ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Teachers' Day: ಅಸ್ಸಾಂ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸುವ ಶಿಕ್ಷಕಿಯರು

ಬಾಡಗರಕೇರಿ ಸರ್ಕಾರಿ ಹಿರಿಯ ಪಾಥಮಿಕ ಶಾಲೆಯಲ್ಲೊಂದು ಅಪರೂಪದ ಸಂಗತಿ
Published 5 ಸೆಪ್ಟೆಂಬರ್ 2024, 6:46 IST
Last Updated 5 ಸೆಪ್ಟೆಂಬರ್ 2024, 6:46 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಕನ್ನಡ ನೆಲದ ಮಕ್ಕಳಿಗಿಂತಲೂ ಸಾವಿರಾರು ಕಿಲೋ ಮೀಟರ್ ದೂರದ ಅಸ್ಸಾಂ ಮಕ್ಕಳಿಗೆ ಕನ್ನಡ ಕಲಿಸುವ ಪ್ರಯತ್ನ ಇಲ್ಲಿಗೆ ಸಮೀಪದ ಬಾಡಗರಕೇರಿ ಸರ್ಕಾರಿ ಹಿರಿಯ ಪಾಥಮಿಕ ಶಾಲೆಯಲ್ಲಿ ನಡೆದಿದೆ.

ಶಾಲೆಯ ಮುಖ್ಯ ಶಿಕ್ಷಕಿ ಎಚ್.ಎಂ.ಜಯಮ್ಮ, ಅಂಜು ಮತ್ತು ಎಂ.ಎಸ್.ಆಶಾ ಕನ್ನಡ ಕಲಿಸುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.

ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ಈಗ 64 ವಿದ್ಯಾರ್ಥಿಗಳಿದ್ದಾರೆ. ಇವರಲ್ಲಿ ಅಸ್ಸಾಂ ವಿದ್ಯಾರ್ಥಿಗಳ ಸಂಖ್ಯೆ 34. ಈ ಮಕ್ಕಳಿಗೆ ಕನ್ನಡ ಅಕ್ಷರ ಮಾಲೆ ಕಲಿಸಲಾಗುತ್ತಿದೆ. ಓದು ಬರಹದಲ್ಲಿ ಚುರುಕಾಗಿರುವ ಅಸ್ಸಾಮಿ ವಿದ್ಯಾರ್ಥಿಗಳು ಸ್ಥಳೀಯ ಮಕ್ಕಳಿಗಿಂತಲೂ ಕನ್ನಡ ಕಲಿಯಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ ಎನ್ನುತ್ತಾರೆ ಶಾಲೆಯ ಶಿಕ್ಷಕರು.

ಇದೇ ಶಾಲೆಯಲ್ಲಿ ಪ್ರಾಥಮಿಕ ತರಗತಿಯಿಂದ ವ್ಯಾಸಂಗದ ಮಾಡಿದ ಅಸ್ಸಾಂನ ಕಿರಣ್ ಮುಂಡ್ ಎಂಬ ವಿದ್ಯಾರ್ಥಿ ಬಿರುನಾಣಿಯ ಮರೆನಾಡು ಕನ್ನಡ ಪ್ರೌಢಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡಿ 625ಕ್ಕೆ 527 ಅಂಕಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿರುವುದು ಇವರ ಮಾತಿಗೆ ಪುಷ್ಠಿ ನೀಡುವಂತಿದೆ.

‘20 ವರ್ಷಗಳ ಹಿಂದೆಯೇ ಸಾವಿರಾರು ಕಾರ್ಮಿಕರು ಕೂಲಿ ಅರಸಿ ಕೊಡಗಿಗೆ ಬಂದು ಕೊಡಗಿನ ಗಡಿಭಾಗ ಬಿರುನಾಣಿ, ಪರಕಟಗೇರಿ, ಮರೆನಾಡು ಪ್ರದೇಶದ ಕಾಫಿ ತೋಟದ ಲೈನ್‌ಮನೆಗಳಲ್ಲಿ ನೆಲೆಸಿದ್ದಾರೆ. ಇವರಿಗೆಲ್ಲ ಕೊಡಗಿನ ವಿಳಾಸದಲ್ಲಿಯೇ ಆಧಾರ್ ಕಾರ್ಡ್ ಕೂಡ ಇದೆ. ಇವರೆಲ್ಲ ಈಗ ತಮ್ಮ ಮಕ್ಕಳನ್ನು ಸ್ಥಳೀಯ ಸರ್ಕಾರಿ ಶಾಲೆಗಳಿಗೆ ಸೇರಿಸಿ ಓದಿಸುತ್ತಿದ್ದಾರೆ. ಹೀಗಾಗಿ ಈ ಮಕ್ಕಳೆಲ್ಲ ಈಗ ಕನ್ನಡಿಗರೇ ಆಗಿದ್ದಾರೆ’ ಎಂಬ ಹೆಮ್ಮೆಯ ನುಡಿ ಶಾಲೆಯ ಮುಖ್ಯ ಶಿಕ್ಷಕಿ ಜಯಮ್ಮ ಅವರದು.

