ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡಗು ಜಿಲ್ಲೆಯಲ್ಲೂ ವೈದ್ಯಕೀಯ ಸೇವೆ ವ್ಯತ್ಯಯ ಸಾಧ್ಯತೆ

ಹೊರರೋಗಿ ಸೇವೆ ಸ್ಥಗಿತಗೊಳಿಸಲು ಐಎಂಎ ಕೊಡಗು ಘಟಕ ನಿರ್ಧಾರ, ಪ್ರತಿಭಟನಾ ಮೆರವಣಿಗೆ ನಡೆಸಲು ಸಿದ್ಧತೆ
Published 17 ಆಗಸ್ಟ್ 2024, 6:13 IST
Last Updated 17 ಆಗಸ್ಟ್ 2024, 6:13 IST
ಅಕ್ಷರ ಗಾತ್ರ

ಮಡಿಕೇರಿ: ಕೋಲ್ಕತ್ತಾದಲ್ಲಿ ವೈದ್ಯ ವಿದ್ಯಾರ್ಥಿನಿ ಕೊಲೆ ಪ್ರಕರಣ ಖಂಡಿಸಿ ಭಾರತೀಯ ವೈದ್ಯಕೀಯ ಸಂಘವು (ಐಎಂಎ) ದೇಶಾದ್ಯಂತ ಕರೆ ನೀಡಿರುವ ಮುಷ್ಕರಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು ಬೆಂಬಲ ಸೂಚಿಸಿದ್ದು, ಇದಕ್ಕೆ ಭಾರತೀಯ ವೈದ್ಯಕೀಯ ಸಂಘದ ಕೊಡಗು ಜಿಲ್ಲಾ ಘಟಕವೂ ಬೆಂಬಲ ಸೂಚಿಸಿದೆ.

ತುರ್ತು ಸೇವೆಗಳ‌ನ್ನು ಹೊರತುಪಡಿಸಿ ಉಳಿದೆಲ್ಲ ಹೊರರೋಗಿ ಸೇವೆಯನ್ನು ಆ. 17ರಂದು ಬೆಳಿಗ್ಗೆ 8 ಗಂಟೆಯಿಂದ 18ರಂದು ಬೆಳಿಗ್ಗೆ 8 ಗಂಟೆಯವರೆಗೆ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ಹೀಗಾಗಿ, ಹೊರರೋಗಿ ಸೇವೆಯು ಜಿಲ್ಲೆಯಲ್ಲಿ ಬಹುತೇಕ ಸ್ಥಗಿತಗೊಳ್ಳುವುದು ನಿಚ್ಚಳವಾಗಿದೆ.

ಸಂಘದ ಈ ನಿರ್ಧಾರದ ಬೆನ್ನ ಹಿಂದೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಂ.ಸತೀಶ್‌ಕುಮಾರ್ ಅವರು ತಮ್ಮ ವ್ಯಾಪ್ತಿಯ ಎಲ್ಲ ವೈದ್ಯರಿಗೂ ಕೇಂದ್ರ ಸ್ಥಾನ ಬಿಟ್ಟು ಹೋಗದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಎಲ್ಲ ವೈದ್ಯರೂ ಕೇಂದ್ರ ಸ್ಥಾನದಲ್ಲಿದ್ದುಕೊಂಡು ರೋಗಿಗಳಿಗೆ ಯಾವುದೇ ತೊಂದರೆ ಉಂಟಾಗದ ರೀತಿ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.

ಇತ್ತ ಭಾರತೀಯ ವೈದ್ಯಕೀಯ ಸಂಘದ ಕೊಡಗು ಜಿಲ್ಲಾ ಘಟಕವು ಕೇವಲ ಹೊರರೋಗಿ ಸೇವೆಯನ್ನು ಬಂದ್ ಮಾಡುವುದು ಮಾತ್ರವಲ್ಲ, ನಗರದಲ್ಲಿ ಬೃಹತ್ ಪ್ರತಿಭಟನಾ ಜಾಥಾ ನಡೆಸಲೂ ಸಿದ್ಧತೆ ನಡೆಸಿದೆ. ‘ಬೆಳಿಗ್ಗೆ 10 ಗಂಟೆಯ ಹೊತ್ತಿಗೆ ಮಡಿಕೇರಿಯ ಜಿಲ್ಲಾಸ್ಪತ್ರೆಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೂ ಕಾಲ್ನಡಿಗೆ ಜಾಥಾ ನಡೆಸಿ, ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರಿಗೆ ಮನವಿ ಪತ್ರ ಕೊಡಲಾಗುವುದು’ ಎಂದು ಸಂಘದ ಅಧ್ಯಕ್ಷ ಡಾ.ಶ್ಯಾಮ್ ಅಪ್ಪಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು. ಜೊತೆಗೆ, ವೈದ್ಯರ ರಕ್ಷಣೆಗಾಗಿ ನಡೆಸುತ್ತಿರುವ ಈ ಮುಷ್ಕರಕ್ಕೆ ಎಲ್ಲರೂ ಬೆಂಬಲ ಕೊಡಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಆದಾಗ್ಯೂ, ಯಾವುದೇ ಕಾರಣಕ್ಕೂ ತುರ್ತುಸೇವೆಗಳನ್ನು ನಿರಾಕರಿಸುವುದಿಲ್ಲ. ರೋಗಿಗಳ ಜೀವ ಉಳಿಸಲು ಅಗತ್ಯ ಚಿಕಿತ್ಸೆ ಕೊಡಲಾಗುವುದು ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಂ.ಸತೀಶ್‌ಕುಮಾರ್ ಅವರನ್ನು ಸಂಪರ್ಕಿಸಿದಾಗ, ‘ಎಲ್ಲ ವೈದ್ಯರಿಗೂ ಕೇಂದ್ರ ಸ್ಥಾನದಲ್ಲಿರುವಂತೆ ಸ್ಪಷ್ಟವಾಗಿ ಸೂಚಿಸಲಾಗಿದೆ. ಬಂದ ರೋಗಿಗಳಿಗೆಲ್ಲ ಚಿಕಿತ್ಸೆ ನೀಡಲು ತಿಳಿಸಲಾಗಿದೆ’ ಎಂದು ಹೇಳಿದರು.

‘ಪ್ರಜಾವಾಣಿ’ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ.ವಿಶಾಲ್‌ ಅವರನ್ನು ಸಂಪರ್ಕಿಸಿದಾಗ ಅವರು, ‘ಯಾವುದೇ ರೋಗಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ವೈದ್ಯರಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ವಾರದರಜೆ, ರಾತ್ರಿಪಾಳಿ ಇರುವವರು ಮಾತ್ರವೇ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT