ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೇಸಿ ಸಾಧಕರು | ಚಿತ್ರ, ನೃತ್ಯ ಕಲಾವಿದ ಈ ಸಾಧಕ ಶಿಕ್ಷಕ

ವಾಟೆಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಟಿ.ಬಿ.ಕುಮಾರಸ್ವಾಮಿ
Published : 7 ಆಗಸ್ಟ್ 2024, 6:19 IST
Last Updated : 7 ಆಗಸ್ಟ್ 2024, 6:19 IST
ಫಾಲೋ ಮಾಡಿ
Comments

ನಾಪೋಕ್ಲು: ಈಚೆಗೆ ಜಿಟಿಜಿಟಿ ಮಳೆ ಹನಿಯುತ್ತಿದ್ದಾಗ ಮಡಿಕೇರಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗೋಡೆಯಲ್ಲಿ ಅಕ್ಷರಗಳನ್ನು ಕಲಾವಿದರೊಬ್ಬರು ಬರೆಯುತ್ತಿದ್ದರು. ಏಕಾಗ್ರತೆಯಲ್ಲಿ ಬಣ್ಣದ ಒಂದೊಂದು ಅಕ್ಷರಗಳೂ ಮೂಡುತ್ತಿದ್ದವು. ಬಣ್ಣದ ಡಬ್ಬಿಗೆ ಅದ್ದಿದ ಕುಂಚದಿಂದ ರಂಗು ಮೂಡುತ್ತಿತ್ತು. ಕುಂಚದಲ್ಲಿ ರಂಗು ಮೂಡಿಸುತ್ತಿದ್ದ ಇವರು ವೃತ್ತಿಪರರಲ್ಲ. ಇವರು ಶಿಕ್ಷಕರು. ಮಕ್ಕಳಿಗೆ ಪಾಠದ ಜೊತೆಗೆ ಬದುಕಿನ ಪಾಠವನ್ನೂ ಬೋಧಿಸುವ ಇವರು ಚಿತ್ರಕಲೆ, ಅಭಿನಯ, ಮಾದರಿಗಳ ತಯಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧಕರು.

ಮಕ್ಕಳ ಕಲಿಕಾ ಪ್ರಗತಿಯೊಂದಿಗೆ ಶಾಲೆಯ ಸರ್ವತೋಮುಖ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದಾರೆ. ಜೊತೆಗೆ, ಸಮಾಜಕ್ಕೂ ಕಾಣಿಕೆ ನೀಡುತ್ತಿದ್ದಾರೆ.

ಕುರುಡು ಕಾಂಚಣ ಕುಣಿಯುತಲಿತ್ತೋ… ಬೇಂದ್ರೆಯವರ ಗೀತೆಗೆ ಇವರು ಹೆಜ್ಜೆ ಹಾಕಿದರೆಂದರೆ ಪ್ರೇಕ್ಷಕರು ತಲ್ಲೀನರಾಗುತ್ತಾರೆ. ಚಿತ್ರ ಬಿಡಿಸಿದರೆಂದರೆ ಅವು ನೋಡುಗರ ಮನ ಸೆಳೆಯುತ್ತವೆ. ಇವರು ತಯಾರಿಸಿದ ವೈಜ್ಞಾನಿಕ ಮಾದರಿಗಳಿಂದ ಹಲವು ವಿದ್ಯಾರ್ಥಿಗಳು ಬಹುಮಾನಗಳನ್ನು ತಮ್ಮ ಬಗಲಿಗೆ ಹಾಕಿಕೊಂಡಿದ್ದಾರೆ. ಹಲವು ಶಾಲಾ ಕೊಠಡಿಗಳಲ್ಲಿ ಇವರ ರಚನೆಗಳು ಎದ್ದು ಕಾಣುತ್ತವೆ.

ಸಹಪಠ್ಯ ಚಟುವಟಿಕೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಬಂದಿರುವ ಇವರು ಚಿತ್ರಕಲೆ, ಮಿಮಿಕ್ರಿ, ಅಭಿನಯಗೀತೆ, ಮಣ್ಣಿನ ಮಾದರಿ, ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಕ್ಕಳಿಗೂ ಅವುಗಳನ್ನು ಕಲಿಸಿ ವಿವಿಧ ಹಂತಗಳಲ್ಲಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲೆಯ ರಾಜ್ಯದ ವಿವಿಧ ಶಿಕ್ಷಕರಿಗೆ ತರಬೇತಿಯನ್ನು ನೀಡಿದ್ದಾರೆ. ಇವರು ತಯಾರಿಸಿರುವ ವಿಜ್ಞಾನ ಮಾದರಿಗಳು ಹಲವು ಸರ್ಕಾರಿ ಶಾಲೆಗಳಿಗೆ ಪ್ರಶಸ್ತಿಯನ್ನು ತಂದುಕೊಟ್ಟಿವೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯೊಂದಿಗೆ ಪ್ರತಿವರ್ಷ ವಿವಿಧ ಶಾಲೆಗಳಲ್ಲಿ ಬೇಸಿಗೆ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದಾರೆ. ರಾಜ್ಯದ ಹಲವೆಡೆ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ, ದೆಹಲಿಯಲ್ಲಿ ನಡೆದ ಗೌಡ ಅಕಾಡೆಮಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭೂತದ ಕೋಲ ನೃತ್ಯ ಮಾಡಿ ಜನಮೆಚ್ಚುಗೆ ಗಳಿಸಿದ್ದಾರೆ.

ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಕುಮಾರಸ್ವಾಮಿ ಅವರಿಗೆ ಹಲವು ಪ್ರಶಸ್ತಿಗಳು ಲಭಿಸಿವೆ. ಉತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿ, ಸುವರ್ಣ ಕರ್ನಾಟಕ ಪ್ರಶಸ್ತಿ, ಡಾರ್ವಿನ್ ಪ್ರಶಸ್ತಿ, ಕರ್ನಾಟಕ ಕಾವಲುಪಡೆ ಪ್ರಶಸ್ತಿ, ಸೇರಿದಂತೆ ವಿವಿಧ ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದಾರೆ. 1998ರಲ್ಲಿ ಶಿಕ್ಷಕರಾಗಿ ವೃತ್ತಿಯನ್ನು ಆರಂಭಿಸಿದ ಇವರು ಮುತ್ತಾರುಮುಡಿ ಗ್ರಾಮದ ತೆಕ್ಕಡ ಬೆಳ್ಯಪ್ಪ ಮತ್ತು ಜಾನಕಿ ದಂಪತಿ ಪುತ್ರ.

ಶಾಲಾಭಿವೃದ್ಧಿಗೂ ದುಡಿಯುತ್ತಿರುವ ಶಿಕ್ಷಕ: ತಾವು ಕೆಲಸ ಮಾಡುತ್ತಿರುವ ವಾಟೆಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೂ ತಮ್ಮದೇ ಕಾಣಿಕೆ ನೀಡುತ್ತಿರುವ ಕುಮಾರಸ್ವಾಮಿ ಅವರು ಹಲವು ಕಡೆಗಳಿಂದ ಅನುದಾನಗಳನ್ನು ತರುವಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ. ಹೊದ್ದೂರು ಗ್ರಾಮ ಪಂಚಾಯಿತಿಯಿಂದ ಅನುದಾನ ತಂದು ಡಂಬೆಲ್ಸ್ ಖರೀದಿಸಿ ಮಕ್ಕಳಿಗೆ ಪ್ರತಿವರ್ಷ ಕಲಿಸುತ್ತಿದ್ದು, ಬೆಳಗಿನ ಪ್ರಾರ್ಥನಾ ಅವಧಿಯಲ್ಲಿ ವ್ಯಾಯಾಮ, ಯೋಗ ಏರೋಬಿಕ್ಸ್, ಸಾಮೂಹಿಕ ನೃತ್ಯ, ಪಿರಮಿಡ್ ರಚನೆ ಕಲಿಸಿ ಮಕ್ಕಳನ್ನು ಸಹಪಠ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ವಿಜ್ಞಾನ ಮಾದರಿ ತಯಾರಿ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಕುಮಾರಸ್ವಾಮಿ
ವಿಜ್ಞಾನ ಮಾದರಿ ತಯಾರಿ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಕುಮಾರಸ್ವಾಮಿ
ಕಡಿಮೆ ಖರ್ಚಿನಲ್ಲಿ ತಯಾರಿಸಿದ ವಿಜ್ಞಾನ ಮಾದರಿ
ಕಡಿಮೆ ಖರ್ಚಿನಲ್ಲಿ ತಯಾರಿಸಿದ ವಿಜ್ಞಾನ ಮಾದರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT