ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿಗೆ ಬಂದಿದೆಯೇ ಕಳ್ಳರ ಗ್ಯಾಂಗ್‌?

ಮನೆಯ ಎದುರು ನಿಲುಗಡೆ ಮಾಡಿರುವ ವಾಹನಗಳೇ ಟಾರ್ಗೆಟ್‌
Last Updated 14 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಮಡಿಕೇರಿ: ‘ಮಂಜಿನ ನಗರಿ’ ಮಡಿಕೇರಿಗೆ ಖತರ್‌ನಾಕ್‌ ಕಳ್ಳರ ಗ್ಯಾಂಗ್‌ ಬಂದಿದಿಯೇ? – ಹೀಗೊಂದು ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಕಳೆದ 15 ದಿನಗಳಿಂದ ದೇವಸ್ಥಾನ ಹಾಗೂ ರಸ್ತೆಬದಿ, ಮನೆ ಎದುರು ನಿಲುಗಡೆ ಮಾಡಿದ್ದ ವಾಹನಗಳ ಕಳವು ನಡೆಯುತ್ತಿದ್ದು, ಈ ಅನುಮಾನಕ್ಕೆ ಪುಷ್ಟಿ ನೀಡುತ್ತಿದೆ. ಚಳಿಯಲ್ಲಿ ತಣ್ಣಗೆ ಕಾಲ ಕಳೆಯಬೇಕಿದ್ದ ನಗರದ ಜನರು ನಿತ್ಯವೂ ಆತಂಕದಿಂದಲೇ ದಿನದೂಡುವಂತಾಗಿದೆ.

ಘಟನೆ 1:ನ.30ರಂದು ಇಂದಿರಾ ನಗರದ ಮನು ಅವರು ಕೆಲಸ ಮುಗಿಸಿ, ರಾತ್ರಿ ಮನೆಯ ಎದುರು ತಮ್ಮ ನೆಚ್ಚಿನ ಪಲ್ಸರ್‌ ಬೈಕ್‌ ನಿಲುಗಡೆ ಮಾಡಿ ನಿದ್ರೆಗೆ ಜಾರಿದ್ದರು. ಮರುದಿನ ಬೆಳಿಗ್ಗೆ ನೋಡುವಾಗ ಬೈಕ್‌ ನಾಪತ್ತೆ. ಎಲ್ಲಿ ಹುಡುಕಿದರೂ ಸಿಕ್ಕಿಲ್ಲ. ಕೊನೆಗೆ ನಗರ ಠಾಣೆಗೆ ದೂರು ನೀಡಿದ್ದಾರೆ.

ಘಟನೆ 2:ಡಿ.8ರಂದು ರಾತ್ರಿ ಹೊಸ ಬಡಾವಣೆ (ರಿಮಾಂಡ್‌ ಹೋಮ್‌ ಹಿಂಭಾಗ)ಯಲ್ಲಿ ಕಾರೊಂದು ಕಳವಾಗಿದೆ. ಮನೆಯ ಮಾಲೀಕ ಪ್ರಜ್ವಲ್‌, ಮಧ್ಯರಾತ್ರಿ 12ರ ಸುಮಾರಿಗೆ ರಸ್ತೆಬದಿಯಲ್ಲಿ ಕಾರು ನಿಲುಗಡೆ ಮಾಡಿದ್ದರು. ಆದರೆ, ಬೆಳಿಗ್ಗೆ ನೋಡುವಾಗ ಸ್ಥಳದಲ್ಲಿ ಕಾರೇ ಇರಲಿಲ್ಲ.

ಘಟನೆ 3:ಡಿ.8ರಂದೇ ನಗರದ ಅಧಿದೇವತೆ ಕರವಲೆ ಭಗವತಿ ದೇವಸ್ಥಾನಕ್ಕೆ ನುಗ್ಗಿದ್ದ ಕಳ್ಳರು, ಚಿನ್ನಾಭರಣ, ಹಣ ದೋಚಿ ಪರಾರಿಯಾಗಿದ್ದಾರೆ. ಬೆಳಿಗ್ಗೆ ಅರ್ಚಕರು ಬಂದು ನೋಡುವಾಗಲೇ ಕಳ್ಳರ ಕೈಚಳಕ ಗೊತ್ತಾಗಿದ್ದು. ಎರಡು ಚಿನ್ನದ ಸರ, ಎರಡು ತಾಳಿ, ಗಣಪತಿ ದೇವರಿಗೆ ತೊಡಿಸಿದ್ದ ಬೆಳ್ಳಿಯ ಆಭರಣ, ಬೆಳ್ಳಿಯ ಕೊಡೆ, ಬೆಳ್ಳಿದೀಪ, ದೇವಿಯ ಮಾಲೆ, ಕಾಲುದೀಪಗಳು ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಆಭರಣಗಳು ಕಳ್ಳರ ಪಾಲಾಗಿವೆ. ಕಳ್ಳರು ಕೃತ್ಯವು ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಕೃತ್ಯವನ್ನು ಗಮನಿಸಿದರೆ ದೊಡ್ಡ ತಂಡವೇ ಮಡಿಕೇರಿಗೆ ಬಂದಿದೆ ಎಂಬ ಅನುಮಾನ ನಾಗರಿಕ ವಲಯದಲ್ಲಿ ಬಲವಾಗಿದೆ.

ಭಯ ಬೀಳುತ್ತಿದ್ದಾರೆ ಜನರು:ಹದಿನೈದು ದಿನಗಳಿಂದ ಈಚೆಗೆ ಮಡಿಕೇರಿಯೂ ಸೇರಿದಂತೆ ಕೊಡಗಿನ ವಿವಿಧೆಡೆ ಕಳವು ಘಟನೆಗಳು ನಡೆಯುತ್ತಿವೆ. ಮಡಿಕೇರಿ ಜನರು ಮಾತ್ರ ಬೆಚ್ಚಿ ಬಿದ್ದಿದ್ದಾರೆ. ಕಷ್ಟಪಟ್ಟು ದುಡಿದು ತಂದಿದ್ದ ವಾಹನಗಳು ರಾತ್ರಿ ವೇಳೆ ನಾಪತ್ತೆ ಆಗುತ್ತಿವೆ. ‘ಪೊಲೀಸರು ಏನು ಮಾಡುತ್ತಿದ್ದಾರೆ’ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ತಂಡವು ನಕಲಿ ಕೀ ಬಳಸಿ ಈ ಕೃತ್ಯ ಎಸಗುತ್ತಿರುವ ಶಂಕೆ ವ್ಯಕ್ತವಾಗುತ್ತಿದೆ.

ಬಹುತೇಕ ವಾಹನಗಳು ಹೊರಗೆ:ಮಡಿಕೇರಿಯು ಗುಡ್ಡಗಾಡು ಪ್ರದೇಶ. ಮನೆ ನಿರ್ಮಾಣ ಮಾಡುವುದೇ ಕಷ್ಟ. ಅಂಥದರಲ್ಲಿ ವಾಹನಗಳಿಗೆ ಶೆಡ್‌ ನಿರ್ಮಿಸುವುದು ಕಷ್ಟ. ಹೀಗಾಗಿ, ಬಹುತೇಕರು ಮನೆಯ ಹೊರಗೆ ಕಾರು, ಜೀಪು, ಬೈಕ್‌, ಆಟೊಗಳನ್ನು ಪಾರ್ಕ್‌ ಮಾಡಿರುತ್ತಾರೆ. ಆದರೆ, ಬೆಳಿಗ್ಗೆ ಅವುಗಳು ಸ್ಥಳದಲ್ಲಿ ಇರುತ್ತವೆಯೇ ಇಲ್ಲವೇ ಎಂಬ ಅನುಮಾನ ಮಾಲೀಕರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT