ಸಂತ್ರಸ್ತ ಮಕ್ಕಳಿಗೆ ಸ್ಥೈರ್ಯ ತುಂಬಿ: ಕೆ.ಜಿ. ಬೋಪಯ್ಯ

7

ಸಂತ್ರಸ್ತ ಮಕ್ಕಳಿಗೆ ಸ್ಥೈರ್ಯ ತುಂಬಿ: ಕೆ.ಜಿ. ಬೋಪಯ್ಯ

Published:
Updated:
Deccan Herald

ಮಡಿಕೇರಿ: ‘ಮಹಾಮಳೆಯಿಂದ ಸಂತ್ರಸ್ತರಾಗಿರುವ ಮಕ್ಕಳಿಗೆ ಶಿಕ್ಷಕರು ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು’ ಎಂದು ಶಾಸಕ ಕೆ.ಜಿ. ಬೋಪಯ್ಯ ಮನವಿ ಮಾಡಿದರು.

ಜಿಲ್ಲಾಡಳಿತದ ಆಶ್ರಯದಲ್ಲಿ ನಗರದ ಸೇಂಟ್‌ ಜೋಸೆಫ್‌ ಶಾಲೆಯಲ್ಲಿ ಬುಧವಾರ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಪ್ರಕೃತಿ ವಿಕೋಪದಿಂದಾಗಿ ಕೊಡಗು ಜಿಲ್ಲೆ 25 ವರ್ಷಗಳ ಹಿಂದಕ್ಕೆ ಸಾಗಿದೆ. ಅತಿವೃಷ್ಟಿಯಿಂದ ಮನೆ, ಆಸ್ತಿ ಪಾಸ್ತಿ ಕಳೆದುಕೊಂಡವರಿಗೆ ಆತ್ಮಬಲ ತುಂಬುವ ಕೆಲಸ ಮಾಡಬೇಕಿದೆ’ ಎಂದು ಹೇಳಿದರು.

ಪರಿಹಾರ ಕೇಂದ್ರದಲ್ಲಿರುವ ಮಕ್ಕಳಿಗೆ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಶಾಲೆಯಲ್ಲಿ ಮಕ್ಕಳಿಗೆ ಯಾವುದೇ ಕೊರತೆ ಉಂಟಾಗದಂತೆ ಶಿಕ್ಷಕರು ನೋಡಿಕೊಳ್ಳಬೇಕು ಎಂದು ಹೇಳಿದರು.

‘ಕಷ್ಟ ಬಂದಿದೆ, ಅದನ್ನು ಎದುರಿಸಲು ಎಲ್ಲರಲ್ಲಿ ಮನೋಬಲ ಹೆಚ್ಚಿಸಬೇಕು. ದೇಶ ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಣ ಅತಿ ಮುಖ್ಯ. ಒಬ್ಬ ವ್ಯಕ್ತಿಯ ನಿರ್ಮಾಣ ಶಿಕ್ಷಕರಿಂದ ಸಾಧ್ಯ. ಆ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಕರೆ ನೀಡಿದರು.

ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಮಾತನಾಡಿ, ‘ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಇದರಿಂದಾಗಿಯೇ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಸದಾ ಸ್ಮರಿಸುತ್ತೇವೆ’ ಎಂದು ಹೇಳಿದರು.

ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಾತನಾಡಿ, ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದದ್ದು ಎಂದು ಹೇಳಿದರು.

ಪ್ರಸಕ್ತ ವರ್ಷದಲ್ಲಿ ಹೆಚ್ಚು ಮಳೆಯಾದ್ದರಿಂದ ಶಾಲೆಗಳಿಗೆ ಹೆಚ್ಚಿನ ರಜೆ ನೀಡಬೇಕಾಯಿತು. ಮಳೆ ರಜೆಯನ್ನು ಸರಿದೂಗಿಸಲು ತರಗತಿಗಳನ್ನು ನಡೆಸಬೇಕು. ಜೊತೆಗೆ ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆ ಪ್ರಥಮ ಸ್ಥಾನ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಜಿ.ಪಂ.ಸಿಇಓ ಪ್ರಶಾಂತ್ ಕುಮಾರ್ ಮಿಶ್ರ ಅವರು ಮಾತನಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಚ್.ಎಸ್.ಚೇತನ್ ಅವರು ಮನವಿ ಸಲ್ಲಿಸಿದರು.

ಪ್ರಶಸ್ತಿ ಪಡೆದ ಹಿರಿಯ/ಕಿರಿಯ ಪ್ರಾಥಮಿಕ ಶಾಲಾ ಹಾಗೂ ಪ್ರೌಢ ಶಾಲೆಯ ಶಿಕ್ಷಕರನ್ನು ಸನ್ಮಾನಿಸಲಾಯಿತು. ನಿವೃತ್ತಿ ಹೊಂದಿದ ಶಿಕ್ಷಕರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾದ ಕೆ.ಬಿ. ರವಿ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಕುಂತಿ ಬೋಪಯ್ಯ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ.ಸೋಮಶೇಖರ, ಅನುದಾನಿತ ಪ್ರೌಢಶಾಲಾ ನೌಕರರ ಸಂಘದ ಅಧ್ಯಕ್ಷ ಪಿ.ಎ.ಪ್ರಭುಕುಮಾರ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !