ಅಬ್ಬಾ... ಅಂತೂ ಮುಗಿಯಿತು, ಜನರು ನಿರಾಳ

7
ಹಲವು ನಿರ್ಬಂಧ, ಮುಸ್ಲಿಂ ಮುಖಂಡರ ಅಸಮಾಧಾನ, 20 ನಿಮಿಷದಲ್ಲಿ ಕಾರ್ಯಕ್ರಮ ಮುಕ್ತಾಯ

ಅಬ್ಬಾ... ಅಂತೂ ಮುಗಿಯಿತು, ಜನರು ನಿರಾಳ

Published:
Updated:
Deccan Herald

ಮಡಿಕೇರಿ: ನವೆಂಬರ್‌ ಬಂದರೆ ಸಾಕು ಕೊಡಗಿನಲ್ಲಿ ಟಿಪ್ಪು ಜಯಂತಿಯದ್ದೇ ಸದ್ದು. ಈ ಬಾರಿಯೂ ಪರ– ವಿರೋಧ ಹೇಳಿಕೆಗಳು ಸದ್ದು ಮಾಡಿದ್ದವು. ಈ ಎಲ್ಲ ಪ್ರತಿರೋಧಗಳ ನಡುವೆಯೂ ಜಿಲ್ಲಾಡಳಿತ ಶನಿವಾರ ಮೂರು ಸ್ಥಳಗಳಲ್ಲಿ ಟಿಪ್ಪು ಜಯಂತಿಯನ್ನು ಯಶಸ್ವಿಯಾಗಿ ನಡೆಸಿತು.

ಕೊಡಗಿನಲ್ಲಿ ಒಂದು ವಾರದಿಂದ ಆತಂಕ, ಗೊಂದಲ ಮನೆ ಮಾಡಿತ್ತು. ಯಶಸ್ವಿಯಾಗಿ ಕಾರ್ಯಕ್ರಮ ಮುಕ್ತಾಯಗೊಳ್ಳುವ ಮೂಲಕ ಸಾರ್ವಜನಿಕರು, ವ್ಯಾಪಾರಸ್ಥರು, ಹೋಟೆಲ್‌ ಮಾಲೀಕರು ನಿರಾಳರಾದರು.

ಭೂಕುಸಿತದ ನೋವು ಜಿಲ್ಲೆಯ ಜನರಲ್ಲಿ ಇನ್ನೂ ಮಾಸಿಲ್ಲ. ಅದರ ನಡುವೆಯೇ ಟಿಪ್ಪು ಜಯಂತಿ ಬಂದಿದ್ದು ಎಲ್ಲರಲ್ಲೂ ಆತಂಕವನ್ನು ಹೆಚ್ಚು ಮಾಡಿತ್ತು. ನಾಲ್ಕು ಗೋಡೆಗಳ ನಡುವೆ ಜಯಂತಿ ಮುಗಿಯುತ್ತಿದ್ದಂತೆಯೇ ಜನರೂ ನೆಮ್ಮದಿಯ ನಿಟ್ಟುಸಿರು ಬಿಟ್ಟರು.   

ಮಡಿಕೇರಿಯ ಹಳೇ ಕೋಟೆ ಆವರಣದಲ್ಲಿ ಪೊಲೀಸ್‌ ಸರ್ಪಗಾವಲು ನಡುವೆ 25 ನಿಮಿಷದಲ್ಲಿ ಕಾರ್ಯಕ್ರಮ ಮುಕ್ತಾಯಗೊಂಡಿತು. ನಿಗದಿತ ಸಮಯಕ್ಕೆ ಸರಿಯಾಗಿ ಅಧ್ಯಕ್ಷತೆ ವಹಿಸಬೇಕಿದ್ದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌, ವಿಧಾನ ಪರಿಷತ್‌ ಸದಸ್ಯ ಸುನಿಲ್‌ ಸುಬ್ರಮಣಿ ಅವರು ಕಪ್ಪುಶರ್ಟ್‌ ಧರಿಸಿ ವೇದಿಕೆ ಮೇಲೇರಿದರು. ಅವರನ್ನು ಬಿಜೆಪಿ ನಗರಸಭೆ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಹಿಂಬಾಲಿಸಿದರು.

ಸ್ವಾಗತಕ್ಕೂ ಮೊದಲೇ ಬಿಜೆಪಿ ಮುಖಂಡರು ಜಯಂತಿಗೆ ಆಕ್ಷೇಪ ವ್ಯಕ್ತಪಡಿಸಿದರು. ಆಗ ಗೊಂದಲ ಏರ್ಪಟ್ಟಿತ್ತು. ಸುನಿಲ್‌ ಸುಬ್ರಮಣಿ ವಿರೋಧ ವ್ಯಕ್ತಪಡಿಸಿ, ಸ್ವಾಗತ ಮಾಡುವುದು ಬೇಡವೆಂದು ಪಟ್ಟು ಹಿಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ. ಚಂದ್ರಕಲಾ ಅವರು ವೇದಿಕೆ ಬಳಿಗೆ ತೆರಳಿ, ಇದು ಸರ್ಕಾರಿ ಕಾರ್ಯಕ್ರಮ ಶಿಷ್ಟಾಚಾರದಂತೆ ನಡೆಯಬೇಕು ಎಂದು ಪಟ್ಟುಹಿಡಿದರು.

ಆಗ ಬಿಜೆಪಿ ಹಾಗೂ ಕಾಂಗ್ರೆಸ್‌ ಸದಸ್ಯರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆಯಿತು. ಬಳಿಕ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ. ಪನ್ನೇಕರ್‌ ಮನವೊಲಿಸುವ ಪ್ರಯತ್ನ ಮಾಡಿದರು. ಆದರೂ ಆಕ್ರೋಶ ತಣ್ಣಗಾಗಲಿಲ್ಲ. ತಕ್ಷಣವೇ ಬಂಧಿಸಿ ಕಾರ್ಯಕ್ರಮ ಮುಗಿಸಲಾಯಿತು.

ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರು ಉದ್ಘಾಟಿಸಿದರು. ಸ್ವಾಗತ, ಉಪನ್ಯಾಸ, ವಂದನಾರ್ಪಣೆ ಹಾಗೂ ಟಿಪ್ಪು ಭಾವಚಿತ್ರಕ್ಕೆ ಪುಷ್ಪಾರ್ಚನೆಗೆ ಕಾರ್ಯಕ್ರಮ ಸೀಮಿತವಾಯಿತು. ಉದ್ಘಾಟನಾ ಭಾಷಣ, ಅಧ್ಯಕ್ಷೀಯ ಭಾಷಣ ಯಾವುದೂ ಇರಲಿಲ್ಲ. ಅಧ್ಯಕ್ಷೀಯ ಭಾಷಣ ಮಾಡುವಂತೆ ಕಾವೇರಮ್ಮ ಅವರನ್ನು ಜಿಲ್ಲಾಡಳಿತ ಕೇಳಿಕೊಂಡರೂ ಅವರು ಹಿಂದೇಟು ಹಾಕಿದರು. ಕಾರ್ಯಕ್ರಮ ಮುಗಿದ ಕೂಡಲೇ ಟಿಪ್ಪುವ ಭಾವಚಿತ್ರ, ಬ್ಯಾನರ್‌ ಕೊಠಡಿ ಸೇರಿದವು. ಎಲ್ಲವೂ ಕ್ಷಣಾರ್ಧದಲ್ಲಿ ಮುಗಿಯಿತು. ಎಲ್ಲರಲ್ಲೂ ಆತಂಕ ಇತ್ತು.

ಮುಸ್ಲಿಂ ಮುಖಂಡರ ಆಕ್ರೋಶ: ‘ಜನರ ನಿರೀಕ್ಷೆಗೆ ತಕ್ಕಂತೆ ಕಾರ್ಯಕ್ರಮ ನಡೆದಿಲ್ಲ. ಉದ್ಘಾಟನಾ ಭಾಷಣವೂ ಇರಲಿಲ್ಲ. ಆದರೆ, ಈ ಬಾರಿ ಬಂದ್‌ ಕರೆ ಸಂಪೂರ್ಣ ವಿಫಲವಾಗಿದೆ. ಜಿಲ್ಲೆಯ ಜನರು ಬಂದ್‌ಗೆ ಸಹಕಾರ ನೀಡದೇ ಪರೋಕ್ಷವಾಗಿ ಜಯಂತಿಗ ಬೆಂಬಲಿಸಿದ್ದಾರೆ ಎಂಬುದು ಹೊಸ ಬೆಳವಣಿಗೆ. ಪ್ರಕ್ಷುಬ್ಧ ವಾತಾವರಣ ಸೃಷ್ಟಿಸಿ ಜಯಂತಿಗೆ ಅಡ್ಡಿ ಮಾಡುವುದು ಸಲ್ಲದು’ ಎಂದು ನಗರಸಭೆ ಸದಸ್ಯ ಅಮಿನ್‌ ಮೊಹಿಸಿನ್‌ ಹೇಳಿದರು. 

* ಸಂತೋಷದಿಂದ ಜಯಂತಿ ನಡೆಸಲು ಅವಕಾಶ ಕಲ್ಪಿಸಬೇಕಿತ್ತು. ಅದಕ್ಕೆ ಬಿಜೆಪಿ ಮುಖಂಡರು ಅನುವು ಮಾಡುತ್ತಿಲ್ಲ.
– ಅಮಿನ್‌ ಮೊಹಿಸಿನ್‌, ಸದಸ್ಯ, ನಗರಸಭೆ 

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !