ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿ ದಾಳಿ: ಹೆಚ್ಚಿದ ಜನರ ಆಕ್ರೋಶ

ಜೀವ ರಕ್ಷಣೆಗಾಗಿ ಕೋವಿ ಬಳಕೆಗೆ ಅವಕಾಶ ನೀಡಿ: ಬ್ರಿಜೇಶ್ ಕಾಳಪ್ಪ ಒತ್ತಾಯ
Last Updated 9 ಮಾರ್ಚ್ 2021, 11:23 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಹುಲಿ ದಾಳಿ ನಿರಂತರವಾಗಿ ಮುಂದುವರಿದಿದ್ದು, 15 ದಿನಗಳ ಅಂತರದಲ್ಲಿ ಮೂವರು ಬಲಿಯಾಗಿದ್ದಾರೆ. ನರಭಕ್ಷಕ ಹುಲಿಯು ದಕ್ಷಿಣ ಕೊಡಗು ಭಾಗದಲ್ಲಿ ಸಂಚರಿಸುತ್ತ ಜಾನುವಾರಗಳ ಮೇಲೂ ದಾಳಿ ಮಾಡುತ್ತಿದೆ. ಇದರಿಂದ ಜಿಲ್ಲೆಯ ಕಾಫಿ ಬೆಳೆಗಾರರು, ಕಾರ್ಮಿಕರ ಆಕ್ರೋಶದ ಕಟ್ಟೆ ಒಡೆದಿದ್ದು, ಶ್ರೀಮಂಗಲದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಅರಣ್ಯ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಗ್ರಾಮಸ್ಥರು ಧಿಕ್ಕಾರ ಕೂಗಿದರು.

ವನ್ಯಜೀವಿ ದಾಳಿ ಸಂದರ್ಭ ನಮ್ಮ ಜೀವವನ್ನು ನಾವು ರಕ್ಷಣೆ ಮಾಡಿಕೊಳ್ಳಲು ಕೋವಿ ಬಳಸಲು ಅವಕಾಶ ನೀಡಬೇಕೆಂದು ಎಐಸಿಸಿ ವಕ್ತಾರ ಹಾಗೂ ಸುಪ್ರೀಂಕೋರ್ಟ್ ವಕೀಲ ಬ್ರಿಜೇಶ್ ಕಾಳಪ್ಪ ಒತ್ತಾಯಿಸಿದ್ದಾರೆ.

ಪ್ರಾಣ ಭಯದ ಸಂದರ್ಭ ಸ್ವಯಂ ರಕ್ಷಣೆಗೆ ಶಸ್ತ್ರಾಸ್ತ್ರ ಬಳಸಲು ಕಾನೂನಿನಲ್ಲಿ ಅವಕಾಶವಿದೆ. ಕೊಡಗಿನ ಮನೆಗಳಲ್ಲಿ ವಿಶೇಷ ಹಕ್ಕಾಗಿ ಕೋವಿಗಳಿದ್ದರೂ ಇದನ್ನು ಬಳಸದಂತೆ ಅರಣ್ಯ ಇಲಾಖೆ ಅಡ್ಡಿ ಪಡಿಸುವುದು ಸರಿಯಾದ ಕ್ರಮವಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೂರು ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡಿರುವ ಹುಲಿಯನ್ನು ಅರಣ್ಯ ಇಲಾಖೆ ಮೊದಲು ಸೆರೆ ಹಿಡಿಯಬೇಕು, ಸೆರೆ ಹಿಡಿಯಲು ಸಾಧ್ಯವಾಗಿಲ್ಲವೆಂದಾದಲ್ಲಿ ಆತ್ಮ ರಕ್ಷಣೆಗಾಗಿ ಕೋವಿ ಬಳಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ.

‘ಜವಾಬ್ದಾರಿ ಅರಣ್ಯಾಧಿಕಾರಿಗಳ ಮೇಲಿದೆ’:
ವನ್ಯಜೀವಿಗಳ ಜೀವದಂತೆ ಮಾನವ ಜೀವಕ್ಕೂ ಬೆಲೆ ಇದೆ, ಪ್ರಾಣಿಗಳ ಜೀವ ಉಳಿಸುವ ಕರ್ತವ್ಯದಂತೆ ಮಾನವ ಜೀವ ಉಳಿಸುವ ಜವಾಬ್ದಾರಿಯನ್ನು ಕೂಡ ಅರಣ್ಯ ಅಧಿಕಾರಿಗಳು ಹೊರಬೇಕಾಗುತ್ತದೆ ಎಂದು ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರದ ಆದೇಶಕ್ಕಾಗಿ ಎದುರು ನೋಡದೆ ಉಪಟಳ ನೀಡುವ ವನ್ಯಜೀವಿಗಳ ವಿರುದ್ಧ ಅಧಿಕಾರಿಗಳೇ ಖುದ್ದು ಕಾನೂನಿನ ಚೌಕಟ್ಟಿನಡಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಜನಪ್ರತಿನಿಧಿಗಳು ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಅಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆದು ಪರಿಹಾರೋಪಾಯಗಳನ್ನು ಕಂಡು ಕೊಳ್ಳಬೇಕಾಗಿದೆ. ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹುಲಿಗಳ ಹಾವಳಿ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಹುಡುಕಲು ಅರಣ್ಯ ಅಧಿಕಾರಿಗಳು ಉನ್ನತ ಮಟ್ಟದ ಅಧ್ಯಯನ ನಡೆಸಬೇಕಾಗುತ್ತದೆ. ಆ ಮೂಲಕ ಸಮಸ್ಯೆಗೆ ಪರಿಹಾರ ಸೂಚಿಸಬೇಕೆ ಹೊರತು ಹುಲಿ ಸೆರೆ ಹಿಡಿಯುವುದು ಅಥವಾ ಕೊಲ್ಲುವುದೊಂದೇ ಪರಿಹಾರವಾಗಬಾರದು. ಇಂದು ಒಂದು ಹುಲಿಯನ್ನು ಸೆರೆ ಹಿಡಿದರೆ ನಾಳೆ ಮತ್ತೊಂದು ಹುಲಿ ಬರಬಹುದು. ಅವೈಜ್ಞಾನಿಕ ಕ್ರಮಗಳು ಶಾಶ್ವತ ಪರಿಹಾರವಾಗದು ಎಂದು ಅಭಿಪ್ರಾಯಪಟ್ಟಿರುವ ಶಿವಕುಮಾರ್ ನಾಣಯ್ಯ, ಮೊದಲು ಹುಲಿ ದಾಳಿಗೆ ಕಾರಣ ಏನು ಎನ್ನುವುದನ್ನು ಕಂಡುಕೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.

ಕೊಡಗಿನಲ್ಲಿ ನಡೆಯುತ್ತಿರುವ ವನ್ಯಜೀವಿ ದಾಳಿಯ ಬಗ್ಗೆ ಸರ್ಕಾರಕ್ಕೆ ಮಾಹಿತಿಯಿದೆ. ಆದರೆ ಪರಿಹಾರವನ್ನು ಅಧಿಕಾರಿಗಳೇ ಸೂಚಿಸಿ ಅನುಮೋದನೆ ಪಡೆಯಬೇಕೆ ಹೊರತು ಸರ್ಕಾರವನ್ನು ದೂಷಿಸಿ ಯಾವುದೇ ಪ್ರಯೋಜನವಿಲ್ಲವೆಂದು ಅವರು ಹೇಳಿದ್ದಾರೆ

ಶಾಸಕರ ರಾಜೀನಾಮೆಗೆ ಕೊರವೇ ಒತ್ತಾಯ:
ದಕ್ಷಿಣ ಕೊಡಗಿನಲ್ಲಿ ಹುಲಿಯ ಅಟ್ಟಹಾಸಕ್ಕೆ ಮೂರನೇ ಜೀವ ಬಲಿಯಾಗಲು ಸರ್ಕಾರದ ನಿರ್ಲಕ್ಷ್ಯ ಮತ್ತು ಜನಪ್ರತಿನಿಧಿಗಳ ಅಸಡ್ಡೆಯೇ ಕಾರಣವೆಂದು ಆರೋಪಿಸಿರುವ ಕೊಡಗು ರಕ್ಷಣಾ ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ, ಅರಣ್ಯ ಸಚಿವರು ಹಾಗೂ ಜಿಲ್ಲೆಯ ಶಾಸಕರುಗಳು ಘಟನೆಯ ಹೊಣೆ ಹೊತ್ತು ತಕ್ಷಣ ತಮ್ಮ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಫೆಬ್ರುವರಿಯಲ್ಲಿ ಮೊದಲ ಜೀವ ಬಲಿಯಾದಾಗಲೇ ಅರಣ್ಯ ಅಧಿಕಾರಿಗಳು ಎಚ್ಚೆತ್ತುಕೊಂಡು ಹುಲಿಯನ್ನು ಸೆರೆ ಹಿಡಿದಿದ್ದರೆ ಅಥವಾ ಕೊಂದು ಹಾಕಿದ್ದರೆ ಪರಿಸ್ಥಿತಿ ಕೈಮೀರುತ್ತಿರಲಿಲ್ಲವೆಂದು ಹೇಳಿದ್ದಾರೆ.

ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿ ಹುಲಿ ಸೆರೆಗೆ ಸೂಕ್ತ ಕ್ರಮ ಕೈಗೊಳ್ಳದ ಅರಣ್ಯ ಸಚಿವರು ಹಾಗೂ ಜಿಲ್ಲೆಯ ಶಾಸಕರು ಅಸಮರ್ಥರು ಎನ್ನುವುದು ಈಗಾಗಲೇ ಸಾಬೀತಾಗಿದೆ ಎಂದು ಆರೋಪಿಸಿರುವ ಪವನ್ ಪೆಮ್ಮಯ್ಯ, ಜನರ ವಿಶ್ವಾಸ ಕಳೆದುಕೊಂಡಿರುವ ಇವರುಗಳು ತಕ್ಷಣ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಕೇವಲ ಮೂರು ವಾರಗಳಲ್ಲಿ ಮೂವರು ಅಮಾಯಕರು ಹಾಗೂ ಹತ್ತಾರು ಹಸುಗಳು ಹುಲಿ ದಾಳಿಯಿಂದ ಮೃತಪಟ್ಟಿದ್ದರೂ ಈ ಘಟನೆಯನ್ನು ರಾಜ್ಯ ಅರಣ್ಯ ಸಚಿವರು ಗಂಭೀರವಾಗಿ ಪರಿಗಣಿಸಿಲ್ಲ. ಜಿಲ್ಲೆಗೆ ಆಗಮಿಸಿ, ವಿಶೇಷ ಸಭೆ ನಡೆಸುವ ಆಸಕ್ತಿಯನ್ನೇ ತೋರದ ಅವರು, ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಲ್ಲಿಯೂ ವಿಫಲರಾಗಿದ್ದಾರೆ. ಶಾಸಕರುಗಳು ತಮ್ಮದೇ ಸರ್ಕಾರವಿದ್ದರೂ ಹುಲಿ ದಾಳಿ ವಿರುದ್ಧ ಧ್ವನಿ ಎತ್ತುತ್ತಿಲ್ಲ. ಕೇವಲ ಸ್ವಜನ ಪಕ್ಷಪಾತ ಮತ್ತು ಗುತ್ತಿಗೆ ವ್ಯವಹಾರದಲ್ಲೇ ಕಾಲಹರಣ ಮಾಡುತ್ತಿದ್ದು, ಜಿಲ್ಲೆಯ ಜನರ ಹಿತವನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ದಕ್ಷಿಣ ಕೊಡಗಿನಲ್ಲಿ ನಡೆಯುತ್ತಿರುವ ಗ್ರಾಮಸ್ಥರ ಪ್ರತಿಭಟನೆಗೆ ಕೊಡಗು ರಕ್ಷಣಾ ವೇದಿಕೆ ಸಂಪೂರ್ಣ ಬೆಂಬಲ ಸೂಚಿಸಲಿದೆ. ವನ್ಯಜೀವಿಗಳ ದಾಳಿಯನ್ನು ನಿಯಂತ್ರಿಸದಿದ್ದಲ್ಲಿ ವೇದಿಕೆ ವತಿಯಿಂದ ಮಡಿಕೇರಿ ಅರಣ್ಯ ಭವನದ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕಳೆದ ಹತ್ತು ದಿನಗಳಿಂದ ಹುಲಿ ಸೆರೆ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಕೈಗೊಂಡಿದ್ದರೂ ಇದೊಂದು ನಾಟಕೀಯ ಬೆಳವಣಿಗೆಯಂತೆ ಗೋಚರಿಸುತ್ತಿದೆ. ಕೇವಲ ಗ್ರಾಮಸ್ಥರನ್ನು ಸಮಾಧಾನಪಡಿಸುವ ತಂತ್ರ ಇದಾಗಿದ್ದು, ಹುಲಿಯನ್ನು ಸೆರೆ ಹಿಡಿಯುವ ಯಾವುದೇ ಆಸಕ್ತಿ ಅರಣ್ಯ ಅಧಿಕಾರಿಗಳಿಗೆ ಇಲ್ಲ. ಜನರ ಜೀವದ ಬೆಲೆ ತಿಳಿದಿದ್ದರೆ ಮೊದಲ ಜೀವ ಬಲಿಯಾದಾಗಲೇ ಹುಲಿಯನ್ನು ಹಿಡಿಯುತ್ತಿದ್ದರು ಅಥವಾ ಕೊಲ್ಲುತ್ತಿದ್ದರು. ಆದರೆ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಪವನ್ ಪೆಮ್ಮಯ್ಯ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT