ಬುಧವಾರ, ನವೆಂಬರ್ 20, 2019
21 °C
ತಾಲ್ಲೂಕು ಪಂಚಾಯಿತಿ ತ್ರೈಮಾಸಿಕ ಸಭೆ: ಶಾಸಕ ಕೆ.ಜಿ.ಬೋಪಯ್ಯ ಸೂಚನೆ

ಅಕ್ರಮ, ಸಕ್ರಮ ಅರ್ಜಿ: ಮರು ಪರಿಶೀಲನೆಗೆ ಸೂಚನೆ

Published:
Updated:
Prajavani

ಮಡಿಕೇರಿ: ಕಂದಾಯ ಇಲಾಖೆಗೆ 94‘ಸಿ’ ಅಡಿ ಸಲ್ಲಿಸಿದ್ದ ಅರ್ಜಿಗಳು ಬೇರೆ ಬೇರೆ ಕಾರಣಕ್ಕೆ ಬಾಕಿ ಉಳಿದಿದ್ದು ಅಂತಹ 1,500ಕ್ಕೂ ಹೆಚ್ಚು ಅರ್ಜಿಗಳನ್ನು ಮರು ಪರಿಶೀಲಿಸಿ ತುರ್ತಾಗಿ ವಿಲೇವಾರಿ ಮಾಡಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ತಾಕೀತು ಮಾಡಿದರು.

ನಗರದ ಎಸ್‌.ಜಿ.ಎಸ್‌.ವೈ ಸಭಾಂಗಣದಲ್ಲಿ ಗುರುವಾರ ನಡೆದ ತಾಲ್ಲೂಕು ಪಂಚಾಯಿತಿ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಡ ಕುಟುಂಬಗಳಿಗೆ ನೀಡುವ ವಿವೇಶನಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ಎಲ್ಲದಕ್ಕೂ ಕಾನೂನಿನ ನೆಪ ಹೇಳುವಂತಿಲ್ಲ. 94‘ಸಿ’ ಹಾಗೂ 94‘ಸಿಸಿ’ ಅಡಿಯಲ್ಲಿ ಬಾಕಿ ಉಳಿದಿರುವ ಎಲ್ಲ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲು ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು.

ಮಡಿಕೇರಿ ತಾಲ್ಲೂಕಿನಲ್ಲಿ ಒಟ್ಟು 2,443 ಅರ್ಜಿಗಳ ಪೈಕಿ 530 ಅರ್ಜಿಗಳು ಮಾತ್ರ ವಿಲೇವಾರಿಯಾಗಿದೆ. ಬಾಕಿ ಅರ್ಜಿಗಳನ್ನು ಇಲಾಖೆ ಮಟ್ಟದಲ್ಲೇ ಉಳಿಯಲು ಕಾರಣವೇನು ಎಂದು ಪ್ರಶ್ನಿಸಿದರು. ಈ ಬಗ್ಗೆ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿ ಹಂತದಲ್ಲಿ ಮರು ಪರಿಶೀಲನೆ ನಡೆಸಿ ಅರ್ಹ ಫಲಾನಿಭವಿಗಳಿಗೆ ವಿತರಣೆ ಮಾಡಬೇಕು ಎಂದು ಸೂಚಿಸಿದರು.

ಅರಣ್ಯ ಇಲಾಖೆ ವಿರುದ್ದ ಗರಂ: 
‘ಅರಣ್ಯ ಇಲಾಖೆಗೆ ನೀಡಿದ್ದ ‘ಸಿ’ ಮತ್ತು ‘ಡಿ’ ಭೂಮಿಯನ್ನು ವಾಪಸ್‌ ಪಡೆಯುವ ಸುತ್ತೋಲೆ ಹಲವು ತಿಂಗಳ ಹಿಂದೆಯೇ ಬಂದಿದೆ. ಅದರಲ್ಲಿ ನಿವೇಶನ ರಹಿತರಿಗೆ ನಿವೇಶನ ವಿತರಣೆಗೆ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಿ ಪಡಿಸುತ್ತಿರುವ ಕ್ರಮ ಸರಿಯಲ್ಲ’ ಎಂದು ಬೋಪಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಅರ್ಜಿ ಸಲ್ಲಿಸಿದವರಿಗೆ ಮೊದಲ ಆದ್ಯತೆಯಲ್ಲಿ ನಿವೇಶನ ಕೊಡಬೇಕು. ತಿರಸ್ಕೃತ ಅರ್ಜಿಗಳನ್ನು ಮಾನವೀಯತೆ ಆಧಾರದ ಮೇಲೆ ಸಮಯ ನೀಡಿ ಎಂದು ಸೂಚಿಸಿದರು.

