ಕುಶಾಲನಗರ: ರೆಸಾರ್ಟ್‌ನ್ನೇ ಗುರಿಯಾಗಿಸಿಕೊಂಡು ಕಳ್ಳತನ ಎಸಗುತ್ತಿದ್ದ ಇಬ್ಬರು ಅಂತರಜಿಲ್ಲಾ ಕಳ್ಳರನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಖಾಸೀಂ (32) ಹಾಗೂ ಚಾಲಕ ಮೊಹಮ್ಮದ್ ಸಿರಾಜುದ್ದೀನ್ ಬಂಧಿತ ಆರೋಪಿಗಳು. ಇವರಿಂದ ₹ 12 ಲಕ್ಷ ಮೌಲ್ಯದ ಚಿನ್ನಾಭರಣ, ವಜ್ರದ ಹರಳುಗಳು, ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
‘ಆರೋಪಿಗಳು 2022ರ ಅಕ್ಟೋಬರ್ 16ರಂದು ಇಲ್ಲಿನ ಅಮ್ಮನವನ ರೆಸಾರ್ಟ್‌ನಲ್ಲಿ ತಂಗಿದ್ದ ಗುಜರಾತಿನ ಪ್ರವಾಸಿಗರು ಊಟಕ್ಕೆ ಹೋಗಿದ್ದ ಸಮಯದಲ್ಲಿ ಕೋಣೆಯನ್ನು ಪ್ರವೇಶಿಸಿ ಅವರು ಇಟ್ಟಿದ್ದ ₹ 9.84 ಲಕ್ಷ ಮೌಲ್ಯದ ವಜ್ರ, ಚಿನ್ನಾಭರಣ ಹಾಗೂ ₹ 75 ಸಾವಿರ ನಗದನ್ನು ಕಳವು ಮಾಡಿದ್ದರು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದರು.
‘ಇಷ್ಟೊಂದು ದುಬಾರಿ ಬೆಲೆಯ ವಸ್ತುಗಳ ಕಳವು ಪ್ರಕರಣ ಪೊಲೀಸ್ ಇಲಾಖೆಗೆ ಸವಾಲಿನ ಪ್ರಕರಣವಾಗಿತ್ತು. ಆದರೆ, 5 ತಿಂಗಳ ನಿರಂತರ ಕಾರ್ಯಾಚರಣೆಯ ಫಲವಾಗಿ ಆರೋಪಿಗಳನ್ನು ಬಂಧಿಸಲಾಯಿತು. ಇವರು ಇದೇ ಬಗೆಯಲ್ಲಿ ಚಿಕ್ಕಮಗಳೂರಿನ 2 ರೆಸಾರ್ಟ್‌ನಲ್ಲೂ ಕಳ್ಳತನ ಎಸಗಿದ್ದರು’ ಎಂದು ವಿವರಿಸಿದರು.
ಈ ಅಪರಾಧ ಪ್ರಕರಣ ಭೇದಿಸಲೆಂದೇ ಜಿಲ್ಲಾ ಅಪರಾಧ ಪತ್ತೆ ದಳ ಹಾಗೂ ಕುಶಾಲನಗರ ವೃತ್ತದ ಅಧಿಕಾರಿಗಳು, ಸಿಬ್ಬಂದಿಯನ್ನೊಳಗೊಂಡ ತಂಡ ರಚಿಸಲಾಗಿತ್ತು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್ ಅವರ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ಉಪವಿಭಾಗದ ಡಿವೈಎಸ್‌ಪಿ ಆರ್.ವಿ.ಗಂಗಾಧರಪ್ಪ, ವೃತ್ತ ನಿರೀಕ್ಷಕ ಬಿ.ಜಿ.ಮಹೇಶ್, ಪಿಎಸ್ಐಗಳಾದ ಪುನೀತ್, ಶ್ರೀಧರ್, ದಿನೇಶ್ ಕುಮಾರ್, ಎಎಸ್ಐ ವೆಂಕಟೇಶ್, ಅರುಣ್ ಸಿಬ್ಬಂದಿಯಾದ ಯೋಗೇಶ್, ನಿರಂಜನ್, ವಸಂತ್, ದಯಾನಂದ್, ಲೋಕೇಶ್, ಪ್ರಕಾಶ್, ಪ್ರವೀಣ್, ಸಂದೇಶ್, ಸಿಡಿಆರ್ ಘಟಕದ ಸಿಬ್ಬಂದಿ ರಾಜೇಶ್, ಗಿರೀಶ್ ಕಾರ್ಯಾಚರಣೆಯಲ್ಲಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.