ಶನಿವಾರ, ಜುಲೈ 2, 2022
27 °C
ಸಾಮಾನ್ಯ ಸಭೆಯಲ್ಲಿ ಎಸ್‌ಡಿಪಿಐ ಸದಸ್ಯರ ಆರೋಪ; ಆಡಳಿತ– ವಿರೋಧ ಪಕ್ಷಗಳ

ಬೇರೆ ವಾರ್ಡ್‌ಗೆ ಎಸ್‌ಸಿ, ಎಸ್‌ಟಿ ಅನುದಾನ: ಸದಸ್ಯರ ನಡುವೆ ವಾಗ್ವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ನಗರಸಭೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯು ಆಡಳಿತ ಹಾಗೂ ವಿರೋಧ ಪಕ್ಷಗಳ ವಾಕ್ಸಮರ, ಪರಸ್ಪರ ಆರೋಪ– ಪ್ರತ್ಯಾರೋಪಕ್ಕೆ ವೇದಿಕೆಯಾಯಿತು.

ಆದಾಯ, ಖಾಸಗಿ ಬಸ್ ನಿಲ್ದಾಣದ ಮಳಿಗೆ ಹರಾಜು ಪ್ರಕ್ರಿಯೆ, ಬೀದಿ ದೀಪ ಅಳವಡಿಕೆ ಹಾಗೂ ರಸ್ತೆ ಕಾಮಗಾರಿ ಸೇರಿದಂತೆ ವಿವಿಧ ವಿಚಾರಗಳು ಚರ್ಚೆಗೆ ಬಂದವು.

ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಖಾಸಗಿ ಬಸ್ ನಿಲ್ದಾಣಕ್ಕೆ ಸಂಬಂಧಿಸಿದಂತೆ ಚರ್ಚಿಸಲು ವಿಶೇಷ ಸಭೆಯೊಂದನ್ನು ಕರೆಯಲು ಚರ್ಚಿಸಲಾಯಿತು.

ಬಿಜೆಪಿ ಸದಸ್ಯ ಕವನ್ ಕಾವೇರಪ್ಪ ಮಾತನಾಡಿ, ‘ಗಣಪತಿ ಬೀದಿಯಲ್ಲಿ ಅಳವಡಿಸಿದ್ದ ಹೆಚ್ಚುವರಿ ಬೀದಿ ದೀಪ ತೆರವುಗೊಳಿಸಲು ಹೋಗಿದ್ದ ವೇಳೆ ಅಲ್ಲಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಶಾಸಕರು ಭರವಸೆ ಕೊಟ್ಟಿದ್ದ ₹5 ಕೋಟಿ ಅನುದಾನ ಎಲ್ಲಿ ಹೋಯಿತು’ ಎಂದು ಎಸ್‌ಡಿಪಿಐ ಸದಸ್ಯರು ಪ್ರಶ್ನಿಸಿದರು.
‘ಎಸ್‌ಸಿ, ಎಸ್‌ಟಿ ಅನುದಾನ ಬೇರೆ ವಾರ್ಡ್‌ಗೆ ಕೊಡಲಾಗುತ್ತಿದೆ’ ಎಂದು ಆರೋಪಿಸಿದರು.

‘ಶಾಸಕರ ಅನುದಾ‌ನದ ಭರವಸೆ ಏನಾಯಿತು’ ಎಂದು ವಿರೋಧ ಪಕ್ಷದ ಸದಸ್ಯರು ಛೇಡಿಸಿದರು.

ಆಗ ಪೌರಾಯುಕ್ತ ರಾಮದಾಸ್‌ ಪ್ರತಿಕ್ರಿಯಿಸಿ, ‘ಶಾಸಕರು ಭರವಸೆ ನೀಡಿದಂತೆ ₹5 ಕೋಟಿ ಅನುದಾನ ಬಿಡುಗಡೆ ಆಗಿತ್ತು. ಅಷ್ಟರಲ್ಲಿಯೇ ಅಮೃತ ಯೋಜನೆಯ ₹40 ಕೋಟಿ ಬಂದಿದ್ದರಿಂದ ವಾಪಸ್ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ₹5 ಕೋಟಿ ಮತ್ತೆ ಕೊಡುವುದಾಗಿಯೂ ತಿಳಿಸಿದ್ದಾರೆ’ ಎಂದು ತಿಳಿಸಿದರು.

‘ಬಿಜೆಪಿ ಸದಸ್ಯರಲ್ಲಿ ಎರಡು ಗುಂಪು ಇದೆ’ ಎಂಬ ಕಾಂಗ್ರೆಸ್ ಸದಸ್ಯ ರಾಜೇಶ್ ಯಲ್ಲಪ್ಪ ಅವರ ಆರೋಪವು ಬಿಜೆಪಿ ಸದಸ್ಯರ ಸಿಟ್ಟಿಗೆ ಕಾರಣವಾಯಿತು. ‘ನಾವೆಲ್ಲಾ ಒಟ್ಟಾಗಿದ್ದೇವೆ. ನಮ್ಮ ಆಂತರಿಕ ವಿಚಾರ ಇಲ್ಲಿ ಪ್ರಸ್ತಾಪ ಮಾಡುವುದು ಬೇಡ. ಎಸ್‌ಡಿಪಿಐ ಮೆಚ್ಚಿಸಲು ರಾಜೇಶ್ ಹೀಗೆ ಮಾತನಾಡುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.

ಗಣಪತಿ ಬೀದಿಯಲ್ಲಿ ಸೆಸ್ಕ್ ಗಮನಕ್ಕೆ ಬಾರದೆ ವಿದ್ಯುತ್ ದೀಪದ ಕಾಮಗಾರಿಯನ್ನು ಶನಿವಾರ ಹಾಗೂ ಭಾನುವಾರ ನಡೆಸಲಾಗಿದೆ. ಅಂದಾಜು ಪಟ್ಟಿಯಲ್ಲಿದ್ದ ರೀತಿಯಲ್ಲಿ ಕೆಲಸ ಮಾಡಿಲ್ಲ ಎಂದು ಸೆಸ್ಕ್ ಎಂಜಿನಿಯರ್ ಸಭೆಗೆ ಮಾಹಿತಿ ನೀಡಿದರು. ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಬಿಜೆಪಿ ಸದಸ್ಯರು ಒತ್ತಾಯಿಸಿದರು.

ಉಪಾಧ್ಯಕ್ಷೆ ಸವಿತಾ ರಾಕೇಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.