ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ದಟ್ಟಣೆ: ಅಂತರ ಮರೆತ ಸಾರ್ವಜನಿಕರು

ವಿರಾಜಪೇಟೆ: ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ; ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ
Last Updated 8 ಮೇ 2021, 3:50 IST
ಅಕ್ಷರ ಗಾತ್ರ

ವಿರಾಜಪೇಟೆ: ನಿರ್ಬಂಧ ಸಡಿಲಿಸಿ ಅಗತ್ಯ ವಸ್ತು ಖರೀದಿಸಲು ಅವಕಾಶ ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ಪಟ್ಟಣದಲ್ಲಿ ವಾಹನ ದಟ್ಟಣೆ ಹಾಗೂ ಜನಜಂಗುಳಿ ಕಂಡು ಬಂತು.

ಕೋವಿಡ್‌ ಕಾರಣದಿಂದ ಮೊದಲೇ ನಿಗದಿಪಡಿಸಿದಂತೆ ಶುಕ್ರವಾರ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆ ವರೆಗಿನ ನಿರ್ಬಂಧ ಸಡಿಲಿಸಿ, ಅಗತ್ಯ ವಸ್ತುಗಳ ಅಂಗಡಿಗಳನ್ನು ತೆರೆದು ಸಾರ್ವಜನಿಕರಿಗೆ ಖರೀದಿಗೆ ಅವಕಾಶ ನೀಡಲಾಗಿತ್ತು. ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಿಂದ ಸಾಕಷ್ಟು ಜನ ಬಂದರು. ಇದರಿಂದ ಪಟ್ಟಣದಲ್ಲಿ ಜನ ಹಾಗೂ ವಾಹನ ದಟ್ಟಣೆ ಹೆಚ್ಚಾಗಿತ್ತು.

ಪಟ್ಟಣದ ಹಲವು ಅಗತ್ಯ ವಸ್ತುಗಳ ಅಂಗಡಿಗಳಲ್ಲಿ ಬಹುತೇಕ ಗ್ರಾಹಕರು ಕಿಕ್ಕಿರಿದು ವಸ್ತುಗಳನ್ನು ಕೊಂಡುಕೊಳ್ಳುತ್ತಿದ್ದರು. ಕೆಲವು ಅಂಗಡಿಗಳಲ್ಲಿ ಕನಿಷ್ಠ ಅಂತರವನ್ನು ಮರೆತು ವಸ್ತುಗಳನ್ನು ಖರೀದಿಸುತ್ತಿದ್ದರೆ, ಕೆಲವೆಡೆ ಸರತಿ ಸಾಲಿನಲ್ಲಿ ನಿಂತು ಖರೀದಿಸುತ್ತಿದದ್ದು ಕಂಡು ಬಂತು.

ಬಹುತೇಕ ಔಷಧಿ ಅಂಗಡಿಗಳ ಮುಂದೆ ಖರೀದಿಗೆ ಸಾಕಷ್ಟು ಜನ ಸೇರಿದ್ದರು. ಪಟ್ಟಣ ವ್ಯಾಪ್ತಿಯಲ್ಲಿನ ನ್ಯಾಯಬೆಲೆ ಅಂಗಡಿಗಳ ಮುಂದೆಯೂ ಜನಜಂಗುಳಿ ಸೇರಿತ್ತು. ಎಟಿಎಂಗಳ ಮುಂಭಾಗ ಕೂಡ ಗ್ರಾಹಕರು ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂತು. ಮಾಂಸದಂಗಡಿಗಳಲ್ಲಿ ಗ್ರಾಹಕರು ಮುಗಿಬಿದ್ದು ಖರೀದಿ ಮಾಡುತ್ತಿದ್ದರು.

ತರಕಾರಿ ಖರೀದಿಗಾಗಿ ಪಟ್ಟಣದ ಸರ್ಕಾರಿ ಬಸ್‌ ನಿಲ್ದಾಣ, ಖಾಸಗಿ ಬಸ್‌ ನಿಲ್ದಾಣ ಹಾಗೂ ಕಾರು ನಿಲ್ದಾಣದಲ್ಲಿ ಅವಕಾಶ ನೀಡಲಾಗಿತ್ತು. ಈ ಮೂರು ಕಡೆಗಳಲ್ಲಿಯೂ ತರಕಾರಿ ಮಾರಾಟ ಹಾಗೂ ಖರೀದಿಗಾಗಿ ಅವಕಾಶ ನೀಡಿದ್ದರಿಂದ ತರಕಾರಿ ಖರೀದಿಯ ಸಂದರ್ಭ ಹೆಚ್ಚಿನ ಜನದಟ್ಟಣೆ ಕಂಡು ಬರಲಿಲ್ಲ.

ಪೊಲೀಸರು ಅಲ್ಲಲ್ಲಿ ನಿಂತು ಸಂಚಾರ ದಟ್ಟಣೆ ಉಂಟಾಗುವುದನ್ನು ತಡೆಯಲು ಹರಸಾಹಸ ಪಡುತ್ತಿದ್ದರು. ದಟ್ಟಣೆ ತಡೆಯಲು ಹಲವು ರಸ್ತೆಗಳಲ್ಲಿ ಸಂಚಾರಕ್ಕಾಗಿ ಬದಲಿ ವ್ಯವಸ್ಥೆಯನ್ನು ಮಾಡಿದ್ದರು. ಆದರೂ ಕೆ.ಎಸ್.ಆರ್.ಟಿ ಬಸ್ ನಿಲ್ದಾಣದ ರಸ್ತೆ, ಸುಣ್ಣದ ಬೀದಿಯ ರಸ್ತೆಗಳಲ್ಲಿ ಸಾಕಷ್ಟು ವಾಹನ ದಟ್ಟಣೆ ಉಂಟಾಗಿ ಸುಗಮ ಸಂಚಾರಕ್ಕೆ ಅಡ್ಡಿಯನ್ನುಂಟು
ಮಾಡಿತ್ತು.

‘ವಾರದಲ್ಲಿ ಎರಡು ದಿನ ಮಾತ್ರ ಮಧ್ಯಾಹ್ನ 12 ರವರೆಗೆ ಖರೀದಿಗೆ ಅವಕಾಶ ನೀಡಿದ್ದರಿಂದ ಜನದಟ್ಟಣೆ ಹೆಚ್ಚಾಗುತ್ತಿದೆ. ಅಗತ್ಯ ವಸ್ತುಗಳ ಖರೀದಿಗೆ ನೂಕುನುಗ್ಗಲು ಉಂಟಾಗುತ್ತಿರುವುದರಿಂದ ಸೋಂಕು ನಿಯಂತ್ರಿಸುವುದಕ್ಕಿಂತ ಸೋಂಕು ಹರಡುವ ಸಾಧ್ಯತೆಯೇ ಹೆಚ್ಚಾಗಿದೆ. ಮೂರು ದಿನ ಖರೀದಿಗೆ ಅವಕಾಶ ನೀಡಬೇಕು’ ಎಂದುರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಅನಿಲ್ ಕುಮಾರ್ ಆಗ್ರಹಿಸಿದರು.

‘ಬಸ್‌ಗಳು ಇಲ್ಲವಾದ್ದರಿಂದ ಗ್ರಾಮೀಣ ಪ್ರದೇಶದವರು ಪಟ್ಟಣವನ್ನು ತಲುಪಿದಾಗ 10 ಗಂಟೆಯಾಗಿರುತ್ತದೆ. ನೂಕುನುಗ್ಗಲಿನ ನಡುವೆ ಅವರಿಗೆ ಅಗತ್ಯ ವಸ್ತುಗಳ ಖರೀದಿಗೆ ಸಮಯಾವಕಾಶ ಸಿಗದೆ ಸಮಸ್ಯೆಯಾಗುತ್ತಿದೆ. ಒಂದು ಬಾರಿ ಪಟ್ಟಣಕ್ಕೆ ಬಂದರೆ ಎಲ್ಲ ಕೆಲಸಗಳನ್ನು ಮಗಿಸಿಕೊಂಡು ಹೊಗುವಂತಿರಬೇಕು’ ಎಂದು ಸಾದಿಕ್‌ ಸಲಹೆನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT