ಸೋಮವಾರಪೇಟೆ: ‘ಅ.1ರಂದು ಅಂತರರಾಷ್ಟ್ರೀಯ ಕಾಫಿ ದಿನಾಚರಣೆ ಪ್ರಯುಕ್ತ ಮೂರು ಸ್ಥಳಗಳಲ್ಲಿ ಸಾರ್ವಜನಿಕರಿಗೆ 3 ಸಾವಿರ ಕಪ್ ಕಾಫಿಯನ್ನು ಉಚಿತವಾಗಿ ವಿತರಿಸಲಾಗುವುದು’ಎಂದು ಕೊಡಗು ಮಹಿಳಾ ಜಾಗೃತಿ ಸಂಸ್ಥೆ ಸಿಇಒ ಅನಿತಾ ನಂದ ತಿಳಿಸಿದರು.
ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೊಡಗು ಮಹಿಳಾ ಜಾಗೃತಿ ಸಂಸ್ಥೆ, ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್, ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್, ಬಿಗ್ ಕಪ್ ಮಡಿಕೇರಿ, ಬೆರಿಸ್ ಅಂಡ್ ಲೀಗ್ಸ್, ಬ್ಲಾಸಮ್ ಅಗ್ರಿ ಶಾವರ್ಸ್ ಮತ್ತು ಕಾಫಿ ಬೋರ್ಡ್ ಆಫ್ ಇಂಡಿಯಾ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ’ಎಂದರು.
‘ದೇಶದ ಆಂತರಿಕವಾಗಿ ಕಾಫಿ ಬಳಕೆ ಕಡಿಮೆ ಇದೆ. ಬಳಕೆದಾರರನ್ನು ಉತ್ತೇಜಿಸಲು ಇಲ್ಲಿನ ಚಿಕ್ಕಬಸಪ್ಪ ಕ್ಲಬ್ ಆವರಣ, ಪೊನ್ನಂಪೇಟೆ ಸಿಐಟಿ ಕಾಲೇಜು ಹಾಗೂ ಕುಟ್ಟದ ಹೆದ್ದಾರಿಯಲ್ಲಿ ಸಂಚರಿಸುವ ಪ್ರವಾಸಿಗರು ಹಾಗೂ ಸ್ಥಳೀಯರಿಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12-30ರವರೆಗೆ ಮೂರು ಸಾವಿರ ಕಪ್ ಕಾಫಿ ಉಚಿತ ವಿತರಿಸಲು ನಿರ್ಧರಿಸಲಾಗಿದೆ’ ಎಂದರು.
‘ಜಿಲ್ಲೆಯಲ್ಲಿ ಕಾಫಿ ಉದ್ಯಮ ಬಿಕ್ಕಟ್ಟಿನಲ್ಲಿದ್ದಾಗ ಮತ್ತು ಕಾಫಿ ಬೆಲೆಗಳು ಅತ್ಯಂತ ಕಡಿಮೆ ಮಟ್ಟದಲ್ಲಿದ್ದಾಗ 2002ರಲ್ಲಿ ಕೊಡಗು ಮಹಿಳಾ ಕಾಫಿ ಜಾಗೃತಿ ಸಂಸ್ಥೆ ರಚನೆಯಾಯಿತು. ಇಂದು ಸಂಸ್ಥೆಯಲ್ಲಿ 400ಕ್ಕೂ ಹೆಚ್ಚು ಮಹಿಳಾ ಕಾಫಿ ಬೆಳೆಗಾರ ಸದಸ್ಯರನ್ನು ಹೊಂದಿದ್ದು, ಲಾಭದಾಯಕವಾಗಿ ಮುಂದುವರೆದಿದೆ’ ಎಂದರು.
‘ಹೊರ ದೇಶಗಳಿಗೆ ರಪ್ತು ಮಾಡುವ ಕಾಫಿ ಮಾರುಕಟ್ಟೆಯಲ್ಲಿ ತಮ್ಮ ಉತ್ಪನ್ನಕ್ಕೆ ಪ್ರಮಾಣೀಕರಣ ಪತ್ರದ ಅವಶ್ಯಕತೆ ಇದ್ದು, ಕಾಫಿಯ ಮಾರುಕಟ್ಟೆಗೆ ಬಹಳ ಮುಖ್ಯವಾಗಿದೆ. ಒಬ್ಬ ಬೆಳೆಗಾರರು ಈ ಪತ್ರವನ್ನು ಪಡೆಯಲು ಕಷ್ಟವಾಗಿರುವುದರಿಂದ ಸಂಸ್ಥೆ ಮೂಲಕ ಬಯೋಟಾದಂತಹ ಎಫ್‌ಪಿಓಗಳಿಗೆ ಬೆಳೆಗಾರರನ್ನು ಸೇರಲು ಪ್ರೋತ್ಸಾಹಿಸುತ್ತಿದ್ದೇವೆ’ ಎಂದರು.
‘ಕಾಫಿ ಉತ್ಪಾದನೆ ಮತ್ತು ಮಾರ್ಕೆಟಿಂಗ್ ಮಾಡುತ್ತಿರುವ ಮಹಿಳೆಯರಿಗೆ ತರಬೇತಿ, ಸಂಪನ್ಮೂಲ ಮತ್ತು ಬೆಂಬಲ ನೀಡಲಾಗುತ್ತಿದೆ. ಕಾಫಿ ಪ್ರಚಾರಕ್ಕೆ ಸಹಾಯ ಮಾಡಲು, ಮಡಿಕೇರಿ ಕಾಫಿ ಬಳಕೆ ಹೆಚ್ಚಿಸುವುದು, ಕೃಷಿ ಕಾರ್ಮಿಕರು ಮತ್ತು ಹೋಟೆಲ್ ಅತಿಥಿಗಳಿಗೆ ಉತ್ತಮ ದಕ್ಷಿಣ ಭಾರತದ ಫಿಲ್ಟರ್ ಕಾಫಿ ಹೇಗೆ ತಯಾರಿಸಬೇಕೆಂಬ ಮಾಹಿತಿ ಕಾರ್ಯಗಾರ ನಡೆಸುತ್ತಿದ್ದೇವೆ. ಕಾಫಿ ಕುಡಿಯುವುದರಿಂದ ಆರೋಗ್ಯ ಪ್ರಯೋಜನ, ಚರ್ಮದ ಆರೈಕೆಗಾಗಿ ಸೌಂದರ್ಯ ವರ್ಧಕ ಉದ್ಯಮದಲ್ಲಿ ಕಾಫಿ ಬಳಸುವುದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ತಿಳಿಸಿದರು.
‘ಕೊಡಗಿನಲ್ಲಿ ಕಾಫಿಯ ಸುಸ್ಥಿರ ಬೇಸಾಯವನ್ನು ಮಾಡಲಾಗುತ್ತಿದೆ. ಜೀವ ವೈವಿಧ್ಯ ಕಾಪಾಡಿಕೊಳ್ಳಲು ಮತ್ತು ನಮ್ಮ ಪರಿಸರ ವ್ಯವಸ್ಥೆ ಬೆಂಬಲಿಸಲು ಸಸ್ಯ ಮತ್ತು ಪ್ರಾಣಿಗಳೆರಡನ್ನೂ ಸಂರಕ್ಷಿಸುತ್ತೇವೆ. ಕಾಫಿಗೆ ಪೂರಕವಾಗಿ ಜೇನು ಸಾಕಾಣಿಕೆ ಪರಿಸರ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಸಸ್ಯಗಳು ಮತ್ತು ಬೆಳೆಗಳ ಪರಾಗ ಸ್ಪರ್ಶಕ್ಕೆ ಕೊಡುಗೆ ನೀಡುತ್ತದೆ. ಪೊನ್ನಂಪೇಟೆ ಅರಣ್ಯ ಕಾಲೇಜಿನ ಸಹಾಯದಿಂದ ಜೇನು ಸಾಕಣೆ ತರಬೇತಿ ನಡೆಸಲಾಗುತ್ತಿದೆ’ ಎಂದರು.
‘ಮಹಿಳಾ ಕಾಫಿ ಬೆಳೆಗಾರರು ಉತ್ತಮ ಕಾಫಿ ಬೆಳೆಸಲು ಮತ್ತು ಮಾಹಿತಿಗಾಗಿ ನಮ್ಮ ಸಂಸ್ಥೆಯೊಂದಿಗೆ ಸೇರಿಕೊಳ್ಳಬಹುದು ಎಂದು ತಿಳಿಸಿದರು. ಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ರಾಣಿ ನರೇಂದ್ರ, ನಿರ್ದೇಶಕಿ ಅನುರಾಧ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.