ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಶಿಕ್ಷಣದಿಂದ ಸಮಾಜದ ಬದಲಾವಣೆ ಸಾಧ್ಯ’

Published : 17 ಸೆಪ್ಟೆಂಬರ್ 2024, 6:44 IST
Last Updated : 17 ಸೆಪ್ಟೆಂಬರ್ 2024, 6:44 IST
ಫಾಲೋ ಮಾಡಿ
Comments

ಸೋಮವಾರಪೇಟೆ: ‘ಹಬ್ಬಗಳು ಎಲ್ಲರನ್ನೂ ಒಂದುಗೂಡಿಸುವ ಕೆಲಸ ಮಾಡುತ್ತಿದ್ದು, ಅದು ಕೇವಲ ಒಂದು ದಿನಕ್ಕೆ ಸೀಮಿತವಾಗದೆ, ಜೀವನ ಪೂರ್ತಿ ಮುಂದುವರಿಯಬೇಕು’ ಎಂದು ಶಾಸಕ ಡಾ. ಮಂತರ್ ಗೌಡ ಹೇಳಿದರು.

ಸಮೀಪದ ಬಜೆಗುಂಡಿ ಗ್ರಾಮದ ಖಿಳರಿಯಾ ಶಾಫಿ ಜುಮ ಮಸೀದಿ ಆಡಳಿತ ಮಂಡಳಿ, ಹಯಾತುಲ್ ಇಸ್ಲಾಂ ಅರೇಬಿಕ್ ಮದರಸ ವತಿಯಿಂದ ಸೋಮವಾರ ನಡೆದ ಪ್ರವಾದಿ ಮುಹಮ್ಮದ್ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಎಲ್ಲರೂ ಸಾಮರಸ್ಯದಿಂದ ಬದುಕುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಬೇಕಿದೆ. ಊರಿನ ಎಲ್ಲ ಅಭಿವೃದ್ಧಿಗೂ ಸಮಾಜದವರು ಸಹಕರಿಸಬೇಕಿದೆ’ ಎಂದು ಮನವಿ ಮಾಡಿದರು.

‘ಸಮಾಜದ ಬದಲಾವಣೆ ಶಿಕ್ಷಣದಿಂದ ಮಾತ್ರ ಸಾಧ್ಯ. ಉತ್ತಮ ಶಿಕ್ಷಣ ಪಡೆದಲ್ಲಿ ಮಾತ್ರ ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಿ ಬದುಕಬಹುದು. ಅಭಿವೃದ್ಧಿ ಕೆಲಸಗಳಲ್ಲಿ ರಾಜಕೀಯ ಬಿಟ್ಟು ಸಿಕ್ಕ ಅವಕಾಶವನ್ನು ಬಳಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು’ ಎಂದರು.

ಧರ್ಮಗುರು ಉಬೈದ್ ಫೈಜಿ ಮಾತನಾಡಿ, ‘ಪ್ರವಾದಿ ಮುಹಮ್ಮದ್ ಪೈಗಂಬರ್ ಅವರು ಶಾಂತಿಯುತ ಸೌಹಾರ್ದ ಬದುಕು ಕಂಡವರು. ಅವರ ಆದರ್ಶ ಇಂದಿಗೂ ಕಾಣಬಹುದು. ಸಮಾಜದಲ್ಲಿ ಅನಾಥರು, ಅಬಲೆಯರು ಹಾಗೂ ಹಿರಿಯರಿಗೆ ಗೌರವ ನೀಡಬೇಕು. ಧಾರ್ಮಿಕ ಹಾಗೂ ಮೌಲ್ಯಯುತ ಶಿಕ್ಷಣ ನೀಡಿದ್ದಲ್ಲಿ ಮಾತ್ರ ಯುವ ಜನರು ಸಮಾಜದಲ್ಲಿ ಗೌರವಯುತ ಜೀವನ ನಡೆಸಲು ಸಾಧ್ಯ. ಪ್ರವಾದಿಗಳ ಜೀವನ ಆದರ್ಶಗಳನ್ನು ಯುವಜನ ತಮ್ಮ ಜೀವನದಲ್ಲಿ ಅಳವಡಿಸಕೊಳ್ಳುವ ಮೂಲಕ ಬದುಕು ಕಾಣಬೇಕು’ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಸೀದಿಯ ಅಧ್ಯಕ್ಷ ಕೆ.ಎ. ಯಾಕೂಬ್‌ ಮಾತನಾಡಿ, ‘ಮದರಸಗಳು ಸಮಾಜದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದು, ಪೋಷಕರು ಮದರಸಗಳಿಗೆ ಶಿಕ್ಷಣಕ್ಕೆ ಕಳಿಸಬೇಕಿದೆ. ಮಕ್ಕಳನ್ನು ತಿದ್ದುವ ಕೆಲಸವನ್ನು ಪೋಷಕರು ಮತ್ತು ಗುರುಗಳು ಮಾಡಬೇಕಿದೆ. ಸಮಾಜಕ್ಕೆ ಕಂಟಕರಾಗದೆ, ಒಳಿತಿಗಾಗಿ ದುಡಿಯಬೇಕು’ ಎಂದು ತಿಳಿಸಿದರು.

ವೇದಿಕೆಯಲ್ಲಿ ಧರ್ಮಗುರು ಸಮೀರ್ ಫೈಜಿ, ಆಡಳಿತ ಮಂಡಳಿಯ ಉಪಾಧ್ಯಕ್ಷ ಹನೀಫ್, ಪ್ರಧಾನ ಕಾರ್ಯದರ್ಶಿ ಕೆ.ಎಂ. ಸುಲೈಮನ್, ಕಾರ್ಯದರ್ಶಿ ನಿಯಾಜ್, ಗೌರವಾಧ್ಯಕ್ಷ ಅಬ್ದುಲ್, ಪದಾಧಿಕಾರಿಗಳಾದ ಮುಸ್ತಫ, ಮುನೀರ್, ಇಬ್ರಾಹಿಂ, ಅಬ್ದುಲ್ ರೆಹಮನ್ ಇದ್ದರು.

ಶಾಸಕ ಡಾ. ಮಂತರ್ ಗೌಡ ಹಾಗೂ ಸೋಮವಾರಪೇಟೆ ನಗರ ಯೋಜನ ಪ್ರಾಧಿಕಾರದ ಅಧ್ಯಕ್ಷ ಕೆ.ಎ. ಆದಮ್ ಅವರನ್ನು ಸನ್ಮಾನಿಸಲಾಯಿತು.

ಎಸ್ಎಸ್ಎಲ್‌ಸಿ, ಪಿಯುಸಿ ಮತ್ತು ಪದವಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ಸಮುದಾಯದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಮಕ್ಕಳಿಗೆ ದಫ್, ಭಾಷಣ ಸೇರಿದಂತೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT