ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಲದ ಸುಂದರಿ ‘ಡೇಲಿಯ’

ನಾಪೋಕ್ಲು ಭಾಗದ ಹೂದೋಟಗಳಲ್ಲಿ ಕಣ್ಮನ ಸೆಳೆಯುವ ‍‍ಪುಷ್ಪ
Last Updated 5 ಜುಲೈ 2021, 19:30 IST
ಅಕ್ಷರ ಗಾತ್ರ

ನಾಪೋಕ್ಲು: ಬಹುತೇಕ ಮನೆಗಳ ಮುಂದಿನ ಹೂದೋಟದಲ್ಲಿ ಈಗ ಡೇಲಿಯ ಹೂಗಳು ಅರಳಿ ಕಣ್ಮನ ಸೆಳೆಯುತ್ತಿವೆ.

ಲಾಕ್‌ಡೌನ್ ಅವಧಿಯಲ್ಲಿ ಮಹಿಳೆಯರು ಹೋದೋಟ ನಿರ್ವಹಣೆಯತ್ತ ಗಮನ ಹರಿಸಿದ್ದು, ಇದೀಗ ಗ್ರಾಮೀಣ ಭಾಗದ ಮನೆಯಂಗಳದಲ್ಲಿ ನಾನಾ ವರ್ಣದ ಡೇಲಿಯ ಹೂವುಗಳು ಅರಳಿ ನಳನಳಿಸುತ್ತಿವೆ.

ಮುಂಗಾರು ಮಳೆಗೆ ಮರುಹುಟ್ಟು ಪಡೆಯುವ ಡೇಲಿಯ ಗಿಡದ ತುಂಬ ಈಗ ಬಣ್ಣದ ಚಿತ್ತಾರ!. ಹೂಗಳ ಚೆಲುವಿಗೆ ಮನಸೋತವರು ಡೇಲಿಯವನ್ನು ನೆಟ್ಟು ಆರೈಕೆ ಮಾಡುತ್ತಾರೆ. ಹೆಚ್ಚು ಶ್ರಮವಿಲ್ಲದೆ ಬೆಳೆಯಬಹುದಾದ ಹೂವಿನ ಗಿಡಗಳಿವು. ವಿವಿಧ ಗಾತ್ರದಲ್ಲೂ ಕಣ್ಮನಸೆಳೆಯುತ್ತವೆ.

ಡೇಲಿಯದಲ್ಲಿ ಹತ್ತಾರು ತಳಿಗಳಿವೆ, ಒಂದೊಂದರಲ್ಲಿ ಒಂದೊಂದು ಬಣ್ಣ; ಆಕಾರವೂ ವೈವಿಧ್ಯ. ಬೊಗಸೆ ಗಾತ್ರದ ಹೂಗಳೂ ಇವೆ. ಮಳೆಗಾಲದ ಈ ದಿನಗಳಲ್ಲಿ ನಾಪೋಕ್ಲುವಿನ ಬಹುತೇಕ ಮನೆಗಳಲ್ಲಿ ಡೇಲಿಯ ಹೂಗಳು ಅರಳಿ ಕಂಗೊಳಿಸುತ್ತಿವೆ. ಪ್ರತಿಯೊಬ್ಬರ ಮನೆಯಲ್ಲೂ ಕನಿಷ್ಠ 15 ರಿಂದ 20 ವಿಧದ ಡೇಲಿಯ ಗಿಡಗಳಿವೆ.

‘ಡೇಲಿಯ ಗಿಡವನ್ನು ಗೆಡ್ಡೆ ಅಥವಾ ಕಾಂಡಗಳಿಂದ ವೃದ್ಧಿಸಬಹುದು. ಕಾಂಡದಿಂದ ಚಿಗುರಿದ ಗಿಡದಲ್ಲಿ ಉತ್ತಮ ಗಾತ್ರದ ಹೂಗಳನ್ನು ಪಡೆಯಬಹುದು’ ಎಂದು ನಾಪೋಕ್ಲುವಿನ ಗೃಹಿಣಿ ಸುಮಿತ್ರಾ ಹೇಳುತ್ತಾರೆ.

‘ಏಪ್ರಿಲ್-ಮೇ ತಿಂಗಳಲ್ಲಿ ಡೇಲಿಯ ಗೆಡ್ಡೆಗಳನ್ನು ಹಾಕಿದರೆ 2-3 ತಿಂಗಳಲ್ಲಿ ಹೂ ಬಿಡುತ್ತದೆ. ಈ ಗಿಡಗಳನ್ನು ಕುಂಡ-ಮಡಿಗಳಲ್ಲಿ ಬೆಳೆಸಬಹುದು. ಆದರೆ, ಹೂ ಬಿಡುವುದು ನಿಂತ ನಂತರ ಕುಂಡಗಳಿಗೆ ನೀರು ಹಾಕಬಾರದು. ನೀರು ಹಾಕುತ್ತಲೇ ಇದ್ದರೆ ಗೆಡ್ಡೆ ಕೊಳೆತು ಹೋಗುತ್ತದೆ. ಧಾರಾಕಾರ ಮಳೆಗೂ ಗಿಡಗಳು ಕೊಳೆಯುತ್ತವೆ’ ಎಂದು ಅವರು ಸಲಹೆ ನೀಡುತ್ತಾರೆ.

‘ಕುಂಡಕ್ಕಿಂತಲೂ ಭೂಮಿಯಲ್ಲಿ ಬೆಳೆಯುವುದರಿಂದ ಗೆಡ್ಡೆಗಳು ಹೆಚ್ಚು ಬೆಳೆಯಲು ಸಹಕಾರಿಯಾಗುತ್ತವೆ’ ಎಂದು ಸುಮಿತ್ರಾ ಅಭಿಪ್ರಾಯ ಪಡುತ್ತಾರೆ.

‘ಮರಳು ಮಿಶ್ರಿತ ಮಣ್ಣು ಡೇಲಿಯಕ್ಕೆ ಸೂಕ್ತ. ಗಿಡಗಳು ಮೃದುವಾದುದರಿಂದ ಆಧಾರ ಕೊಡುವುದು ಸೂಕ್ತ. ಗಿಡ ಸ್ವಲ್ಪ ಎತ್ತರಕ್ಕೆ ಬೆಳೆದ ನಂತರ ತುದಿ ಕತ್ತರಿಸಿದರೆ ಕಾಂಡಗಳು ವೃದ್ಧಿಯಾಗಿ ಹೆಚ್ಚು ಹೆಚ್ಚು ಹೂಗಳನ್ನು ಬಿಡುತ್ತವೆ. ಮನೆಯಂಗಳಕ್ಕೆ ಅಂದದ ಚಿತ್ತಾರವಾಗಿ ಮಳೆಗಾಲದಲ್ಲಿ ಡೇಲಿಯ ಕಂಗೊಳಿಸುತ್ತದೆ’ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT