ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು | ಭತ್ತದ ಕೃಷಿಗೆ ಸಹಾಯಧನ: ಸಚಿವರಿಗೆ ರೈತರ ಮನವಿ

ಕಂದಾಯ ಅದಾಲತ್, ಪೌತಿಖಾತೆ ಆಂದೋಲನಕ್ಕೆ ಚಾಲನೆ ನೀಡಲು ರೈತ ಸಂಘದ ಆಗ್ರಹ
Last Updated 7 ಮೇ 2020, 5:31 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭತ್ತ ಕೃಷಿಯು ಲಾಭದಾಯಕವಾಗದೇ ಇರುವುದರಿಂದ ಹಲವು ರೈತರು ಭತ್ತ ಕೃಷಿ ಮಾಡುವುದನ್ನು ಕೈಬಿಟ್ಟಿದ್ದಾರೆ ಹಾಗೂ ಬಿಡುತ್ತಿದ್ದಾರೆ. ಭತ್ತ ಕೃಷಿಗೆ ಒತ್ತು ನೀಡುವ ದೃಷ್ಟಿಯಿಂದ ಪ್ರತಿ ಎಕರೆಗೆ ₹10 ಸಾವಿರ ಸಹಾಯಧನವನ್ನು ನೀಡಲು ಕ್ರಮ ಕೈಗೊಳ್ಳಬೇಕು ಭತ್ತ ಕೃಷಿ ಹೆಚ್ಚಾದರೆ ಅಂತರ್ಜಲ ಮಟ್ಟವೂ ಸಹ ಹೆಚ್ಚಲು ಸಹಕಾರಿ ಆಗುತ್ತದೆ ಎಂದು ಜಿ.ಪಂ ಅಧ್ಯಕ್ಷ ಬಿ.ಎ.ಹರೀಶ್ ಅವರು ಕೃಷಿ ಸಚಿವ ಬಿ.ಸಿ.ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲೆಯ 16 ಹೋಬಳಿಗಳಲ್ಲಿ 3 ಹೋಬಳಿಯಲ್ಲಷ್ಟೇ ಕೃಷಿಧಾರಾ- ಯಂತ್ರೋಪಕರಣ ಯೋಜನೆ ಕಾರ್ಯಗತವಾಗುತ್ತಿದೆ. ಪ್ರಕೃತಿ ವಿಕೋಪ ಮತ್ತು ಕೊರೊನಾ ಲಾಕ್‍ಡೌನ್‍ನಿಂದ ಜಿಲ್ಲೆಯ ರೈತರು ಕಂಗೆಟ್ಟಿದ್ದು ಕೃಷಿ ಚಟುವಟಿಕೆಯಲ್ಲಿ ಚೇತರಿಕೆ ಸಾಧ್ಯವಾಗುತ್ತಿಲ್ಲ. ಎಲ್ಲ ಹೋಬಳಿಗಳಲ್ಲಿಯೂ ಬಾಡಿಗೆ ಆಧಾರಿತ ವ್ಯವಸಾಯ ಉಪಕರಣಗಳ ಗೋದಾಮುಗಳನ್ನು ನಿರ್ಮಾಣ ಮಾಡಿ, ಕೊಡಗಿನ ರೈತರ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಜಿ.ಪಂ ಅಧ್ಯಕ್ಷರು ಕೋರಿದರು.

ಸ್ಪಿಂಕ್ಲರ್ ಪೈಪ್, ಟಾರ್ಪಲ್, ಸುಣ್ಣ, ಗೊಬ್ಬರ, ಕಳೆನಾಶಕ ಹಾಗೂ ಇತರ ಕೃಷಿ ಪರಿಕರಗಳನ್ನು ಸಹಾಯಧನ ರೂಪದಲ್ಲಿ ನೀಡಲು ಕ್ರಮ ವಹಿಸಬೇಕು. ಕೃಷಿ, ತೋಟಗಾರಿಕೆ ಬೆಳೆಗಳನ್ನು ಶೇಖರಣೆ, ಸಂರಕ್ಷಣೆ ಮಾಡಲು ಜಿಲ್ಲೆಯ ಪ್ರತಿ ಹೋಬಳಿಗೆ ತಲಾ ಒಂದು ಶೇಖರಣಾ ಘಟಕವನ್ನು ಸ್ಥಾಪನೆ ಮಾಡಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ರೈತ ಸಂಘದಿಂದಲೂ ಕೃಷಿ ಸಚಿವರ ಭೇಟಿ: ರೈತರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಕೃಷಿ ಸಚಿವ ಬಿ.ಸಿ.ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಪಂಚಾಯಿತಿ ಭವನದಲ್ಲಿ ಭೇಟಿ ಮಾಡಿದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಜಿಲ್ಲಾ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮತ್ತು ಪದಾಧಿಕಾರಿಗಳು ಜಿಲ್ಲೆಯಲ್ಲಿ ರೈತರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಚಿವರಿಗೆ ವಿವರಿಸಿದರು.

ಪೌತಿಕಾತೆ, ಸಿಂಗಲ್ ಆರ್‌ಟಿಸಿ ಗೊಂದಲವನ್ನು ನಿವಾರಿಸಬೇಕು. ಕಂದಾಯ ಅದಾಲತ್, ಪೌತಿಖಾತೆ ಆಂದೋಲನಕ್ಕೆ ಚಾಲನೆ ನೀಡಬೇಕು. ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಯಾಗಬೇಕು. ರೈತರ ಭೂಮಿ, ತೋಟಗಳಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಸಂದರ್ಭ ಲಕ್ಷಾಂತರ ಬೆಲೆಬಾಳುವ ಫಸಲು, ಇತರೆ ಸಾಮಗ್ರಿಗಳು ಹಾನಿಯಾದ ಸಂದರ್ಭ ಸಿಗುವ ಪರಿಹಾರ ಏನೇನೂ ಸಾಲದು. ಕನಿಷ್ಠ ಪರಿಹಾರ ನೀಡಲು ಕ್ರಮ ವಹಿಸಬೇಕು ಎಂದು ರೈತರು ಕೋರಿದರು.

ಪ್ರಸ್ತುತ ರೈತರ ಸಾಲವನ್ನು ದೀರ್ಘಾವಧಿ ಸಾಲವನ್ನಾಗಿ ಪರಿವರ್ತನೆ, ಬಡ್ಡಿರಹಿತವಾಗಿ ಸಾಲ ನೀಡಲು ಬ್ಯಾಂಕ್‍ಗಳಿಗೆ ಶಿಫಾರಸು ಮಾಡಬೇಕೆಂದು ಮನವಿ ಮಾಡಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಅಮ್ಮತ್ತಿ ಹೋಬಳಿ ಅಧ್ಯಕ್ಷ ಮಂಡೇಪಂಡ ಪ್ರವೀಣ್ ಉಪಸ್ಥಿತರಿದ್ದರು.

ರೈತರ ಬೇಡಿಕೆಗಳು...

* ಜಿಲ್ಲೆಯಲ್ಲಿ ಬೆಳೆಯುವ ಕರಿಮೆಣಸು ಬೆಳೆಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ವಸೂಲಿ ಮಾಡುತ್ತಿರುವ ಸೆಸ್ ರದ್ದುಪಡಿಸಬೇಕು.

* 10 ಎಚ್‌ಪಿ ಮೋಟಾರಿಗೆ ಉಚಿತ ವಿದ್ಯುತ್‌ ನೀಡಬೇಕು.

* ಪ್ರತಿ ಆರ್‌ಎಂಸಿ ಆವರಣದಲ್ಲಿ ಕೋಲ್ಡ್‌ ಸ್ಟೋರೇಜ್‌ ನಿರ್ಮಾಣ ಮಾಡಬೇಕು.

* ಮಲೆನಾಡು ಪ್ರದೇಶದಲ್ಲಿ ಬೆಳೆಯುವ ಬಿತ್ತನೆ ಬೀಜವನ್ನು ಖರೀದಿಸಿ ಇಲ್ಲಿನ ಸ್ಥಳೀಯ ರೈತರಿಗೆ ವಿತರಣೆ ಮಾಡಬೇಕು.

* ಹಸಿರು ಎಲೆ ಗೊಬ್ಬರದ ಬೀಜವನ್ನು ಸೂಕ್ತ ಸಮಯದಲ್ಲಿ ಸಮರ್ಪಕವಾಗಿ ವಿತರಿಸಲು ಕ್ರಮ ಕೈಗೊಳ್ಳಬೇಕು.

* ಕೊಡಗಿನಲ್ಲಿ ಆನೆ-ಮಾನವ ಸಂಘರ್ಷ ತಡೆಗಟ್ಟಲು ಶಾಶ್ವತ ಪರಿಹಾರ ಕಲ್ಪಿಸಬೇಕು.

* ಎರಡು ವರ್ಷಗಳಿಂದ ಕಂದಾಯ ದಾಖಲಾತಿಗಳ ಕೆಲಸ ನಡೆಯುತ್ತಿಲ್ಲ. ಪ್ರತ್ಯೇಕ ತಹಶೀಲ್ದಾರ್ ನೇಮಿಸಿ ರೈತರ ದಾಖಲಾತಿ ಸರಿಪಡಿಸಬೇಕು.

* ಜಿಲ್ಲೆಯಲ್ಲಿ ಹುಲಿ ಹಾವಳಿಯಿಂದ ರೈತರ ಜಾನುವಾರು ಬಲಿಯಾಗುತ್ತಿದ್ದು ಇಲಾಖೆ ನೀಡುವ ಪರಿಹಾರ ಕನಿಷ್ಠ ₹50 ಸಾವಿರಕ್ಕೆ ನಿಗದಿ ಪಡಿಸಬೇಕು.

* ವನ್ಯಜೀವಿಗಳಿಂದ ರೈತರು ಭೂಮಿಯಲ್ಲಿ ಬೆಳೆದ ಫಸಲು ನಾಶವಾಗುತ್ತಿದ್ದು ಪರಿಹಾರ ಹೆಚ್ಚಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT