತಿತರ ವಾರ್ಡ್‍ಗಳಿಗೆ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ಶನಿವಾರ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಆಲಿಸಿದರು.

ರಸ್ತೆ ದುರಾವಸ್ಥೆ ಬಗ್ಗೆ ಸ್ಥಳೀಯರು ಅಸಮಾಧಾನ ಹೊರಹಾಕಿದರು.

‘ದೇಚೂರು ರಸ್ತೆ ಸಂಪೂರ್ಣ ಕಿತ್ತು ಹೋಗಿದ್ದು, ನಡೆದಾಡಲೂ ಅಸಾಧ್ಯವಾಗಿದೆ. ಇಲ್ಲಿನ ಕೆಲವು ಭಾಗಗಳಿಗೆ ಆಟೊಗಳೂ ಬರುತ್ತಿಲ್ಲ. ಮಳೆಗಾಲದಲ್ಲಿ ಮನೆಯಿಂದ ಹೊರ ಬರುವುದೇ ಕಷ್ಟವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಪಿಡಬ್ಲ್ಯೂಡಿ ಕ್ವಾಟ್ರಸ್‍ ಹಾಗೂ ಸುದರ್ಶನ ಬಡಾವಣೆಯ ಜನರು ಚರಂಡಿ ಸಮಸ್ಯೆ ಪ್ರಸ್ತಾಪಿಸಿದರು.

ಬಳಿಕ ಮಾತನಾಡಿದ ಅಪ್ಪಚ್ಚುರಂಜನ್, ‘ಕೊಡಗು ಜಿಲ್ಲೆಯಲ್ಲಿ ಅಕ್ಟೋಬರ್‌ವರೆಗೂ ಮಳೆ ಇದ್ದರಿಂದ ರಸ್ತೆ ಕಾಮಗಾರಿಯನ್ನು ಕೈಗೊಳ್ಳಲು ಸಾಧ್ಯವಾಗಿರಲಿಲ್ಲ, ಇನ್ನು 15 ದಿನದಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳಲಾಗುವುದು’ ಎಂದರು.

‘ನಗರೋತ್ಥಾನ ಯೋಜನೆಯಡಿ ₹ 40 ಕೋಟಿ, 15ನೇ ಹಣಕಾಸು ಯೋಜನೆಯ ₹ 5 ಕೋಟಿ, ಎನ್‌ಡಿಆರ್‌ ಎಫ್‌ನಡಿ ₹ 3 ಕೋಟಿ, ವಿಶೇಷ ಅನುದಾನದಡಿ ₹ 75 ಲಕ್ಷ ಅನುದಾನ ಲಭ್ಯವಿದ್ದು, ಕ್ರಿಯಾಯೋಜನೆ ತಯಾರಿಸಿ ಟೆಂಡರ್ ಹಂತದಲ್ಲಿದೆ’ ಎಂದು ತಿಳಿಸಿದರು.

ಮಂಗಳಾದೇವಿ ನಗರದಲ್ಲಿ ನಡೆಯುತ್ತಿರುವ ಬೃಹತ್ ಕಟ್ಟಡ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು, ‘ಇಲ್ಲಿ ಇಂತಹ ದೊಡ್ಡ ಕಟ್ಟಡ ನಿರ್ಮಾಣ ಕಾಮಗಾರಿಗೆ ಅನುಮತಿ ನೀಡಿದವರು ಯಾರು?’ ಎಂದು ಕಿಡಿಕಾರಿದರು‌.

‘ಈ ಹಿಂದೆ ಇದೆ ರೀತಿಯ ಕಾಮಗಾರಿಯಿಂದ ಭೂಕುಸಿತವಾಗಿ, ಸಾವು ನೋವು ಸಂಭವಿಸಿದ್ದವು. ಮತ್ತೆ ಕಾಮಗಾರಿ ನಡೆಸುತ್ತಿರುವುದು ಸರಿಯಲ್ಲ’ ಎಂದರು.

ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಪೌರಾಯುಕ್ತ ವಿಜಯ್, ನಗರಸಭಾ ಸದಸ್ಯರು
ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.