ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: ತಂತ್ರಜ್ಞಾನ ಆಧಾರಿತ ಕೃಷಿಗೆ ಒತ್ತು

ಕೊಡಗು ಜಿಲ್ಲಾ ವಾರ್ಷಿಕ ಸಾಲ ಯೋಜನೆ ಬಿಡುಗಡೆ
Last Updated 29 ಮೇ 2020, 14:41 IST
ಅಕ್ಷರ ಗಾತ್ರ

ಮಡಿಕೇರಿ: ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್, 2020-21ನೇ ಸಾಲಿನ ಕೊಡಗು ಜಿಲ್ಲಾ ವಾರ್ಷಿಕ ಸಾಲ ಯೋಜನೆಯನ್ನು ಜಿ.ಪಂ ಸಿಇಒ ಕೆ.ಲಕ್ಷೀಪ್ರಿಯಾ ಅವರು ಜಿ.ಪಂ ಸಭಾಂಗಣದಲ್ಲಿ ನಡೆದ ವಿಶೇಷ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಲಕ್ಷ್ಮೀಪ್ರಿಯಾ ಅವರು, ‘ಲಾಕ್‍ಡೌನ್‌ ಹಾಗೂ ಮತ್ತಿತರ ಕಾರಣಕ್ಕೆ ಜನಸಾಮಾನ್ಯರ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಅಗತ್ಯವಿರುವವರಿಗೆ ಸಾಲ ವಿತರಿಸುವುದರ ಮೂಲಕ ಜಿಲ್ಲಾ ವಾರ್ಷಿಕ ಸಾಲ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕು’ ಎಂದು ಸೂಚಿಸಿದರು.

ಈ ಬಾರಿಯ ವಾರ್ಷಿಕ ಸಾಲ ಯೋಜನೆಯು, ಆಧುನಿಕ ತಂತ್ರಜ್ಞಾನ ಆಧಾರಿತ ಕೃಷಿಗೆ ಹೆಚ್ಚಿನ ಒತ್ತು ನೀಡಿದೆ. ಜಿಲ್ಲೆಯ ಕೃಷಿಕರಿಗೆ ಅದು ವರದಾನವಾಗಲಿದೆ ಎಂದು ಸಭೆಗೆ ತಿಳಿಸಿದರು.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (ಮೊದಲಿನ ಕಾರ್ಪೊರೇಷನ್‌ ಬ್ಯಾಂಕ್)ದ ಮೈಸೂರು ವಲಯದ ಉಪ ಮಹಾ ಪ್ರಬಂಧಕ ಸಿ.ವಿ.ಮಂಜುನಾಥ್‌ ಮಾತನಾಡಿ, ‘2020-21ನೇ ಸಾಲಿಗೆ ಜಿಲ್ಲಾ ವಾರ್ಷಿಕ ಸಾಲ ಯೋಜನೆಯ ಅನ್ವಯ ₹ 4,275 ಕೋಟಿ ಗುರಿ ನಿಗದಿಪಡಿಸಿದ್ದು, ಅದರಲ್ಲಿ ಶೇ 85 (₹ 3,650 ಕೋಟಿ) ಆದ್ಯತಾ ವಲಯಕ್ಕೆ ಮೀಸಲಿಟ್ಟಿದ್ದು ಅವುಗಳಲ್ಲಿ ಕೃಷಿ ಚಟುವಟಿಕೆಗೆ ₹ 2,565 ಕೋಟಿ, ಕಿರು ಮತ್ತು ಮಧ್ಯಮ ಗಾತ್ರದ ಉದ್ಯಮ ಕ್ಷೇತ್ರಕ್ಕೆ ₹ 809 ಕೋಟಿ ಮತ್ತು ಇತರೆ ಆದ್ಯತಾ ವಲಯಕ್ಕೆ ₹ 276 ಕೋಟಿ ನಿಗದಿಪಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ಎಲ್ಲ ಬ್ಯಾಂಕುಗಳು ಜನರಿಗೆ ಸಾಲ ವಿತರಿಸುವುದರ ಮೂಲಕ ನಿಗದಿಪಡಿಸಿರುವ ಗುರಿಯನ್ನು ಸಾಧಿಸಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಲೀಡ್ ಬ್ಯಾಂಕ್ ಮುಖ್ಯಸ್ಥ ಆರ್.ಕೆ.ಬಾಲಚಂದ್ರ ಮಾತನಾಡಿ, ‘ಪ್ರತಿ ವರ್ಷದಂತೆ ಈ ವರ್ಷವೂ ಲೀಡ್ ಬ್ಯಾಂಕ್ ವತಿಯಿಂದ ಜಿಲ್ಲಾ ವಾರ್ಷಿಕ ಸಾಲ ಯೋಜನೆ ಬಿಡುಗಡೆ ಮಾಡಲಾಗಿದ್ದು, ಈ ಕ್ರಿಯಾ ಯೋಜನೆಯು ನಬಾರ್ಡ್ ಸಂಸ್ಥೆಯು ಇತ್ತೀಚೆಗೆ ಬಿಡುಗಡೆ ಮಾಡಿದ ಸಾಮರ್ಥ್ಯ ಆಧಾರಿತ ಸಾಲ ಯೋಜನೆಯ ನೆರವನ್ನು ಪಡೆದು ಬ್ಯಾಂಕುಗಳ ವಲಯವಾರು ಹಂಚಿಕೆಗಳಿಗನುಸಾರವಾಗಿ ಜೊತೆಗೆ, ಹಿಂದಿನ ವರ್ಷದ ಆಯಾಯ ಬ್ಯಾಂಕುಗಳ ಸಾಧನೆಯನ್ನು ಮಾನದಂಡವಾಗಿಟ್ಟುಕೊಂಡು ವಾರ್ಷಿಕ ಸಾಲ ಯೋಜನೆ ಸಿದ್ಧಪಡಿಸಲಾಗಿದೆ’ ಎಂದರು.

ಲೀಡ್ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕ ರಾಮಚಂದ್ರ ನಾಯಕ್, ಕೆನರಾ ಬ್ಯಾಂಕಿನ ವಲಯ ಪ್ರಬಂಧಕ ವಿ.ಜೆ.ಅರುಣ, ಎಸ್.ಬಿ.ಐ.ನ ಮುಖ್ಯ ಪ್ರಬಂಧಕ ದಿನೇಶ್ ಪೈ, ಕೆ.ಜಿ.ಬಿ.ಯ ವಲಯ ಪ್ರಬಂಧಕ ಅಶೋಕ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT