ಶುಕ್ರವಾರ, ಡಿಸೆಂಬರ್ 2, 2022
20 °C
ತಯಾರಾಗಿರುವ ಕ್ರಿಯಾಯೋಜನೆ, ಸದ್ಯದಲ್ಲೇ ಭೂಮಿಪೂಜೆ

ಕೊಡಗಿಗೆ ₹ 2.46 ಕೋಟಿ ಅನುದಾನ ನೀಡಿದ ಸುಬ್ರಮಣಿಯನ್‌ಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ರಾಜ್ಯಸಭೆಯ ನಿಕಟಪೂರ್ವ ಸದಸ್ಯ ಡಾ.ಸುಬ್ರಮಣಿಯನ್ ಸ್ವಾಮಿ ಅವರು ತಮ್ಮ ಸಂಸದರ ನಿಧಿಯಿಂದ ₹ 2.46 ಕೋಟಿ ಮೊತ್ತವನ್ನು ಕೊಡಗು ಜಿಲ್ಲೆಯ ಅಭಿವೃದ್ಧಿಗಾಗಿ ಫೆ.1ರಂದು ನೀಡಿದ್ದರು. ಇದೀಗ ಇದರ ಕಾಮಗಾರಿಗಳ ಕ್ರಿಯಾಯೋಜನೆ ರೂಪುಗೊಂಡಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕೊಡವ ನ್ಯಾಷನಲ್ ಕೌನ್ಸಿಲ್‌ ಅಧ್ಯಕ್ಷ ಎನ್.ಯು.ನಾಚಪ್ಪ, ‘ಕೊಡಗಿನ ಅಭಿವೃದ್ಧಿಗಾಗಿ ಸುಬ್ರಮಣಿಯನ್ ಸ್ವಾಮಿ ದೊಡ್ಡ ಪ್ರಮಾಣದ ಹಣ ನೀಡಿದ್ದಾರೆ’ ಎಂದು ಕೃತಜ್ಞತೆ ಅರ್ಪಿಸಿದ್ದಾರೆ.

‘ಕೊಡಗು ಸಾಕಷ್ಟು ಹಿಂದುಳಿದಿರುವ ಕುರಿತು ಸುಬ್ರಮಣಿಯನ್‌ಸ್ವಾಮಿ ಅವರ ಗಮನ ಸೆಳೆಯಲಾಗಿತ್ತು. ಅವರೂ 2017ರಲ್ಲಿ ಬಂದಿದ್ದಾಗ ಇಲ್ಲಿನ ಪರಿಸ್ಥಿತಿಯನ್ನು ಕಣ್ಣಾರೆ ಕಂಡಿದ್ದರು. ಅವರು ನೀಡಿರುವ ಹಣದಲ್ಲಿ ಜಿಲ್ಲಾಡಳಿತ ಉತ್ತಮವಾಗಿ ಸ್ಪಂದಿಸಿದ್ದು, ತ್ವರಿತಗತಿಯಲ್ಲಿ ಕ್ರಿಯಾಯೋಜನೆ ರೂಪಿಸಿದೆ’ ಎಂದು ಹೇಳಿದ್ದಾರೆ.

₹ 1.5 ಕೋಟಿ ಹಣ ಭಾಗಶಃ ಚೆಟ್ಟಳ್ಳಿ ಪಂಚಾಯಿತಿಗೆ ಸೇರಿದ ಕುಶಾಲನಗರ ತಾಲ್ಲೂಕಿನ ‘ನೂರೊಕ್ಕನಾಡ್ ಹಿಲ್ಸ್’ ರಸ್ತೆ ಅಭಿವೃದ್ಧಿ, ಮಡಿಕೇರಿ ತಾಲ್ಲೂಕಿನ ಕತ್ತಲೆಕಾಡು ರಸ್ತೆ ಅಭಿವೃದ್ಧಿಗೆ ಮೀಸಲಿದೆ ಎಂದು ಅವರು ತಿಳಿಸಿದ್ದಾರೆ.

₹ 21.14 ಲಕ್ಷ ಮೊತ್ತದಲ್ಲಿ ಕಡದಾಳು ಪಂಚಾಯಿತಿ ವ್ಯಾಪ್ತಿಯ ಇಬ್ನಿವಳವಾಡಿ ಗ್ರಾಮದ ಎನ್.ಎ. ಅಪ್ಪಯ್ಯ ಮತ್ತು ಎನ್.ಕೆ. ನಂದಾರವರ ಮನೆಗೆ ತೆರಳುವ ರಸ್ತೆ ಅಭಿವೃದ್ಧಿಗೆ, ₹ 75 ಲಕ್ಷ ಮೊತ್ತವು ಮಡಿಕೇರಿ ತಾಲ್ಲೂಕು, ಕುಶಾಲನಗರ ತಾಲ್ಲೂಕು, ಸೋಮವಾರಪೇಟೆ ತಾಲ್ಲೂಕು, ವಿರಾಜಪೇಟೆ ತಾಲ್ಲೂಕು ಮತ್ತು ಪೊನ್ನಂಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿನ ಗ್ರಾಮೀಣ ನಿವಾಸಿಗಳ ರಸ್ತೆ ಅಭಿವೃದ್ಧಿಗೆ ನಿಗದಿಯಾಗಿದೆ. ಉಳಿದ ಹಣ ಎಲ್ಲ ತಾಲ್ಲೂಕುಗಳಲ್ಲಿ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಬಳಕೆಯಾಗಲಿವೆ ಎಂದು ಅವರು ಹೇಳಿದ್ದಾರೆ.

ಕಾಮಗಾರಿಯ ಒಂದನೇ ವಿಭಾಗದ ಅಭಿವೃದ್ಧಿ ಕಾರ್ಯದ ಭೂಮಿಪೂಜೆಯನ್ನು ಸುಬ್ರಮಣಿಯನ್‌ಸ್ವಾಮಿ ಅವರ ಮುಂಬಯಿಯ ಪ್ರತಿನಿಧಿ ನೆರವೇರಿಸಲಿದ್ದಾರೆ. ಉಳಿದ ಎಲ್ಲಾ ಅಭಿವೃದ್ಧಿ ಕಾರ್ಯಗಳ ಭೂಮಿಪೂಜೆಯನ್ನು ನೆರವೇರಿಸಲು ನನಗೆ ಸೂಚಿಸಿದ್ದಾರೆ. ನವೆಂಬರ್ 26ರಂದು ಮಡಿಕೇರಿಯಲ್ಲಿ ನಡೆಯಲಿರುವ ‘32ನೇ ಕೊಡವ ನ್ಯಾಷನಲ್ ಡೇ’ಗೆ ಆಗಮಿಸುವ ಸುಬ್ರಮಣಿಯನ್‌ಸ್ವಾಮಿ ಉದ್ಘಾಟಿಸಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು