ಸೋಮವಾರಪೇಟೆ: ಇಲ್ಲಿನ ಸಿ.ಕೆ.ಸುಬ್ಬಯ್ಯ ರಸ್ತೆಯಲ್ಲಿನ ವಾಣಿಜ್ಯ ಮಳಿಗೆ ಪುಂಡ ಪೋಕರಿಗಳ ಆಶ್ರಯತಾಣವಾಗಿ ಮಾರ್ಪಟ್ಟಿದ್ದು, ಎಲ್ಲಿ ನೋಡಿದರೂ, ಹಳೆಯ ದ್ವಿಚಕ್ರ ವಾಹನಗಳು, ಮದ್ಯದ ಖಾಲಿ ಬಾಟಲಿ ಹಾಗೂ ಸಿಗರೇಟಿನ ತುಂಡುಗಳ ತ್ಯಾಜ್ಯಗಳು ರಾರಾಜಿಸುತ್ತಿವೆ.
ಸಾಕಷ್ಟು ಅಂಗಡಿ ಮಳಿಗೆಗಳನ್ನು ಹೊಂದಿರುವ ಈ ವಾಣಿಜ್ಯ ಮಳಿಗೆ ನಿರ್ಮಾಣ ಮಾಡಿ ಹಲವು ವರ್ಷಗಳ ನಂತರ ಉದ್ಘಾಟನೆಗೊಂಡಿತ್ತು. ಆದರೆ, ವಾಣಿಜ್ಯ ಮಳಿಗೆಯನ್ನು ಸರಿಯಾಗಿ ವಿನ್ಯಾಸ ಮಾಡಿ ನಿರ್ಮಿಸದೆ, ಕೋಟೆ ರೀತಿಯಲ್ಲಿ ನಿರ್ಮಾಣ ಮಾಡಿದ್ದರಿಂದ ವ್ಯಾಪಾರಕ್ಕೆ ಅನುಕೂಲವಾಗಿಲ್ಲ ಎಂದು ವ್ಯಾಪಾರಿಗಳು ಮಳಿಗೆಯಲ್ಲಿ ಅಂಗಡಿಯನ್ನು ತೆರೆಯಲು ಹಿಂದೇಟು ಹಾಕಿದರು. ನಂತರ, ಇಲ್ಲಿ ರಸ್ತೆ ಬದಿಯ ಅಂಗಡಿಗಳು ಮಾತ್ರ ವಿಲೇವಾರಿಯಾಗಿ, ಒಳಗಿನ ಮಳಿಗೆಗಳು ಖಾಲಿ ಬಿದ್ದಿದ್ದರಿಂದ, ನಂತರ ಅವುಗಳಲ್ಲಿ ಸಂಘ ಸಂಸ್ಥೆಗಳ ಕಚೇರಿ ಮತ್ತು ಗೋದಾಮಾಗಿ ಬಳಕೆಯಾಗುತ್ತಿದೆ.
ಇದಕ್ಕೆ 4 ಬಾಗಿಲುಗಳಿದ್ದು, ಎಲ್ಲ ಸಮಯದಲ್ಲಿಯೂ ತೆರೆದಿರುವುದರಿಂದ, ಯಾರು ಹೇಗೆ ಬೇಕಾದರೂ ಬಂದು ಹೋಗಲು ಮತ್ತು ಬಳಸಲು ಅವಕಾಶವಾಗಿದೆ. ಈ ಹಿನ್ನೆಲೆಯಲ್ಲಿ ರಾತ್ರಿಯಾದೊಡನೆ ದೀಪಗಳಿಲ್ಲದಿರುವುದರಿಂದ ಕುಡುಕರಿಗೆ ಮತ್ತಿತ್ತರ ಚಟುವಟಿಕೆಗಳಿಗೆ ಬಳಕೆಯಾಗುತ್ತಿದ್ದು, ತ್ಯಾಜ್ಯದಿಂದ ತುಂಬಿಹೋಗಿದೆ.
ಇದಕ್ಕೆ ಒಂದು ಶೌಚಾಲಯ ನಿರ್ಮಿಸಿದ್ದರೂ, ಅದರ ಗೇಟಿಗೆ ಬೀಗ ಹಾಕಿ, ಕೆಲವರಲ್ಲಿ ಮಾತ್ರ ಬೀಗದ ಕೀ ಕೊಟ್ಟಿರುವುದರಿಂದ ಎಲ್ಲರಿಗೂ ಉಪಯೋಗಕ್ಕೆ ಸಿಗುತ್ತಿಲ್ಲ. ಅಲ್ಲದೆ, ಇದಕ್ಕೆ ಹೋಗುವ ದಾರಿ ಕೂಡ ಗಿಡಗಂಟಿಗಳಿಂದ ತುಂಬಿಹೋಗಿದ್ದು, ಹೋಗಲು ಕಷ್ಟವಾಗುತ್ತಿದೆ. ಅದರ ಹಿಂದೆ ಮತ್ತು ಮುಂದೆ ಕಾಡುಗಿಡಗಳು ಬೆಳೆದಿದೆ. ಅದರ ಪಕ್ಕದಲ್ಲಿಯೇ ವಿದ್ಯುತ್ ಕಂಬವಿದ್ದು, ಅದಕ್ಕಂಟಿಕೊಂಡು ಕಾಡು ಬೆಳೆದಿದ್ದು, ಅಪಾಯ ಎದುರಾದರೂ, ಅದನ್ನು ತೆರವುಗೊಳಿಸಲು ಯಾರೂ ಮುಂದಾಗುತ್ತಿಲ್ಲ.
ವಾಣಿಜ್ಯ ಮಳಿಗೆಯ ಒಂದು ಬದಿಯ ದಾರಿಯಲ್ಲಿ ಗುಜರಿ ಬೈಕ್‌ಗಳನ್ನು ನಿಲ್ಲಿಸಿರುವುದರಿಂದ ಸಾರ್ವಜನಿಕರು ಒಳಗೆ ಬರದ ಪರಿಸ್ಥಿತಿ ಇದೆ. ಎಲ್ಲೆಡೆ ತ್ಯಾಜ್ಯ ತುಂಬಿರುವುದರಿಂದ ಮೂಗು ಮುಚ್ಚಿ ತಿರುಗಾಡಬೇಕಾದ ಪರಿಸ್ಥಿತಿ ಇದ್ದು, ಹಲವು ಬಾರಿ ಮನವಿ ಮಾಡಿದರೂ, ಇದನ್ನು ಸ್ವಚ್ಛಗೊಳಿಸಲು ಪಟ್ಟಣ ಪಂಚಾಯಿತಿ ಮುಂದಾಗುತ್ತಿಲ್ಲ ಎಂದು ಬಾಡಿಗೆದಾರರು ಆರೋಪಿಸಿದರು.
‘ಕಟ್ಟಡದ ಒಂದು ಮಳಿಗೆಯಲ್ಲಿ ಆಟೊ ಚಾಲಕರು ಕಳೆದ ಹಲವು ವರ್ಷಗಳಿಂದ ಕಚೇರಿ ಮಾಡಿಕೊಂಡಿದ್ದೇವೆ. ಇದರ ಪಕ್ಕದಲ್ಲಿಯೇ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ಗಬ್ಬೆದ್ದುಹೋಗಿದೆ. ಕಚೇರಿಯಲ್ಲಿ ಕೂರಲು ಸಹ ಆಗುತ್ತಿಲ್ಲ. ಇದರ ಅಕ್ಕಪಕ್ಕ ನಾವೇ ಸ್ವಚ್ಛಗೊಳಿಸಿಕೊಳ್ಳಬೇಕಾಗಿದೆ’ ಎಂದು ಆಟೊ ಚಾಲಕರ ಸಂಘದ ಅಧ್ಯಕ್ಷ ಗಂಗಾಧರ್ ದೂರಿದರು.
ಈಗಾಗಲೇ ವಾಣಿಜ್ಯ ಮಳಿಗೆಯ ಖಾಲಿ ಮಳಿಗೆಗಳನ್ನು ಹರಾಜು ಮಾಡಲಾಗಿದೆ. ಇಲ್ಲಿ ಇರುವವರನ್ನು ತೆರವುಗೊಳಿಸಿ ಬಾಡಿಗೆದಾರರಿಗೆ ಹಸ್ತಾಂತರಿಸಲಾಗುವುದು. ಇಲ್ಲಿ ತುಂಬಿರುವ ತ್ಯಾಜ್ಯವನ್ನು ಕೂಡಲೇ ಸ್ವಚ್ಛಗೊಳಿಸಲಾಗುವುದು- ನಾಚಪ್ಪ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.