ಕಸ ವಿಲೇವಾರಿ, ಸ್ಮಶಾನಕ್ಕೆ ಜಾಗ ನೀಡಿ:

ಕೇಂದ್ರ ಸರ್ಕಾರ ಆದೇಶದ ಪ್ರಕಾರ ಎಲ್ಲ ಗ್ರಾಮಗಳಲ್ಲಿಯೂ ಕಸ ವಿಲೇವಾರಿ ಘಟಕ ಸೇರಿದಂತೆ ಸ್ಮಶಾನಕ್ಕೆ ಜಾಗ ಮೀಸಲಿಡಬೇಕು. ಅದರಂತೆ, ಮಡಿಕೇರಿ ತಾಲ್ಲೂಕಿನ 26 ಗ್ರಾ.ಪಂಗಳಲ್ಲಿಯೂ ಜಾಗ ಗುರುತಿಸಬೇಕು. ಜತೆಗೆ, ಪ್ರತಿ ಗ್ರಾಮದಲ್ಲಿ ಸರ್ಕಾರಿ ಕಟ್ಟಡಕ್ಕೂ ಜಾಗ ಮೀಸಲಿಡಬೇಕು ಎಂದು ಹೇಳಿದರು.

ಇನ್ನು ಸ್ಮಶಾನವನ್ನು ಕೆಲವು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಒತ್ತುವರಿ ತೆರವಿಗೆ ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು ಎಂದೂ ಬೋಪಯ್ಯ ಅವರು ತಹಶೀಲ್ದಾರ್‌ಗೆ ಸೂಚಿಸಿದರು.

ವಿಧಾನ ಪರಿಷತ್‌ ಸದಸ್ಯ ಸುನೀಲ್‌ ಸುಬ್ರಮಣಿ ಮಾತನಾಡಿ ‘ಅರಣ್ಯದಂಚಿನ ಗ್ರಾಮಗಳಿಗೆ ಮೂಲ ಸೌಲಭ್ಯ ಸಿಗುತ್ತಿಲ್ಲ. ರಸ್ತೆ, ವಿದ್ಯುತ್‌, ನೀರಿನ ಸೌಲಭ್ಯಗಳನ್ನು ನೀಡಲು ಅರಣ್ಯ ಇಲಾಖೆ ಅನುಮತಿ ನೀಡುತ್ತಿಲ್ಲ. ಕಂದಾಯ ಇಲಾಖೆ, ಅರಣ್ಯ ಇಲಾಖೆ ಜಂಟಿಯಾಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

ತಾಲ್ಲೂಕು ಪಂಚಾಯ್ತಿ ಇಒ ಲಕ್ಷ್ಮಿ ಮಾತನಾಡಿ, ತಾಲ್ಲೂಕಿನಲ್ಲಿ ಸಾಕಷ್ಟು ಸರ್ಕಾರಿ ಶಾಲೆಗಳು ಮುಚ್ಚಿವೆ. ಈ ಶಾಲೆಗಳ ಕಟ್ಟಡವನ್ನು ಗ್ರಾಮ ಪಂಚಾಯಿತಿಗೆ ನೀಡಬೇಕು ಎನ್ನುವ ಬೇಡಿಕೆಗಳಿವೆ. ಆ ನಿಟ್ಟಿನಲ್ಲಿ ಕೆಲವೊಂದು ಷರತ್ತಿನ ಆಧಾರದಲ್ಲಿ ಗ್ರಾಮ ಪಂಚಾಯಿತಿಗೆ ನೀಡುವುದಾಗಿ ತಾಲ್ಲೂಕು ಸಭೆಯಲ್ಲಿ ನಿರ್ಣಯಿಸಿ ಪ್ರಸ್ತಾವ ಕೂಡ ನೀಡಲಾಗಿದೆ ಎಂದು ಹೇಳಿದರು.

ಪ್ರತಿಕ್ರಿಯಿಸಿದ ಬೋಪಯ್ಯ, ಅಂಗನವಾಡಿ ಕೇಂದ್ರಗಳಿಗೆ ಬಿಟ್ಟು ಬೇರೊಂದು ಕಚೇರಿಗೆ ಅವಕಾಶ ನೀಡದಂತೆ ಸರ್ಕಾರದ ಸುತ್ತೋಲೆ ಇದೆ. ಸರ್ಕಾರದ ಆದೇಶವನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.

ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಕಾಳುಮೆಣಸಿನಿಂದ ನಷ್ಟಕ್ಕೆ ಒಳಗಾದವರ ರೈತರ ಪೂರ್ಣ ಮಾಹಿತಿಯನ್ನು ಲೀಡ್‌ ಬ್ಯಾಂಕಿಗೆ ನೀಡಬೇಕು. ಕಂದಾಯ ಇಲಾಖೆ, ತೋಟಗಾರಿಕೆ ಜಂಟಿ ಪರಿಶೀಲನೆಯೊಂದಿಗೆ ವರದಿ ಸಿದ್ಧಪಡಿಸಿಕೊಳ್ಳಿ ಎಂದು ಸೂಚಿಸಿದರು.

ವೈದ್ಯರ ಕೊರತೆ: ಚೇರಂಬಾಣೆ, ಮುರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರ ತಜ್ಞ ವೈದ್ಯರ ಕೊರತೆಯಿದೆ. ಕರಿಕೆ ಆಸ್ಪತ್ರೆಗೆ ಎಂಬಿಬಿಎಸ್‌ ವೈದ್ಯರನ್ನು ನೇಮಿಸುವಂತೆ ತಾಲ್ಲೂಕು ವೈದ್ಯಾಧಿಕಾರಿ ಸಭೆಯ ಗಮನಕ್ಕೆ ತಂದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್‌, ಉಪಾಧ್ಯಕ್ಷ ಸಂತು ಸುಬ್ರಮಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಗಣಪತಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)