ಜಯಮ್ಮ ಅವರು ಕೇವಲ ಕನ್ನಡ ಕಲಿಸುವುದು, ಪಾಠ ಹೇಳುವುದಕ್ಕಷ್ಟೇ ಸೀಮಿತರಾಗದೇ ಶಾಲೆಯ ಕೊರತೆಗಳನ್ನು ನೀಗಿಸುವುದರಲ್ಲೂ ಅವರು ತೊಡಗಿಸಿಕೊಂಡಿದ್ದಾರೆ.

ಸ್ಥಳೀಯ ಕಾಫಿ ಬೆಳೆಗಾರರು ಹಾಗೂ ಹಲವು ಶಿಕ್ಷಣದಾನಿಗಳಿಂದ  ₹ 2.5 ಲಕ್ಷ ಮೌಲ್ಯದ ಸ್ಮಾರ್ಟ್ ಟಿವಿ, ಇಂಟರ್‌ನೆಟ್, ಸೋಲಾರ್, ಯುಪಿಎಸ್‌ಗಳನ್ನು ಉದಾರವಾಗಿ ನೀಡಿದ್ದಾರೆ. ಜತೆಗೆ, ಕಂಪ್ಯೂಟರ್, ಕಲರ್ ಪ್ರಿಂಟರ್, ವೈಫೈ ಸಂಪರ್ಕ ಮೊದಲಾದವು ಶಾಲೆಗೆ ದಕ್ಕುವಂತೆ ಮಾಡುವಲ್ಲಿ ಯಶಸ್ಸು ಕಂಡಿದ್ದಾರೆ.

ಶಾಲೆಯಲ್ಲಿ ಕಲಿತು ಇಂದು ಉತ್ತಮ ಅಧಿಕಾರದಲ್ಲಿರುವ ಮತ್ತು ಆರ್ಥಿಕವಾಗಿ ಸ್ಥಿತಿವಂತರಾಗಿರುವ ಹಳೆಯ ವಿದ್ಯಾರ್ಥಿಗಳು ಸಂಘ ಸ್ಥಾಪಿಸಿಕೊಂಡಿದ್ದರು. ಅವರಿಂದ ಉತ್ತಮ ಗುಣಮಟ್ಟದ 34 ಬೆಂಚ್, 5 ಟೇಬಲ್‌ಗಳು ಶಾಲೆಗೆ ಸಿಗುವಂತೆ ಮಾಡಿದ್ದಾರೆ.

ಗ್ರಾಮ ಪಂಚಾಯಿತಿಯಿಂದ ವಿದ್ಯಾರ್ಥಿಗಳಿಗೆ ಟಿ.ಶರ್ಟ್, ಜಿಲ್ಲಾ ಪಂಚಾಯಿತಿಯಿಂದ ಕ್ರೀಡಾ ಸಾಮಾಗ್ರಿಗಳು ಲಭಿಸುವಲ್ಲಿಯೂ ಇವರ ಪಾತ್ರ ದೊಡ್ಡದು. ಶಾಲೆಯ ಉಳಿದ ಜಾಗದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿ ಕಾಫಿತೋಟ ಮಾಡಿದ್ದಾರೆ. ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆ ಶಾಲಾ ಕಟ್ಟಡದ ಹಿಂದಿನ ಆವರಣದಲ್ಲಿ ತರಕಾರಿ , ಸೊಪ್ಪು, ಹಣ್ಣು ಹಂಪಲುಗಳನ್ನು ಬೆಳೆಯಲಾಗುತ್ತಿದೆ.

ದ್ಯಾರ್ಥಿಗಳು ಪಠ್ಯದ ಜತೆಗೆ ಕ್ರೀಡೆ, ಸಂಗೀತ, ನೃತ್ಯ, ಚಿತ್ರಕಲೆ ಮೊದಲಾದ ಪಠ್ಯೇತರ ಚಟುವಟಿಕೆಗಳಲ್ಲಿಯೂ ಮುಂದಿದ್ದಾರೆ.  ಹಲವು ಸ್ಪರ್ಧೆಗಳಲ್ಲಿ ರಾಜ್ಯಮಟ್ಟದಲ್ಲಿ ಸ್ಪರ್ಧಿಸಿದ್ದಾರೆ.

ಶಾಲೆಯಲ್ಲಿನ ಶಿಕ್ಷಕರು ಮಕ್ಕಳೊಂದಿಗೆ
ಶಾಲೆಯಲ್ಲಿನ ಶಿಕ್ಷಕರು ಮಕ್ಕಳೊಂದಿಗೆ
ಶಾಲೆಯ ಹೊರನೋಟ.
ಶಾಲೆಯ ಹೊರನೋಟ.
ಗೋಣಿಕೊಪ್ಪಲು ಬಳಿಯ ಬಾಡಗರಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಸ್ಸಾಂ ಮಕ್ಕಳಿಗೆ ಕನ್ನಡ ಕಲಿಸುತ್ತಿರುವ ಶಿಕ್ಷಕರು.
ಗೋಣಿಕೊಪ್ಪಲು ಬಳಿಯ ಬಾಡಗರಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಸ್ಸಾಂ ಮಕ್ಕಳಿಗೆ ಕನ್ನಡ ಕಲಿಸುತ್ತಿರುವ ಶಿಕ್ಷಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT