ಶನಿವಾರ, ಜನವರಿ 18, 2020
19 °C
ಕೊಡಗು ಬೆಳೆಗಾರರ ಒಕ್ಕೂಟದಿಂದ ಆಗ್ರಹ: ಜಿಲ್ಲಾಧಿಕಾರಿಗೆ ಮನವಿ

ಪಂಪ್‌ಸೆಟ್‌: ಉಚಿತ ವಿದ್ಯುತ್‌ ಪೂರೈಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಜಿಲ್ಲೆಯಲ್ಲಿ ಕಾಫಿ ಬೆಳೆಗೆ ನೀರು ಹಾಯಿಸಲು 10 ಎಚ್.ಪಿ ತನಕ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಸೇರಿದಂತೆ ಅದಕ್ಕೂ ಮೇಲ್ಪಟ್ಟ ಎಚ್‌ಪಿಗೆ ರಿಯಾಯಿತಿ ದರದಲ್ಲಿ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಕೊಡಗು ಬೆಳೆಗಾರರ ಒಕ್ಕೂಟದ ಸದಸ್ಯರು, ಜಿಲ್ಲಾಧಿಕಾರಿಗೆ ಅನೀಸ್ ಕಣ್ಮಣಿ ಜಾಯ್‌ಗೆ ಮನವಿ ಸಲ್ಲಿಸಿದರು.

ಒಕ್ಕೂಟದ ಅಧ್ಯಕ್ಷ ಕೈಬುಲೀರ ಹರೀಶ್ ಅಪ್ಪಯ್ಯ ಮಾತನಾಡಿ, ರೈತರಿಗೆ ಉಚಿತ ವಿದ್ಯುತ್ ನೀಡಲು ಸರ್ಕಾರ ಆದೇಶ ಮಾಡಿದೆ. ಆದರೆ, ಇದು ಇನ್ನು ಜಾರಿಗೆ ಬಂದಿರುವುದಿಲ್ಲ. ವಿದ್ಯುತ್ ಇಲಾಖೆಯಿಂದ ಪಂಪ್‌ಸೆಟ್ ಬಳಕೆದಾರರಿಗೆ ಬೆಲೆ ಪಾವತಿಸುವಂತೆ ಒತ್ತಾಯ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿದ್ಯುತ್‌ ಸರಬರಾಜಿನ ಹಿಂದಿನ ಬಾಕಿಯನ್ನು ಉಚಿತ ಯೋಜನೆಯಡಿ ಸೇರಿಸಿ ಸರ್ಕಾರದ ಆದೇಶದಂತೆ ಶೀಘ್ರ ಸೌಲಭ್ಯವನ್ನು ಜಾರಿಗೊಳಿಸಲು ಸಂಬಂಧಿಸಿದ ಇಲಾಖೆ ಸೂಚಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯ ಕಾಫಿ ಬೆಳೆಗಾರರ ಆದಾಯವನ್ನು ವೈಜ್ಞಾನಿಕವಾಗಿ ಮತ್ತು ವಾಸ್ತವಾಂಶಕ್ಕೆ ಇಲ್ಲದೇ ಕಂದಾಯ ಇಲಾಖೆ ನಮೂದಿಸುತ್ತಿದ್ದು, ಇದರಿಂದ ಸಣ್ಣ ಕಾಫಿ ಬೆಳೆಗಾರರ ಆದಾಯ ದೃಢೀಕರಣ ಪತ್ರದಲ್ಲಿ ಹೆಚ್ಚಿನ ಆದಾಯ ತೋರಿಸುತ್ತಿದೆ ಎಂದು ತಿಳಿಸಿದರು.

ರೈತರಿಗೆ ಕಂದಾಯ ಇಲಾಖೆ ಅಧಿಕಾರಿಗಳು ತಪ್ಪು ಮಾನದಂಡದಲ್ಲಿ ಆದಾಯ ನಿಗದಿ ಪಡಿಸುತ್ತಿರುವುದರಿಂದ ಸಣ್ಣ ಕಾಫಿ ಬೆಳೆಗಾರರು ಬಿಪಿಎಲ್ ಕಾರ್ಡ್‌ಗೆ ಅರ್ಹರಾಗಿರುವ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಕಣ್ಣೊರೆಸುವ ತಂತ್ರ: ದಕ್ಷಿಣ ಕೊಡಗಿನಾದ್ಯಂತ ಹುಲಿ ದಾಳಿಗೆ ರೈತರು ಸಾಕಿದ ಜಾನುವಾರುಗಳು ತುತ್ತಾಗಿ ಬಲಿಯಾಗುತ್ತಿದ್ದು, ಕಳೆದ ಎರಡು ತಿಂಗಳಲ್ಲಿ ಸುಮಾರು 30ಕ್ಕೂ ಅಧಿಕ ಜಾನುವಾರುಗಳು ಬಲಿಯಾಗಿವೆ. ಆದರೆ, ಅರಣ್ಯ ಇಲಾಖೆಗೆ ಹುಲಿ ಸೆರೆ ಯಾವುದೇ ಅನುಮತಿ ಇಲ್ಲದಿದ್ದರೂ ಜನರ ಕಣ್ಣೊರೆಸುವ ತಂತ್ರ ಮಾಡುತ್ತಿದೆ ಎಂದು ದೂರಿದರು.

ಕಾಫಿ ಹಾಗೂ ಕೃಷಿಗೆ ನದಿ ನೀರನ್ನು ಬಳಸಲು ಯಾವುದೇ ತಡೆಮಾಡಬಾರದು. ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗದಂತೆ ನದಿ ನೀರು ಸಂಗ್ರಹ ಮಾಡಲು ತಾತ್ಕಾಲಿಕ ಚೆಕ್ ಡ್ಯಾಮ್‌ಗಳನ್ನು ನಿರ್ಮಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಕೊಡಗು ಬೆಳೆಗಾರರ ಒಕ್ಕೂಟದ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಖಜಾಂಜಿ ಮಾಳೀರ ವಿಜಯ್ ನಂಜಪ್ಪ, ನಿರ್ದೇಶಕರಾದ ಅರಮಣಮಾಡ ಸತೀಶ್ ದೇವಯ್ಯ, ಚೊಟ್ಟೆಯಂಡಮಾಡ ಪ್ರಜಾ ಮುದ್ದಯ್ಯ ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು