ಮಡಿಕೇರಿ: ಗ್ರಾಮಮಟ್ಟದಿಂದ ಕೇಂದ್ರಮಟ್ಟದವರೆಗೆ ಮಹಿಳೆಯ ಸುರಕ್ಷತೆಗೆ ಪರಿಣಾಮಕಾರಿ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಇಲ್ಲಿ ಮಹಿಳೋದಯ ಮಹಿಳಾ ಒಕ್ಕೂಟದ ಸದಸ್ಯರು ಒತ್ತಾಯಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ಸೇರಿದ ಒಕ್ಕೂಟದ ಸುಮಾರು 30ಕ್ಕೂ ಅಧಿಕ ಸ್ವಸಹಾಯ ಸಂಘಗಳ ಪ್ರತಿನಿಧಿಗಳು ಪ್ರತಿಭಟನೆ ನಡೆಸಿದರು.
‘ಅತ್ಯಾಚಾರಿಗಳು ಈ ದೇಶದಲ್ಲಿ ಜೀವಿಸಲು ಅನರ್ಹರು’, ‘ಹಿಂಸೆ ರಹಿತ ಜೀವನ ಪ್ರತಿಯೊಬ್ಬರ ಹಕ್ಕು’, ‘ಹೆಣ್ಣನ್ನು ಹಿಂಸಿಸಬೇಡಿ ಅವಳಿಗೂ ಬದುಕುವ ಹಕ್ಕಿದೆ’, ‘ನೆಮ್ಮದಿಯಿಂದ ಬಾಳಿ, ನೆಮ್ಮದಿಯಿಂದ ಬಾಳಲು ಬಿಡಿ’ ಎಂಬಿತ್ಯಾದಿ ಘೋಷವಾಕ್ಯಗಳಿರುವ ಭಿತ್ತಿಪತ್ರಗಳನ್ನಿಡಿದು ಅವರು ಘೋಷಣೆಗಳನ್ನು ಕೂಗಿದರು.
ಮಹಿಳೆಯ ವಿರುದ್ಧ ದಿನೇ ದಿನೇ ಹೆಚ್ಚುತ್ತಿರುವ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ಆತಂಕ ವ್ಯಕ್ತಪಡಿಸಿದ ಅವರು, ಸರ್ಕಾರ ಇನ್ನು ತಡಮಾಡದೇ ಮಹಿಳೆಯ ರಕ್ಷಣೆಯನ್ನು ಆದ್ಯತೆಯ ವಿಷಯವನ್ನಾಗಿ ಪರಿಗಣಿಸಿ, ಕೂಡಲೇ ಸೂಕ್ತ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಮಹಿಳೆಯರ ಸುರಕ್ಷತೆಗೆ ಕೈಗೊಳ್ಳುವ ಕ್ರಮಗಳು ಕೇವಲ ಒಂದು ಮಟ್ಟಕ್ಕೆ ಮಾತ್ರ ಸೀಮಿತವಾಗಿರದೇ ಅದು ಗ್ರಾಮ ಮಟ್ಟದಿಂದ ಕೇಂದ್ರ ಮಟ್ಟದವರೆಗೂ ಇರಬೇಕು. ಅಂತಹ ಪರಿಣಾಮಕಾರಿಯಾದ ಕ್ರಮಗಳ ಅಗತ್ಯ ಇದೆ ಎಂದು ಅವರು ಪ್ರತಿಪಾದಿಸಿದರು.
ಪಶ್ಚಿಮ ಬಂಗಾಲದ ಕೋಲ್ಕತ್ತಾದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಅಮಾನವೀಯ ಕೃತ್ಯಗಳು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಬೆಂಗಳೂರು ಸೇರಿದಂತೆ ದೇಶದ ಇತರೆ ಭಾಗಗಳಲ್ಲಿಯೂ ದಿನ ಕಳೆದಂತೆ ಮಹಿಳೆಯ ವಿರುದ್ಧ ದೌರ್ಜನ್ಯಗಳು ಹೆಚ್ಚುತ್ತಿವೆ. ಹಾಗಾಗಿ, ಈ ವಿಷಯವನ್ನು ಸರ್ಕಾರ ಗಂಭೀರವಾಗಿಯೇ ಪರಿಗಣಿಸಬೇಕು ಎಂದು ಮನವಿ ಮಾಡಿದರು.
ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಮಹಿಳೆಯರ ರಕ್ಷಣೆಗಾಗಿ ಮಹಿಳಾ ಆಯೋಗಗಳನ್ನು ರಚಿಸಿದ್ದರೂ ಮಹಿಳಾ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗಿಲ್ಲ. ದಿನದಿಂದ ದಿನಕ್ಕೆ ಹೆಚ್ಚಳವನ್ನೇ ಕಾಣಲಾಗುತ್ತಿದೆ. ಹಾಗಾಗಿ, ಸರ್ಕಾರ ಮಹಿಳೆಯ ರಕ್ಷಣೆಗೆ ತಕ್ಷಣವೇ ಏನಾದರೂ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಸ್ಥಳಕ್ಕೆ ಬಂದ ಹೆಚ್ಚುವರಿ ಜಿಲ್ಲಾಧಿಕಾರಿ ಐಶ್ವರ್ಯ ಅವರ ಸಮ್ಮುಖದಲ್ಲಿ ಮಹಿಳೆಯರು ಹಲವು ಹಕ್ಕೊತ್ತಾಯಗಳನ್ನು ಮಂಡಿಸಿದರು.
ಓಡಿಪಿ ಸಂಸ್ಥೆಯ ಸಂಯೋಜಕಿ ಮೋಲಿ, ಕೌಶಲ್ಯಾಭಿವೃದ್ಧಿ ಸಂಯೋಜಕಿ ಲಲಿತಾ, ವಲಯ ಸಂಯೋಜಕಿ ಜಾಯ್ಸ್ ಮೆನೆಜಸ್, ಮುಖಂಡರಾದ ಎನ್.ವಿಜಯಾ, ಮಮತಾ, ಸಿ.ಎಸ್.ಅಕ್ಷರಾ, ಒಕ್ಕೂಟದ ಅಧ್ಯಕ್ಷೆ ತಾರಾ, ಮಹಾ ಒಕ್ಕೂಟದ ಸದಸ್ಯರಾದ ಲೂಸಿ ಜೇಮ್ಸ್, ರಾಣಿ, ಮೇರಿ, ಜಯಂತಿ, ತಾಲ್ಲೂಕು ಒಕ್ಕೂಟದ ಸದಸ್ಯರು, ಜಿಲ್ಲಾ ಒಕ್ಕೂಟದ ಸದಸ್ಯರು ಹಾಗೂ ಸಂಘದ ಸದಸ್ಯರು ಪ‍್ರತಿಭಟನೆಯಲ್ಲಿದ್ದರು. 70ಕ್ಕೂ ಅಧಿಕ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಪ್ರತಿಭಟನೆಯಲ್ಲಿ 70ಕ್ಕೂ ಅಧಿಕ ಮಂದಿ ಭಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಐಶ್ವರ್ಯ ಅವರಿಗೆ ಮನವಿ ಸಲ್ಲಿಕೆ ರಕ್ಷಣೆಗೆ ಆಗ್ರಹಿಸಿ ಘೋಷಣೆ ಕೂಗಿದ ಮಹಿಳೆಯರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.