ಗುರುವಾರ , ಮಾರ್ಚ್ 23, 2023
29 °C
ವಿರಾಜಪೇಟೆ ಪೊಲೀಸರ ಕಾರ್ಯಾಚರಣೆ: ಮೂರು ರಾಜ್ಯದ ಆರೋಪಿಗಳ ಬಂಧನ

ವಿರಾಜಪೇಟೆ: ಹೆದ್ದಾರಿಯಲ್ಲಿ ದರೋಡೆಗೆ ಸಂಚು, ತಂಡ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿರಾಜಪೇಟೆ: ಕೊಡಗು- ಕೇರಳ ಅಂತರರಾಜ್ಯ ಹೆದ್ದಾರಿಯ ಪೆರುಂಬಾಡಿ ಸಮೀಪದಲ್ಲಿ ದರೋಡೆಗಾಗಿ ಹೊಂಚು ಹಾಕಿದ್ದ ಕರ್ನಾಟಕ, ಕೇರಳ ಹಾಗೂ ತಮಿಳುನಾಡು ಮೂಲದ 9 ಮಂದಿಯನ್ನು ಪೊಲೀಸರು ಶನಿವಾರ ರಾತ್ರಿ ಬಂಧಿಸಿದ್ದಾರೆ.

ಹೆದ್ದಾರಿಯಲ್ಲಿ ದರೋಡೆಗಾಗಿ ಸಂಚು ನಡೆಸಿದ್ದಾರೆ ಎಂಬ ಕುರಿತು ಸುಳಿವು ಪಡೆದ ಇಲ್ಲಿನ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಪೊಲೀಸರನ್ನು ನೋಡಿದ ಕೂಡಲೇ ಹೆದ್ದಾರಿಯಲ್ಲಿದ್ದ ಈ 9 ಮಂದಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.

ಆಗ ಪೊಲೀಸರು ಬೆನ್ನತ್ತಿ 9 ಮಂದಿಯನ್ನು ಬಂಧಿಸಿ ಎರಡು ಕಾರುಗಳನ್ನು ಹಾಗೂ ಎರಡು ಕಾರುಗಳಲ್ಲಿ ತಲಾ ಒಂದೊಂದು ಕೆ.ಜಿಯಷ್ಟು ಇಟ್ಟಿದ್ದ ಎರಡು ಪ್ಯಾಕೇಟ್‌ ಖಾರದ ಪುಡಿ, ಅರ್ಧ ಲೀಟರ್‌ನಷ್ಟು ಚಿನ್ನ ಕರಗಿಸಲು ಬಳಸುವ ಅಧಿಕ ಮೌಲ್ಯದ ಪಾದರಸ, 4 ಲಾಂಗ್‌ಗಳು, 2 ಮಚ್ಚುಗಳು, ಕಬ್ಬಿಣದ ಸಲಾಕೆಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಮೈಸೂರಿನ ವಾದಿರಾಜ್, ಕನಕಪುರದ ನಾರಾಯಣಸ್ವಾಮಿ, ಹಾಗೂ ಎಂ.ಸತೀಶ್, ಹೊಳೆನರಸೀಪುರ ಮೂಲದ ಬೆಂಗಳೂರಿನಲ್ಲಿ ನೆಲೆಸಿರುವ ಜಾನ್‌ಪೌಲ್, ಬೆಂಗಳೂರಿನ ಜ್ಞಾನೇಂದ್ರ ಪ್ರಸಾದ್, ಕೇರಳ ಕಣ್ಣಾನೂರಿನ ಕೆ.ಬಿ.ಅಭಿನವ್, ಕೇರಳ  ಬಡಗರದ ವೈಷ್ಣವ್, ತಮಿಳುನಾಡಿನ ಹೊಸೂರಿನ ಎಚ್.ಸುರೇಶ್, ಹೊಸೂರಿನ ಪುರುಷೋತ್ತಮ್ ಎಂಬುವವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಧೀಶರು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

9 ಮಂದಿ ವಿರುದ್ಧ ಪೊಲೀಸರು ಅಂತರರಾಜ್ಯ ದರೋಡೆ ಯತ್ನ ಪ್ರಕರಣವನ್ನು ದಾಖಲಿಸಿದ್ದಾರೆ.

ಈ ತಂಡ ಎರಡು ಕಾರುಗಳಲ್ಲಿ ಮೈಸೂರು ಕಡೆಯಿಂದ ಬಂದಿರುವುದಾಗಿ ತಿಳಿದುಬಂದಿದೆ. ಕೆಲ ದಿನಗಳ ಹಿಂದೆ ಅಂತರರಾಜ್ಯ ಚೆಕ್‌ಪೋಸ್ಟ್‌ಗಳು ಸಂಚಾರಕ್ಕೆ ಮುಕ್ತವಾಗಿದ್ದು, ಇದನ್ನು ಬಂಡವಾಳ ಮಾಡಿಕೊಂಡು ಆರೋಪಿಗಳು ದರೋಡೆಗೆ ಹೊಂಚು ಹಾಕಿದ್ದರೆಂದು ಶಂಕಿಸಲಾಗಿದೆ.

ಇಲ್ಲಿನ ನಗರ ಠಾಣೆಯ ಎಸ್ಐ ಎಚ್.ಸಿ.ಭೋಜಪ್ಪ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಸಿಬ್ಬಂದಿ ಎನ್.ಸಿ.ಲೋಕೇಶ್, ಮುಸ್ತಫಾ, ಸಂತೋಷ್, ಗಿರೀಶ್, ಮಧು, ಮುನಿರ್, ರಜನ್, ಲೋಹಿತ್, ಮಲ್ಲಿಕಾರ್ಜುನ ಹಾಗೂ ಯೋಗೇಶ್ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.