ಸೋಮವಾರ, ಡಿಸೆಂಬರ್ 9, 2019
20 °C
ಕೊಡಗು ಜಿಲ್ಲೆಗೆ ಪ್ರವಾಸಿಗರ ಲಗ್ಗೆ, ಅಂತೂ ಇಂತೂ ಅವಲಂಬಿತರಿಗೆ ನೆಮ್ಮದಿ

ಕೊಡಗಿನಲ್ಲಿ ಚೇತರಿಕೆ ಕಾಣುತ್ತಿದೆ ಚಳಿಗಾಲದ ಪ್ರವಾಸೋದ್ಯಮ

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಕೊಡಗಿನಲ್ಲಿ ನಿಧಾನಕ್ಕೆ ಚಳಿ ತನ್ನ ಪ್ರತಾಪ ತೋರಲು ಆರಂಭಿಸಿದೆ. ಬೆಳ್ಳಂಬೆಳಿಗ್ಗೆ ಮೈಕೊರೆಯುವ ಚಳಿಗೆ ಮೈಯೊಡ್ಡುವ ಕ್ಷಣಗಳು ಆರಂಭವಾಗಿವೆ. ಆಗಲೇ ಕಾಫಿ ತೋಟ, ಭತ್ತದ ಗದ್ದೆಗಳಲ್ಲಿ ಬೆಳ್ಳಂಬೆಳಿಗ್ಗೆಯೇ ಇಬ್ಬನಿ ಮುದ ನೀಡುತ್ತಿದೆ. ಜಿಲ್ಲೆಯಲ್ಲಿ ‘ಚಳಿಗಾಲದ ಪ್ರವಾಸೋದ್ಯಮ’ವು ಚೇತರಿಕೆ ಕಾಣಿಸುತ್ತಿದ್ದು ಅವಲಂಬಿತ ಹೋಮ್‌ ಸ್ಟೇ, ಹೋಟೆಲ್‌, ರೆಸಾರ್ಟ್‌ ಮಾಲೀಕರು ಹಾಗೂ ಟ್ಯಾಕ್ಸಿ, ಕಾರು, ಜೀಪು ಚಾಲಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

2018ರಲ್ಲಿ ಮಡಿಕೇರಿ ಹಾಗೂ ಸೋಮವಾರಪೇಟೆ ತಾಲ್ಲೂಕಿನ 32 ಗ್ರಾಮಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿತ್ತು. ಇದಾದ ನಂತರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ನೆಲಕಚ್ಚಿತ್ತು. 2019ರಲ್ಲಿ ಪ್ರವಾಹ ಬಂದರೂ ದೊಡ್ಡ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿಲ್ಲ. ಹೀಗಾಗಿ, ಪ್ರವಾಸಿಗರು ಹೆದರದೇ ಜಿಲ್ಲೆಯತ್ತ ಹೆಜ್ಜೆ ಹಾಕಲು ಆರಂಭಿಸಿದ್ದಾರೆ.
ನವೆಂಬರ್‌ ಮೊದಲ ವಾರದಿಂದ ಕೊಡಗು ಜಿಲ್ಲೆಯತ್ತ ಪ್ರವಾಸಿಗರು ಬರಲು ಆರಂಭಿಸಿದ್ದು, ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಂಡುಬರುತ್ತಿದ್ದಾರೆ.

ಎರಡು ವರ್ಷಗಳಿಂದ ಭಣಗುಡುತ್ತಿದ್ದ ಪ್ರವಾಸಿ ತಾಣಗಳಲ್ಲಿ ಈಗ ಪ್ರವಾಸಿಗರ ಕಲರವ ಕಾಣಿಸುತ್ತಿದೆ. ರಾಜಾಸೀಟ್‌, ತಲಕಾವೇರಿ, ದುಬಾರೆ, ಅಬ್ಬಿ ಫಾಲ್ಸ್‌, ಭಾಗಮಂಡಲ ಹಾಗೂ ಕೊಡಗಿನ ಹಸಿರು ಹೊದ್ದಿರುವ ಕಾಫಿ ತೋಟ ಹಾಗೂ ಟೀ ಎಸ್ಟೇಟ್‌ಗಳನ್ನು ಕಂಡು ಪ್ರವಾಸಿಗರು ಫಿದಾ ಆಗಿದ್ದಾರೆ.

ಮಾಂದಲ್‌ಪಟ್ಟಿಯೇ ನೆಚ್ಚಿನ ತಾಣ: ಜುಲೈನಲ್ಲಿ ಭಾರಿ ಮಳೆ ಸುರಿದಿದ್ದರ ಪರಿಣಾಮವಾಗಿ ಅದೇ ತಿಂಗಳಾಂತ್ಯದಿಂದ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು. ಅದು ಸೆಪ್ಟೆಂಬರ್ 15ರ ತನಕ ಮುಂದುವರಿದಿತ್ತು. ಮಳೆ ಬಿಡುವು ನೀಡಿದ ಮೇಲೆ ಮಾಂದಲ್‌ಪಟ್ಟಿಗೆ ಪ್ರವೇಶ ಮುಕ್ತಗೊಳಿಸಲಾಯಿತು. ಈಗ ಅಲ್ಲಿನ ಹಸಿರು, ವೀಕ್ಷಣಾ ಸ್ಥಳ, ಗುಂಡಿಗಳ ನಡುವೆ ಜೀಪುಗಳ ಪಯಣ, ಬೆಟ್ಟಗಳ ಸೊಬಗು ಕಣ್ತುಂಬಿಕೊಳ್ಳಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಅತ್ತ ತೆರಳುತ್ತಿದ್ದಾರೆ. ಅದು ಪ್ರವಾಸಿಗರ ಹಾಟ್‌ ಸ್ಪಾಟ್‌ ಆಗಿಯೇ ಗುರುತಿಸಿಕೊಂಡಿದೆ. ಗಾಳಿಪಟ ಚಿತ್ರದಲ್ಲಿರುವ ಮುಗಿಲುಪೇಟೆಯೇ ಈ ಮಾಂದಲ್‌ಪಟ್ಟಿ ಎಂದು ಭಾವಿಸಿ ಈ ಸ್ಥಳಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಆದರೆ, ನಿಜವಾಗಿಯೂ ಗಾಳಿಪಟ ಚಿತ್ರದ ಚಿತ್ರೀಕರಣ ನಡೆದಿದ್ದು ಹಾಸನ ಜಿಲ್ಲೆಯ ಸಕಲೇಶಪುರ ಮಂಜರಾಬಾದ್‌ ಕೋಟೆಯ ಸುತ್ತಮುತ್ತ.

ಕಳೆದ ಮೂರು ತಿಂಗಳು ಮನೆಯ ಮೂಲೆ ಸೇರಿದ್ದ ಬಾಡಿಗೆ ಜೀಪುಗಳು ಈಗ ರಸ್ತೆಗೆ ಇಳಿದಿವೆ. ಮಾಂದಲ್‌ಪಟ್ಟಿಯತ್ತಲೂ ಪ್ರವಾಸಿಗರನ್ನು ಹೊತ್ತೊಯ್ಯುತ್ತಿವೆ. ಮಾಂದಲ್‌ಪಟ್ಟಿ ಪ್ರವೇಶ ದ್ವಾರದಿಂದ ವೀಕ್ಷಣಾ ಗೋಪುರದತ್ತ ಜೀಪ್‌ನಲ್ಲಿ ತೆರಳುವುದೇ ಸಾಹಸ.

ತಲಕಾವೇರಿಯತ್ತಲೂ ಪ್ರವಾಸಿಗರು: ಬರೀ ಮಡಿಕೇರಿಯಲ್ಲಿರುವ ಪ್ರವಾಸಿ ತಾಣಗಳಲ್ಲಿ ಮಾತ್ರವಲ್ಲ. ದೂರದ ಭಾಗಮಂಡಲ, ತಲಕಾವೇರಿಯತ್ತಲೂ ಪ್ರವಾಸಿಗರು ತೆರಳುತ್ತಿದ್ದಾರೆ. ಈ ವರ್ಷ ತೀರ್ಥೋದ್ಭವ ಹಾಗೂ ನಂತರದ ಕಾವೇರಿ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬಂದಿರಲಿಲ್ಲ. ಆದರೆ, ಕಾಫಿ ಕಣಿವೆಗೆ ಚಳಿ ಲಗ್ಗೆ ಇಡುತ್ತಿದ್ದಂತೆಯೇ ತಲಕಾವೇರಿ ಸೊಬಗು ನೋಡಲು ಬರುವವರ ಸಂಖ್ಯೆ ಹೆಚ್ಚಾಗಿದೆ.

ಹೋಮ್‌ ಸ್ಟೇ ವಾಸ್ತವ್ಯವೇ ಇಷ್ಟ: ಕೊಡಗಿನ ಹೋಮ್‌ ಸ್ಟೇ ವಾಸ್ತವ್ಯ ಇಷ್ಟವಾಯಿತು. ಮನೆಯಲ್ಲಿಯೇ ಉಳಿದಂತೆ ಅನಿಸಿತ್ತು. ಕೊಡಗು ಶೈಲಿಯ ಊಟೋಪಚಾರವೂ ಇಷ್ಟವಾಯಿತು. ಇಲ್ಲಿನ ಹಸಿರು ಹಾಗೂ ಪ್ರವಾಸಿ ತಾಣ ನೋಡಿ ಖುಷಿಯಾಯಿತು. ಆದರೆ, ಐತಿಹಾಸಿಕ ಅರಮನೆ ಸಂಪೂರ್ಣ ಹಾಳಾಗಿದ್ದು ಅದನ್ನು ಕಂಡು ನೋವಾಯಿತು. ಇನ್ನಾದರೂ, ಅರಮನೆಯನ್ನು ದುರಸ್ತಿ ಪಡಿಸಿ ಮುಂದಿನ ಪೀಳಿಗೆಗೆ ಐತಿಹಾಸಿಕ ಕುರುಹು ಉಳಿಸುವ ಕೆಲಸವಾಗಲಿ ಎಂದು ಬೆಂಗಳೂರಿನ ಸಾಫ್ಟ್‌ವೇರಿ ಎಂಜಿನಿಯರ್‌ ಅಜಯ್‌ ‘ಪ್ರಜಾವಾಣಿ’ ಜೊತೆಗೆ ತಮ್ಮ ಪ್ರವಾಸದ ಅನುಭವ ಹಂಚಿಕೊಂಡರು.

ಸಂಖ್ಯೆ ಕಡಿಮೆ: ವಾರ್ಷಿಕವಾಗಿ 18 ಲಕ್ಷ ಪ್ರವಾಸಿಗರು ಕೊಡಗಿಗೆ ಭೇಟಿ ನೀಡುತ್ತಿದ್ದರು. ಆದರೆ, ಎರಡು ವರ್ಷದಿಂದ ಅದರ ಸಂಖ್ಯೆ ಕಡಿಮೆಯಾಗಿದೆ ಎಂದು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ನವೆಂಬರ್‌ ಕೊನೆ ಹಾಗೂ ಡಿಸೆಂಬರ್‌ನಲ್ಲಿ ಕೊಡಗಿನಲ್ಲಿ ಚಳಿ ತೀವ್ರ ಸ್ವರೂಪ ಪಡೆಯಲಿದೆ. ಅದರ ಮಜ ಸವಿಯಲು ಹೆಚ್ಚಿನ ಸಂಖ್ಯೆಯಲ್ಲಿ ಈ ವರ್ಷ ಬರುತ್ತಾರೆ ಎಂಬುದು ಹೋಮ್‌ ಸ್ಟೇ ಮಾಲೀಕರ ನಂಬಿಕೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು