ಕುಶಾಲನಗರ: ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಬೃಹತ್ ಪಂಜಿನ ಮೆರವಣಿಗೆ
ಕುಶಾಲನಗರ: ಹಿಂದೂ ಜಾಗರಣ ವೇದಿಕೆ ವತಿಯಿಂದ ಬುಧವಾರ ರಾತ್ರಿ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಪಟ್ಟಣದಲ್ಲಿ ಪಂಜಿನ ಮೆರವಣಿಗೆ ನಡೆಸಯಿತು.
ಇಲ್ಲಿನ ಬೈಚನಹಳ್ಳಿಯ ಮಾರಿಯಮ್ಮ ದೇವಸ್ಥಾನದ ಬಳಿಯಿಂದ ಸ್ವಾತಂತ್ರ್ಯದಿನದ ಮುನ್ನಾದಿನ ಬುಧವಾರ ರಾತ್ರಿ ಅಖಂಡ ಭಾರತ ಸಂಕಲ್ಪ ದಿನಕ್ಕಾಗಿ ಮೆರವಣಿಗೆ ಏರ್ಪಡಿಸಲಾಗಿತ್ತು. ವಿವಿಧೆಡೆಗಳಿಂದ ಆಗಮಿಸಿದ್ದ ಹಿಂದೂ ಜಾಗರಣ ವೇದಿಕೆ ಹಾಗೂ ಬಿಜೆಪಿ ಕಾರ್ಯಕರ್ತರು ಪಂಜು ಹಾಗೂ ಬಾವುಟ ಹಿಡಿದು ಪಟ್ಟಣದ ಬಿಎಂ ರಸ್ತೆಯ ಪ್ರಮುಖ ಬೀದಿಯಲ್ಲಿ ಸಾಗಿ ಮಾರುಕಟ್ಟೆ ರಸ್ತೆ ಮೂಲಕ ರಥಬೀದಿಯಲ್ಲಿ ಮೆರವಣಿಗೆ ನಡೆಸಿ ನಂತರ ರೈತ ಸಹಕಾರ ಭವನ ಬಳಿ ಸಮಾಪನಗೊಂಡಿತ್ತು.
ಮೆರವಣಿಗೆಯಲ್ಲಿ ಜೈ ಜೈ ಶ್ರೀರಾಮ್, ಜೈ ಜೈ ಹನುಮ, ಜೈ ಜೈ ಮಾತಾ, ಭಾರತಾ ಮಾತಾ, ಜೋರ್ ಸೇ ಭೊಲೋ ಹಿಂದೂಸ್ತಾನ್ ಜಿಂದಾಬಾದ್, ಮಿಡಿಯದ ಹೃದಯ ಹೃದಯವೇ ಅಲ್ಲ ಎಂಬ ಘೋಷಣೆಗಳನ್ನು ಕೂಗಿ ಗಮನ ಸೆಳೆದರು. ಭಾರತಾ ಮಾತೆಯ ಭಾವಚಿತ್ರ ಹಾಗೂ ಬ್ಯಾನರ್ ಹಿಡಿದು ಮೆರವಣಿಗೆ ನಡೆಸಲಾಯಿತು.
ವೇದಿಕೆ ಕಾರ್ಯಕ್ರಮ: ‘ಅಖಂಡ ಭಾರತ ನಿರ್ಮಾಣಕ್ಕೆ ಹಿಂದೂಗಳು ಜಾಗೃತರಾಗಿ ಸಂಕಲ್ಪ ಮಾಡಬೇಕಿದೆ’ ಎಂದು ಹಿಂದೂ ಜಾಗರಣಾ ವೇದಿಕೆಯ ಪ್ರಾಂತ್ಯ ಕಾರ್ಯಕಾರಿಣಿ ಸದಸ್ಯ ಉಡುಪಿಯ ಶ್ರೀಕಾಂತ್ ಶೆಟ್ಟಿ ಹೇಳಿದರು.
ರೈತ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ, ‘ದೇಶದ ವಿಭಜನೆಯ ಕರಾಳ ದಿನಗಳು ಇನ್ನೂ ಮಾಸಿಲ್ಲ. ಆ ನೆನಪು ಮರುಕಳಿಸುತ್ತಿದೆ’ ಎಂದು ಹೇಳಿದರು.
‘ಭಾರತದ ಮೌಲ್ಯಯುತ ಗುಣ ಸಂಸ್ಕೃತಿ ಮುನ್ನೆಲೆಗೆ ಬಂದಿದೆ, ಜಗತ್ತಿಗೆ ಭಾರತ ಮಾರ್ಗದರ್ಶನ ನೀಡುತ್ತಿದೆ. ನಾವುಗಳು ಸಂಘಟಿತರಾಗಿ ಜಾಗೃತರಾದಲ್ಲಿ ಅಖಂಡ ಭಾರತ ನಿರ್ಮಾಣ ಸಾಧ್ಯ’ ಎಂದರು.
ಹಾ.ತಿ.ಜಯಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಜಿಲ್ಲಾ ಸಂಚಾಲಕ ಅಜಿತ್ ಕುಕ್ಕೇರ, ತಾಲ್ಲೂಕು ಮಾಹಿತಿ ಸಂಪರ್ಕ ಪ್ರಮುಖ ಎಲ್. ಹರೀಶ್, ಪ್ರಮುಖರಾದ ದಿನೇಶ್, ವಿ.ಎಚ್.ಪ್ರಶಾಂತ್, ಪ್ರಜ್ವಲ್, ಆರ್ಶಿತ್ ಸೇರಿ ವಿವಿಧ ಸಂಘಟನೆಗಳ ಮುಖಂಡರು ಹಾಜರಾಗಿದ್ದರು.
ಬಿಗಿ ಭದ್ರತೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಗಂಗಾಧರ್ ನೇತೃತ್ವದಲ್ಲಿ ಪೊಲೀಸ್ ಭದ್ರತೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಕುಶಾಲನಗರ ಸೇರಿದಂತೆ ಸೋಮವಾರಪೇಟೆ, ಸುಂಟಿಕೊಪ್ಪ, ನೆಲ್ಲಿಹುದಿಕೇರಿ ಮತ್ತಿತರ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.