ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಥಮಿಕ ಹಂತದಲ್ಲಿ ಕ್ರೀಡಾಸಕ್ತಿ ಬೆಳೆಸಿಕೊಳ್ಳಿ

ಕೂಡಿಗೆ ಸೈನಿಕ ಶಾಲೆಯಲ್ಲಿ ಅಂತರ ನಿಲಯದ ವಾರ್ಷಿಕ ಕ್ರೀಡಾ ಕೂಟ
Last Updated 5 ಡಿಸೆಂಬರ್ 2019, 9:13 IST
ಅಕ್ಷರ ಗಾತ್ರ

ಕುಶಾಲನಗರ: ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಿಂದಲೇ ಕ್ರೀಡಾಸಕ್ತಿಯನ್ನು ಬೆಳೆಸಿಕೊಳ್ಳುವ ಮೂಲಕ ಮನಃಪೂರ್ವಕವಾಗಿ ಶ್ರಮಿಸುವುದರೊಂದಿಗೆ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ ದೇಶದ ಕೀರ್ತಿಯನ್ನು ಎತ್ತಿಹಿಡಿಯಬೇಕು ಎಂದು ಅಂತರರಾಷ್ಟ್ರೀಯ ಅಥ್ಲಿಟಿಕ್ಸ್ ಕ್ರೀಡಾಪಟು ಅರ್ಜುನ ಪ್ರಶಸ್ತಿ ವಿಜೇತೆ ಅಶ್ವಿನಿ ನಾಚಪ್ಪ ಸಲಹೆ ನೀಡಿದರು.

ಸಮೀಪದ ಕೂಡಿಗೆ ಕ್ರೀಡಾಶಾಲಾ ಮೈದಾನದಲ್ಲಿ ಕೊಡಗು ಸೈನಿಕ ಶಾಲೆ ವತಿಯಿಂದ ಎರಡು ದಿನಗಳ ಕಾಲ ಆಯೋಜಿಸಿದ್ದ 2019-20ನೇ ಸಾಲಿನ ಅಂತರ ನಿಲಯ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ಕ್ರೀಡಾಪಟುವು ಕ್ರೀಡಾ ಸ್ಪೂರ್ತಿಯಿಂದ ಪಾಲ್ಗೊಂಡು ಕ್ರೀಡೆಯ ಘನತೆಯನ್ನು ಉನ್ನತೀಕರಿಸಬೇಕು. ಕ್ರೀಡೆಯಲ್ಲಿ ಯಾರೇ ಗೆಲ್ಲಲಿ ಅಥವಾ ಸೋಲಲ್ಲಿ ಎರಡನ್ನೂ ಧನಾತ್ಮಕವಾಗಿ ಸ್ವೀಕರಿಸಿ ಆರೋಗ್ಯಯುತ ಬಾಂಧವ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಚಿಕ್ಕವಯಸ್ಸಿನಿಂದಲೇ ಕ್ರೀಡೆಯ ಕುರಿತು ಆಸಕ್ತಿಯನ್ನು ಬೆಳೆಸಿಕೊಂಡ ಹಿನ್ನೆಲೆಯಲ್ಲಿ ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು. ಅದೇ ರೀತಿ ನೀವು ನಿರಂತರ ಪ್ರಯತ್ನ ನಡೆಸಬೇಕು ಎಂದು ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿದರು.

ಕ್ರೀಡಾಕೂಟದಲ್ಲಿ 100 ಮೀ, 200 ಮೀ, 400 ಮೀ, 1500ಮೀ, 3000ಮೀ ಓಟ ಸ್ಪರ್ಧೆಗಳು, ಎತ್ತರ ಜಿಗಿತ, ಉದ್ದ ಜಿಗಿತ, ಡಿಸ್ಕಸ್ ಎಸೆತ, ಗುಂಡು ಎಸೆತ, ಹಗ್ಗ ಜಗ್ಗಾಟ, ಹರ್ಡಲ್ಸ್‌, ಓಟ, ರಿಲೆ ಮೊದಲಾದ ಸ್ಪರ್ಧೆಗಳನ್ನು ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದೆ.

ಡಿ.5 ರಂದು ಸಂಜೆ ಸಮಾರೋಪಗೊಳ್ಳಲಿದ್ದು, ಪ್ರಖ್ಯಾತ ಅಂತರಾಷ್ಟ್ರೀಯ ಕ್ರೀಡಾಪಟು ಅರ್ಜುನ್ ದೇವಯ್ಯನವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಈ ಸಂದರ್ಭದಲ್ಲಿ ಶಾಲೆಯ ಪ್ರಭಾರೆ ಪ್ರಾಂಶುಪಾಲೆ ಲೆಫ್ಟಿನೆಂಟ್ ಕರ್ನಲ್ ಸೀಮಾ ತ್ರಿಪಾಠಿ, ಆಡಳಿತಾಧಿಕಾರಿ ಸ್ಕ್ವಾಡ್ರನ್ ಲೀಡರ್ ಆರ್ ಕೆ ಡೇ, ಮೊರಾರ್ಜಿ ದೇಸಾಯಿ ಶಾಲೆಯ ಪ್ರಾಂಶುಪಾಲ ಪ್ರಕಾಶ್, ಜ್ನಾನಗಂಗಾ ಶಾಲೆಯ ಪ್ರಾಂಶುಪಾಲೆ ಜಿಜಿ ಜೋಶ್, ಮಡಿಕೇರಿಯ ಭಾರತೀಯ ವಿದ್ಯಾಭವನ್ ಕೊಡಗು ವಿದ್ಯಾಲಯ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಸುಮಿತ್ರ ಕೆ ಎಸ್, ಶಾಲೆಯ ವೈದ್ಯಾಧಿಕಾರಿ ಡಾ. ಮಹೇಶ್, ಬೋಧಕ, ಬೋಧಕೇತರ ವಿದ್ಯಾರ್ಥಿಗಳು ಮತ್ತು ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಕೆಡೆಟ್ ಭಾಸ್ಕರ್ ಸ್ವಾಗತಿಸಿ, ಕೆಡೆಟ್ ಸುಜಿತ್ ಬೀರಾದಾರ್ ಹಾಗೂ ಕೆಡೆಟ್ ದಾಕ್ಷಾಯಿಣಿ ನಿರೂಪಿಸಿ, ಸುಜಿತ್ ಓಬಳೇಶ್ರಾಯ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT