ಉತ್ಸವದ ಆರಂಭದಲ್ಲಿ ಗ್ರಾಮದ ಅಂಜಪರವಂಡ ಕುಟುಂಬದ ಐನ್ ಮನೆಯಿಂದ ಭಂಡಾರಪೆಟ್ಟಿಗೆಯನ್ನು ದೇವಾಲಯಕ್ಕೆ ತರಲಾಯಿತು. ಪನ್ನಂಗಾಲ ತಮ್ಮೆ ದೇವಾಲಯದಲ್ಲಿ ಪೂಜೆ, ಅಭಿಷೇಕ, ಸಾಂಪ್ರದಾಯಿಕ ಆಚರಣೆಗಳು ನೆರವೇರಿದವು. ಓಲೆಗರಿಯಲ್ಲಿ ತಯಾರಿಸಿದ ಎರಡು ಕೊಡೆಗಳನ್ನು ಕೊಡೆ ಹಬ್ಬದಲ್ಲಿ ಬಳಸಲಾಯಿತು. ಈ ಕೊಡೆಯಲ್ಲಿ ಪನ್ನಂಗಾಲ ತಮ್ಮೆ ದೇವಿ ನೆಲೆಸಿದ್ದು, ಅಣ್ಣನಾದ ಇಗ್ಗುತ್ತಪ್ಪ ಮನೆಗೆ ತಂಗಿಯನ್ನು ಕರೆತರುವ ಪದ್ಧತಿಯನ್ನು ಉತ್ಸವದ ರೂಪದಲ್ಲಿ ಆಚರಿಸಲಾಗುತ್ತಿದೆ. ಅಣ್ಣನನ್ನು ಬಿಟ್ಟು ಹೋಗಲು ಮನಸ್ಸಿಲ್ಲದ ತಂಗಿಯು ಮಾರ್ಗ ಮಧ್ಯೆ ಸಿಗುವ ಭತ್ತದ ಗದ್ದೆಯಿಂದ ಹಿಂತಿರುಗಿ ಹೋಗಲು ಯತ್ನಿಸುವ ದೃಶ್ಯ ಭಕ್ತಿಭಾವದಿಂದ ಕೂಡಿದ್ದು, ಭಕ್ತರನ್ನು ರೋಮಾಂಚನಗೊಳಿಸಿತು.