ಸರಣಿ ಕಳ್ಳತನ: ಪೊಲೀಸರ ತಪಾಸಣೆ

7

ಸರಣಿ ಕಳ್ಳತನ: ಪೊಲೀಸರ ತಪಾಸಣೆ

Published:
Updated:
ಸೋಮವಾರಪೇಟೆ ಕುವೆಂಪು ಶಾಲೆಯಲ್ಲಿ ಕಳ್ಳ ಹುಡುಕುವ ದೃಶ್ಯ ಸಿ.ಸಿ. ಟಿವಿಯಲ್ಲಿ ದಾಖಲಾಗಿದೆ

ಸೋಮವಾರಪೇಟೆ: ಭಾನುವಾರ ರಾತ್ರಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಮತ್ತೊಮ್ಮೆ ಸರಣಿ ಕಳ್ಳತನ ಆರಂಭಗೊಂಡಿದ್ದು, ಜನರಲ್ಲಿ ಆತಂಕ ಸೃಷ್ಟಿಯಾಗಿದೆ.

ಮಧ್ಯರಾತ್ರಿ ಪಟ್ಟಣಕ್ಕೆ ಸಮೀಪದ ಬಿಟಿಸಿಜಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರ ಕೊಠಡಿಯ ಬೀಗವನ್ನು ಒಡೆದು ಒಳನುಗ್ಗಿದ ಕಳ್ಳರು ಸುಮಾರು 2ಗಂಟೆಗೂ ಹೆಚ್ಚಿನ ಸಮಯ ಹುಡುಕುವುದರಲ್ಲೇ ಕಳೆದಿರುವುದು ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಸಮಯದಲ್ಲಿ, ಅವನು ಫೋನ್‌ನಲ್ಲಿ, ಹೊರಭಾಗದಲ್ಲಿ ಕಾವಲು ಕಾಯುತ್ತಿದ್ದ ಮತ್ತೆರಡು ಕಳ್ಳರೊಂದಿಗೆ ಮಾತನಾಡುತ್ತಾ ಹುಡುಕುತ್ತಿರುವ ದೃಶ್ಯ ಕಂಡುಬಂದಿದೆ. ನಂತರ ಡ್ರಾಯರ್‌ನಲ್ಲಿದ್ದ ₹ 250 ತೆಗೆದುಕೊಂಡು ಪರಾರಿಯಾಗಿದ್ದಾರೆ.

ಬೆರಳಚ್ಚು ತಜ್ಞರು ಬಂದು ಸ್ಥಳಪರಿಶೀಲನೆ ನಡೆಸಿದರು. ವೃತ್ತನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಣ್ಣ ಮತ್ತು ಸಿಬ್ಬಂದಿ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.

ಅದೇ ದಿನದಂದೇ, ಪಟ್ಟಣದ ಸೋಮೇಶ್ವರ ದೇವಾಲಯದ ಹೆಂಚು ತೆಗೆದು ನುಗ್ಗಿದ್ದ ಕಳ್ಳ, ಹುಂಡಿ ತಡಕಾಡಿ ಬರಿಗೈಲಿ ತೆರಳಿದ್ದಾನೆ. ಆಗಾಗ್ಗೆ ದೇವಾಲಯದಲ್ಲಿ ಕಳ್ಳತನವಾಗುತ್ತಿರುವುದರಿಂದ ಬೇಸತ್ತ ಆಡಳಿತ ಮಂಡಳಿಯವರು ವಾರಕ್ಕೊಮ್ಮೆ ಹುಂಡಿ ಹಣವನ್ನು ತೆಗೆಯುತ್ತಿದ್ದಾರೆ. ಅಲ್ಲಿನ ಸಿಸಿ ಕ್ಯಾಮೆರಾವನ್ನು ಬಕೆಟ್‌ನಲ್ಲಿ ಮರೆ ಮಾಚುವ ಮೂಲಕ ಕಳ್ಳತನಕ್ಕೆ ಮುಂದಾಗಿದ್ದಾನೆ.

ಗೌಡಳ್ಳಿ ನವದುರ್ಗಾ ಪರಮೇಶ್ವರಿ ದೇವಾಲಯಕ್ಕೆ ಶನಿವಾರ ರಾತ್ರಿ ಇಬ್ಬರು ಕಳ್ಳರು ನುಗ್ಗಿದ್ದಾರೆ. ದೇವಿಯ ವಿಗ್ರಹದ ಮೇಲಿದ್ದ ಚಿನ್ನದ ಸರ ಹಾಗೂ ಬೆಳ್ಳಿಯ ಸರದೊಂದಿಗೆ ಹುಂಡಿ ಹಣವನ್ನು ಕದ್ದೊಯ್ದಿದ್ದಾರೆ. ಮತ್ತೊಂದು, ಹುಲಿಬಸವೇಶ್ವರ ದೇವಾಲಯಕ್ಕೂ ನುಗ್ಗಿ ಕಾಣಿಕೆ ಹುಂಡಿಯನ್ನೇ ತೆಗೆದುಕೊಂಡು ಹೋಗಿದ್ದಾರೆ. ಸರಣಿ ಕಳ್ಳತನವನ್ನು ಒಂದೇ ತಂಡ ಮಾಡಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಆರು ತಿಂಗಳ ಹಿಂದೆ ಕಳ್ಳರ ತಂಡ ಒಂದೇ ರಾತ್ರಿಯಲ್ಲಿ ಕುಶಾಲನಗರದಿಂದ ಕೊಡ್ಲಿಪೇಟೆವರೆಗೆ ಹತ್ತಾರು ಅಂಗಡಿಗಳ ಬಾಗಿಲು ಮುರಿದು ಹಣವನ್ನು ದೋಚಿದ್ದರು. ಆದರೆ, ಇದುವರೆಗೆ ಕಳ್ಳರ ಬಂಧನವಾಗಿಲ್ಲ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !