ಭಾನುವಾರ, ಆಗಸ್ಟ್ 7, 2022
21 °C

ರಭಸದ ಗಾಳಿ ಮಳೆ: ಅಲ್ಲಲ್ಲಿ ಧರೆಗುರುಳಿದ ವಿದ್ಯುತ್ ಕಂಬಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುಂಟಿಕೊಪ್ಪ: ಸುಂಟಿಕೊಪ್ಪ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಸೋಮವಾರವೂ ವರುಣನ ಆರ್ಭಟ ಮುಂದುವರೆದಿದೆ.

ಸುಂಟಿಕೊಪ್ಪದಲ್ಲಿ ಭಾನುವಾರ ತಡರಾತ್ರಿ ಗಾಳಿ ಮಳೆ ಜೋರಾಗಿತ್ತು. ಇದರಿಂದ ಜನ ಭಯಭೀತರಾಗಿದ್ದರು. ಹೋಬಳಿ ವ್ಯಾಪ್ತಿಯಲ್ಲಿ ಭಾರಿ ಗಾಳಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಅಲ್ಲಲ್ಲಿ ಮರ, ಕೊಂಬೆಗಳು ವಿದ್ಯುತ್ ಕಂಬ ಮತ್ತು ತಂತಿಗಳ ಮೇಲೆ ಬಿದ್ದು ವಿದ್ಯುತ್ ವ್ಯತ್ಯಯ ಉಂಟಾಗಿದೆ.

ಸಮೀಪದ ನಾಕೂರು ಶಿರಂಗಾಲ ವ್ಯಾಪ್ತಿಯಲ್ಲಿ ಹಲವು ಕಂಬಗಳು ಧರೆಗುರುಳಿವೆ. ಅಲ್ಲದೇ ಏಳನೇ ಹೊಸಕೋಟೆ, ಕಂಬಿಬಾಣೆ, ಮಳೂರು, ಮತ್ತಿಕಾಡು, ತೊಂಡೂರು, ಹರದೂರು, ಮಾದಾಪುರಗಳಲ್ಲಿ ಮರಗಳು ಬಿದ್ದು ವಿದ್ಯುತ್ ತಂತಿ ತುಂಡಾಗಿದ್ದರಿಂದ ವಿದ್ಯುತ್ ವ್ಯತ್ಯಯ ಉಂಟಾಗಿದೆ.

ಸೆಸ್ಕ್ ಸುಂಟಿಕೊಪ್ಪದ ಕಿರಿಯ ಎಂಜಿನಿಯರ್ ಜೈದೀಪ್ ಮತ್ತು ಸಿಬ್ಬಂದಿ ಆ ಸ್ಥಳಗಳಿಗೆ ಭೇಟಿ ನೀಡಿ ತುರ್ತು ಸೇವೆಯಲ್ಲಿ ತೊಡಗಿದ್ದಾರೆ. ಈ ಮಧ್ಯೆ ಅಲ್ಲಲ್ಲಿ ಭಾರಿ ಗಾಳಿ ಮಳೆಗೆ ಕೊಂಬೆಗಳು ಮುರಿದು ಬೀಳುತ್ತಿರುವುದರಿಂದ ಕೆಲಸಕ್ಕೂ ಕೂಡಾ ಅಡ್ಡಿಯಾಗುತ್ತಿದೆ. ಅದರಲ್ಲೂ ಸೆಸ್ಕ್ ಸಿಬ್ಬಂದಿ ಆನಂದ, ಕುಮಾರ, ಪಾಷಾ ಇತರರು ಜೀವದ ಹಂಗು ತೊರೆದು ತಮ್ಮ ಕಾರ್ಯವನ್ನು ಮುಂದುವರೆಸಿದ್ದು, ಜನರಿಗೆ ಬೆಳಕು ನೀಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

ಮಾದಾಪುರ ವ್ಯಾಪ್ತಿಯಲ್ಲೂ ಭಾಗಶಃ ವಿದ್ಯುತ್ ತಂತಿಗಳಿಗೆ ಹಾನಿಯಾಗಿವೆ. ಸೋಮವಾರ ಮಧ್ಯಾಹ್ನ 12 ಗಂಟೆಯಿಂದ 2 ಗಂಟೆಯವರೆಗೆ ರಭಸದ ಮಳೆ ಸುರಿದಿದ್ದರಿಂದ ವಾಹನ ಸಂಚಾರ ಮತ್ತು ಜನರ ಓಡಾಟಕ್ಕೆ ತೊಂದರೆ ಉಂಟಾಯಿತು. ವಾಹನಗಳಿಗೆ ಸಂಚರಿಸಲು ಸಾಧ್ಯವಾಗದೇ ಕೆಲಕಾಲ ನಿಂತಿರುವ ದೃಶ್ಯ ಕಂಡುಬಂತು.

ಈ ವ್ಯಾಪ್ತಿಯ ಹಲವು ಹಳ್ಳಕೊಳ್ಳ, ಕೆರೆಗಳು ತುಂಬಿ ಹರಿಯುತ್ತಿವೆ. ನಾಕೂರು, ಹರದೂರು, ಮಂಜಿಕೆರೆ, ಕೊಡಗರಹಳ್ಳಿ, ಹಾಲೇರಿ, ಕಂಬಿಬಾಣೆ, ಬೋಯಿಕೇರಿ ಸೇರಿದಂತೆ ಎಲ್ಲ ಕಡೆಗಳಲ್ಲೂ ಧಾರಾಕಾರ ಮಳೆ ಸುರಿಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು