ನಾಪೋಕ್ಲು: ಕೊಡಗು ಜಿಲ್ಲೆಯಲ್ಲಿ ಮಳೆಗಾಲದ ಆರಂಭದಿಂದ ಅಂತ್ಯದವರೆಗೂ ಸಾಲು ಸಾಲು ಹಬ್ಬಗಳು ಬರುತ್ತವೆ. ಕಾಫಿನಾಡಿನಲ್ಲೆ ವಿಶೇಷವಾಗಿ ಆಚರಿಸಲಾಗುವ ಈ ಹಬ್ಬಗಳು ವೈವಿಧ್ಯಮಯದಿಂದಲೂ ಕೂಡಿವೆ. ಮಳೆಗಾಲದ ಅಂತ್ಯದಲ್ಲೂ ಕೊಡಗಿನಲ್ಲಿ ನಾನಾ ಜಾತ್ರೆಗಳು ಹಾಗೂ ಆಚರಣೆಗಳು ನಡೆಯುತ್ತವೆ. ಅಬ್ಬರದ ಮಳೆ ಮುಗಿದ ಬಳಿಕ ಜನರು ವಿವಿಧ ಉತ್ಸವಗಳಲ್ಲಿ ಭಕ್ತಿಭಾವದಲ್ಲಿ ಮಿಂದೇಳುತ್ತಾರೆ.
ಅಕ್ಟೋಬರ್ ತಿಂಗಳ ಮಧ್ಯಭಾಗ ಸಾಮಾನ್ಯವಾಗಿ ಮಳೆ ಕಡಿಮೆಯಾಗುವ ಅವಧಿ. ಕಾವೇರಿ ತೀರ್ಥೋದ್ಭವದ ತುಲಾಸಂಕ್ರಮಣದೊಂದಿಗೆ ಮಳೆಗಾಲ ಮುಗಿಯುತ್ತದೆ. ಚಳಿಗಾಲ ತೆರೆದುಕೊಳ್ಳುವುದಕ್ಕೆ ಕೆಲವೇ ದಿನಗಳಿರುವಂತೆ ಬರುವ ಈ ಹಬ್ಬವನ್ನು ಕೊಡಗಿನಲ್ಲಿ ವಿಶೇಷ ಸಡಗರದಿಂದ ಆಚರಿಸಲಾಗುತ್ತದೆ. ಅಬ್ಬರದ ಮಳೆ ಇನ್ನು ಬರುವುದಿಲ್ಲ ಎಂಬ ಭಾವನೆಯೊಂದಿಗೆ ತುಲಾಸಂಕ್ರಮಣ ಆಚರಿಸಿದ ಬಳಿಕ ಕೃಷಿ ಚಟುವಟಿಕೆಗಳು ಚುರುಕುಗೊಳ್ಳುತ್ತವೆ. ಆರ್ಥಿಕವಾಗಿ ಸಬಲರಾಗುವ ದಿನಗಳತ್ತ ಕೃಷಿಕರು ಅಡಿ ಇಡುತ್ತಾರೆ.
ಕಾವೇರಿ ಮಾತೆ ತನ್ನ ಉಗಮಸ್ಥಾನವಾದ ತಲಕಾವೇರಿಯಲ್ಲಿ ವರ್ಷಕ್ಕೊಮ್ಮೆ ತೀರ್ಥರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ ಎಂಬ ನಂಬಿಕೆ ಸಾವಿರಾರು ಜನರನ್ನು ಅಲ್ಲಿಗೆ ಸೆಳೆಯುತ್ತದೆ. ಅಂದು ಕಾವೇರಿ ನದಿಯಲ್ಲಿ ಅದರಲ್ಲೂ ತಲಕಾವೇರಿಯಲ್ಲಿ ಮಿಂದರೆ ಎಲ್ಲ ಪಾಪಗಳೂ ಪರಿಹಾರವಾಗಿ ಒಳ್ಳೆಯದಾಗುತ್ತದೆ ಎಂಬುದು ಪರಂಪರಾಗತವಾಗಿ ಬಂದ ನಂಬಿಕೆ.
ತುಲಾಸಂಕ್ರಮಣದ ದಿನ ಅಂದರೆ ಅಕ್ಟೋಬರ್ 18ರಂದು ಜರುಗುವ ಆ ಘಟನೆಯನ್ನು ಕಾವೇರಿ ತೀರ್ಥೋದ್ಭವ ಎಂದು ಕರೆಯಲಾಗುತ್ತದೆ. ಇದು ಕಾವೇರಿ ತುಲಾಸಂಕ್ರಮಣ. ತುಲಾಸಂಕ್ರಮಣದ ದಿನ ತುಲಾರಾಶಿಯಲ್ಲಿ ಸೂರ್ಯ ಪ್ರವೇಶಿಸುವ ಘಳಿಗೆಗೆ ಸರಿಯಾಗಿ ತಲಕಾವೇರಿಯ ಬ್ರಹ್ಮ ಕುಂಡಿಕೆಯಲ್ಲಿ ಕಾವೇರಿ ಮಾತೆ ಉದ್ಭವಿಸಿ ತೀರ್ಥವಾಗಿ ಹರಿದು ಬರುತ್ತಾಳೆ ಎಂಬುದು ಪ್ರಚಲಿತ ನಂಬಿಕೆ.
ಜನರು ನಿರೀಕ್ಷಿಸುವ ಆ ಅಮೃತ ಘಳಿಗೆ ಸಾಮಾನ್ಯವಾಗಿ ಬರುವುದು ರಾತ್ರಿ ವೇಳೆ. ಮಧ್ಯರಾತ್ರಿ ಕಳೆದ ನಂತರ ಘಟಿಸಿರುವ ಅನೇಕ ಸಂದರ್ಭಗಳೂ ಇವೆ. ಆಗೊಮ್ಮೆ, ಈಗೊಮ್ಮೆ ಎಂಬಂತೆ ಹಗಲು ಜರುಗುವ ತುಲಾ ಸಂಕ್ರಮಣ ಹಬ್ಬದ ವೇಳೆಗೆ ಮುಂಗಾರಿನ ಆರ್ಭಟ ಮುಗಿಯುತ್ತಾ ಬಂದಿರುತ್ತದೆ. ಆದರೂ, ಸಂಜೆಯಾಯಿತೆಂದರೆ ತಲಕಾವೇರಿಯಲ್ಲಿ ವಿಪರೀತ ಮಂಜು ಮತ್ತು ಚಳಿ ಆ ದಿನ ಮೂಡುತ್ತದೆ. ಜೋರು ಮಳೆ ಬಂದು ಫಜೀತಿಯೂ ಆಗಿದ್ದುಂಟು.
ತೀರ್ಥೋದ್ಭವ ಮುಹೂರ್ತಕ್ಕೆ ಸ್ವಲ್ಪ ಸಮಯದ ಮೊದಲು ಪುರೋಹಿತರು ಮಂತ್ರ ಉಚ್ಛರಿಸುತ್ತಾ ಆವಾಹನೆಗಾಗಿ ಕುಂಕುಮ ಪುಷ್ಪ ಮೊದಲಾದವುಗಳನ್ನು ಕುಂಡಿಕೆಗೆ ಅರ್ಪಿಸತೊಡಗುತ್ತಾರೆ. ನಂತರ, ತೀರ್ಥೋದ್ಭವವಾಯಿತು ಎಂದು ಘೋಷಿಸುತ್ತಾರೆ. ಆಗ ಪವಿತ್ರ ತೀರ್ಥವನ್ನು ಪಡೆದುಕೊಳ್ಳಲು ಜನರು ಮುಗಿ ಬೀಳುತ್ತಾರೆ.
ಕಾವೇರಿ ತೀರ್ಥೋದ್ಭವದ ಮರುದಿನ ಬಲಮುರಿಯಲ್ಲಿ ಮತ್ತೊಂದು ಜಾತ್ರೆ ನಡೆಯುತ್ತದೆ. ಕಣ್ಣೇಶ್ವರ ಹಾಗೂ ಅಗಸ್ತ್ಯೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ಜರುಗಲಿದೆ. ಜಾತ್ರೆಯ ಮುನ್ನಾ ದಿನದಿಂದಲೇ ಭಾಗಮಂಡಲ - ತಲಕಾವೇರಿಗಳಲ್ಲಿ ಭಕ್ತರು ಜಮಾಯಿಸಿದ್ದು, ಇಡೀ ತಿಂಗಳೂ ಯಾತ್ರಾರ್ಥಿಗಳ ದಟ್ಟಣೆಯೇ ಇಲ್ಲಿರುತ್ತದೆ.
ಕರ್ನಾಟಕದ ವಿವಿಧ ಭಾಗಗಳಲ್ಲದೆ ನೆರೆಯ ತಮಿಳುನಾಡು, ಕೇರಳ ಹಾಗೂ ಆಂಧ್ರ ಪ್ರದೇಶದ ಮೂಲೆಮೂಲೆಗಳಿಂದಲೂ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ ಎನ್ನುವುದು ವಿಶೇಷ.
ಭಾಗಮಂಡಲದಲ್ಲಿ ಧಾರ್ಮಿಕ ಆಚರಣೆಗಳು
ಕಾವೇರಿ ತೀಥೋದ್ಭವಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವಂತೆ ತುಲಾಸಂಕ್ರಮಣದ ಪ್ರಯುಕ್ತ ಕಟ್ಟು ವಿಧಿಸುವ ಕಾರ್ಯ ನಡೆಯುತ್ತದೆ. ತಕ್ಕಮುಖ್ಯಸ್ಥರು, ಅರ್ಚಕರು ಸೇರಿ ಬಾಳೆಗೊನೆ ಕಡಿದು ನಾದ ಸ್ವರದೊಂದಿಗೆ ಮೆರವಣಿಗೆ ಮೂಲಕ ಭಗಂಡೇಶ್ವರ ದೇವಾಲಯದ ಸನ್ನಿಧಿಗೆ ಬಂದು ಧಾರ್ಮಿಕ ವಿಧಿವಿಧಾನಗಳೊಂದಿಗೆ ತಪ್ಪಡ್ಕ (ಕಟ್ಟುಬೀಳುವುದು) ವಿಧಿಸಲಾಗುತ್ತದೆ.
ಅಕ್ಷಯ ಪಾತ್ರೆ ಇರಿಸುವುದು, ಭಗಂಡೇಶ್ವರ ದೇವಾಲಯದಿಂದ ಸಾಂಪ್ರದಾಯಿಕವಾಗಿ ಆಭರಣಗಳನ್ನು ಕೊಂಡೊಯ್ದು ಕಾವೇರಿ ಮಾತೆಗೆ ಆಭರಣ ತೊಡಿಸುವುದು, ವೃಶ್ಚಿಕಾ ಲಗ್ನದಲ್ಲಿ ಅಕ್ಷಯ ಪಾತ್ರೆ ಇರಿಸುವುದು, ಪವಿತ್ರ ನಂದಾದೀಪವನ್ನು ಉರಿಸುವುದು ಇತ್ಯಾದಿ ದೇವಾಲಯದ ಸಾಂಪ್ರದಾಯಿಕ ಆಚರಣೆಗಳು.
ದೇವಾಲಯದಲ್ಲಿ ನಂದಾದೀಪವನ್ನು ನಿರಂತರವಾಗಿ ಒಂದು ತಿಂಗಳ ಕಾಲ ಉರಿಸಿ ದೇವಾಲಯದಲ್ಲಿನ ಅಕ್ಷಯಪಾತ್ರೆಗೆ ಅಕ್ಕಿ ಸುರಿದು ಭಕ್ತರಿಗೆ ಪಡಿಯಕ್ಕಿ ವಿತರಿಸುವುದು ಸೇರಿದಂತೆ ಹಲವು ಸಾಂಪ್ರದಾಯಿಕ ಆಚರಣೆಗಳು. ಭಕ್ತರು ಬೆಳೆದ ಅಕ್ಕಿಯನ್ನು ಅಕ್ಷಯಪಾತ್ರೆಗೆ ಸುರಿದು ಪಡಿಯಕ್ಕಿ ರೂಪದಲ್ಲಿ ಪ್ರಸಾದವಾಗಿ ಒಂದು ತಿಂಗಳಕಾಲ ಭಕ್ತರಿಗೆ ವಿತರಿಸಲಾಗುತ್ತದೆ. ಅಕ್ಷಯಪಾತ್ರೆಯಿಂದ ಕೊಂಡೊಯ್ದ ಅಕ್ಕಿಯಿಂದ ಸಂಪತ್ತು ವೃದ್ಧಿಸಲಿದೆ ಎಂಬ ನಂಬಿಕೆ ಭಕ್ತರದ್ದು.
(ಸರಣಿ ಮುಕ್ತಾಯ)
ಮಳೆಗಾಲದ ಆರಂಭದಿಂದ ಅಂತ್ಯದವರೆಗೂ ಹಬ್ಬಗಳು ಕೊಡಗಿನಲ್ಲೇ ಕಾಣುವ ವಿಶೇಷ ಆಚರಣೆ ಭಕ್ತಿಭಾವದಲ್ಲಿ ಮಿಂದೇಳುವ ಭಕ್ತಸಾಗರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.