ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ ಸ್ಟೇಡಿಯಂಗೆ ಪರ, ವಿರೋಧ

ಹೊದ್ದೂರು ಗ್ರಾಮ ಪಂಚಾಯಿತಿ ಸಭೆ, ಒತ್ತುವರಿ ಸರ್ವೆಗೆ ಆಗ್ರಹ
Last Updated 9 ಮಾರ್ಚ್ 2022, 12:09 IST
ಅಕ್ಷರ ಗಾತ್ರ

ಮಡಿಕೇರಿ: ಹೊದ್ದೂರು ಗ್ರಾಮ ಪಂಚಾಯಿತಿ ಗ್ರಾಮಸಭೆ ಪಾಲೇಮಾಡು ಅಂಗನವಾಡಿ ಮುಂಭಾಗದಲ್ಲಿ ಪಂಚಾಯಿತಿ ಅಧ್ಯಕ್ಷೆ ಕುಸುಮಾವತಿ ಅಧ್ಯಕ್ಷತೆಯಲ್ಲಿ ನಡೆಯಿತು.

ಕ್ರಿಕೆಟ್‌ ಸ್ಟೇಡಿಯಂ ಮತ್ತು ಸ್ಮಶಾನ ಜಾಗದ ಗೊಂದಲದ ಕುರಿತು ಪರ, ವಿರೋಧ ಹೇಳಿಕೆಗಳು ಕೇಳಿ ಬಂದವು.

ಗ್ರಾಮಸ್ಥರಾದ ಗಿರಿ ಉತ್ತಪ್ಪ ಮಾತನಾಡಿ, ‘ಅಂತರರಾಷ್ಟ್ರೀಯ ಮಟ್ಟದ ಸ್ಟೇಡಿಯಂ ನಿರ್ಮಾಣಗೊಳ್ಳುತ್ತಿರುವುದು ಸಂತೋಷದ ವಿಚಾರ. ಸ್ಮಶಾನ ಜಾಗದ ವಿಚಾರ ಮುಂದಿಟ್ಟು ಯೋಜನೆಗೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ’ ಎಂದು ಹೇಳಿದರು.

‘ಕ್ರಿಕೆಟ್ ಸ್ಟೇಡಿಯಂ ನಿರ್ಮಾಣದಿಂದ ಗ್ರಾಮ ಮಾತ್ರವಲ್ಲ ಜಿಲ್ಲೆ ಕೂಡ ಅಭಿವೃದ್ಧಿಯಾಗಲಿದ್ದು, ಸ್ಥಳೀಯ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಸಿಗಲಿದೆ. ಇಲ್ಲಿ ಸಾಕಷ್ಟು ಜಾಗ ಒತ್ತುವರಿಯಾಗಿದ್ದು, ಓರ್ವ ಫಲಾನುಭವಿಗೆ ಮೂರೂವರೆ ಸೆಂಟ್ ಜಾಗವೆಂದು ನಿಗದಿ ಮಾಡಿದ್ದರೂ ಹೆಚ್ಚಿನ ಜಾಗವನ್ನು ಹೊಂದಿದ್ದಾರೆ. ಸರ್ವೆ ನಡೆಸಿ ಎಲ್ಲಾ ಒತ್ತುವರಿಯನ್ನು ತೆರವುಗೊಳಿಸಿದರೆ ಸ್ಟೇಡಿಯಂ ನಿರ್ಮಾಣ ಸುಲಭವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ಗ್ರಾಮ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಮೊಣ್ಣಪ್ಪ ಮಾತನಾಡಿ, ‘ಸ್ಟೇಡಿಯಂಗೆ ನಾವು ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ. 119 ಎಕರೆ ಒತ್ತುವರಿ ಜಾಗದ ಕುರಿತು ಹದ್ದುಬಸ್ತ್ ಸರ್ವೆ ಕಾರ್ಯ ಆಗಬೇಕು. ಕಂದಾಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕಾಳಜಿ ವಹಿಸಬೇಕು’ ಎಂದು ಒತ್ತಾಯಿಸಿದರು.

‘ನಮ್ಮ ಪೂರ್ವಜರನ್ನು ಸಮಾಧಿ ಮಾಡಿದ ಜಾಗವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ಆಡಳಿತ ವ್ಯವಸ್ಥೆ ಬಡವರ ಪರವಾಗಿರಬೇಕೇ ಹೊರತು ಶ್ರೀಮಂತ ಸಂಸ್ಥೆಗಳ ಪರವಾಗಿ ಕೆಲಸ ಮಾಡಬಾರದು. ಸ್ಟೇಡಿಯಂ ನಿರ್ಮಾಣಕ್ಕೂ ಮೊದಲು ರಸ್ತೆ ವ್ಯವಸ್ಥೆಯನ್ನು ಸರಿಪಡಿಸಬೇಕು’ ಎಂದು ಕೋರಿದರು.

ಜಲಜೀವನ್ ಮಿಷನ್ ಯೋಜನೆ ಕುರಿತು ಸಂಯೋಜಕಿ ಬಿಂದು ಹಾಗೂ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಕುರಿತು ತಾಲ್ಲೂಕು ಐ.ಇ.ಸಿ ಸಂಯೋಜಕಿ ಅಕ್ಷಿತಾ ವಿವರಿಸಿದರು.

ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಸ್ಮಶಾನಕ್ಕಾಗಿ ಎರಡು ಎಕರೆ ಜಾಗವನ್ನು ಮಿಸಲಿಡುವುದು ಸೇರಿದಂತೆ ಕಂದಾಯ ಇಲಾಖೆಗೆ ಸಂಬಂಧಿಸಿದ ವಿಚಾರಗಳು, ಅಂಗನವಾಡಿಗೆ ಕಟ್ಟಡ, ವಿದ್ಯುತ್ ಸಮಸ್ಯೆ, ವಸತಿ, ಜಲಜೀವನ್, ಉದ್ಯೋಗ ಖಾತರಿ ಯೋಜನೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಸುಮಾವತಿ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ಗೈರು ಹಾಜರಾದ ಕುರಿತು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.

‘ಹೊದ್ದೂರು ಪಾಲೇಮಾಡು ಕಾನ್ಶಿರಾಂ ನಗರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಎರಡು ಎಕರೆ ಸ್ಮಶಾನ ಜಾಗವನ್ನು ಯಥಾಸ್ಥಿತಿ ಉಳಿಸಿಕೊಡಬೇಕು. ಬಡವರ ಹಕ್ಕನ್ನು ಶ್ರೀಮಂತ ಸಂಸ್ಥೆಗಳು ಕಸಿದುಕೊಳ್ಳದಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿ ಕೆ.ಮೊಣ್ಣಪ್ಪ ಗ್ರಾ.ಪಂ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.

ಪಿಡಿಒ ಅಬ್ದುಲ್ಲಾ, ಸದಸ್ಯರಾದ ಹಂಸ, ಮೈದು, ಚೌರೀರ ನವೀನ್, ಅನಿತಾ, ಕಡ್ಲೇರ ಟೈನಿ, ಹಮೀದ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT