ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ರೋಗಿಗಳಿಗೆ ವಾಹನ ಸೌಲಭ್ಯ

ಸೋಮವಾರಪೇಟೆ: ದಿನದ 24 ಗಂಟೆ ಸೇವೆ ಮಾಡುವ ರಾಮದಾಸ್
Last Updated 2 ಜೂನ್ 2021, 3:36 IST
ಅಕ್ಷರ ಗಾತ್ರ

ಸೋಮವಾರಪೇಟೆ: ಕೋವಿಡ್‌ ನಿಂದಾಗಿ ಸಾಕಷ್ಟು ಜನರು ಸಂಕಷ್ಟ ಎದುರಿಸುತ್ತಿದ್ದು, ಸೋಂಕಿತರನ್ನು ಕಂಡರೆ ದೂರ ಹೋಗುವ ಈ ಸಂದರ್ಭದಲ್ಲೂ, ಯಾರೇ ಸೋಂಕಿತರು ಕರೆದರೂ ತಕ್ಷಣ ಅವರ ಮನೆ ಬಳಿಗೆ ತೆರಳಿ ಉಚಿತ ವಾಹನ ಸೇವೆ ನೀಡುತ್ತಿದ್ದಾರೆ ಗಾಂಧಿನಗರದ ನಿವಾಸಿ ರಾಮದಾಸ್.

ಯಾವುದೇ ಸಮಯದಲ್ಲಿ ಕರೆದರೂ ಅಲ್ಲಿ ಹಾಜರಾಗುತ್ತಾರೆ. ರೋಗಿಗಳನ್ನು ಆಸ್ಪತ್ರೆಗೆ ಸೇರಿಸುವವರೆಗೂ ವಿರಮಿಸುವುದಿಲ್ಲ. ಗುಣಮುಖರಾದವರನ್ನೂ ಮನೆಗೆ ಸುರಕ್ಷಿತವಾಗಿ ತಲುಪಿಸುತ್ತಾರೆ. ಯಾವುದೇ ಶುಲ್ಕವಿಲ್ಲದೆ, ತನ್ನ ಸ್ವಂತ ಖರ್ಚಿನಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.

ರಾಮದಾಸ್‌ ಅವರು ಗಾರೆ ಕೆಲಸ ಮಾಡುತ್ತಾರೆ. ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಬಡವ, ಶ್ರೀಮಂತ ಎನ್ನದೇ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ಮಾರುತಿ ಓಮ್ನಿಯಲ್ಲಿ ಸಹಾಯವಾಣಿ ಆರಂಭಿಸಿ, ದಿನಕ್ಕೆ 8 ರಿಂದ 10 ರೋಗಿಗಳಿಗೆ ನೆರವಾಗುತ್ತಿದ್ದಾರೆ.

ದಿನದ 24 ಗಂಟೆ ಸೇವೆ ನೀಡುತ್ತಿರುವ ಇವರು, ತಡ ಮಾಡದೆ ಕರೆ ಮಾಡಿದವರ ಮನೆಯ ಬಳಿಗೆ ತಲುಪುತ್ತಾರೆ. ಕೊರೊನಾ ಸೋಂಕಿತರೊಂದಿಗೆ ಇತರೆ ಕಾಯಿಲೆ ಪೀಡಿತರಿಗೂ ನೆರವಾಗುತ್ತಾರೆ. ಕೋವಿಡ್‌ ಪಾಸಿಟಿವ್‌ ಇದ್ದರೆ ಪ್ರಯಾಣದ ವೇಳೆ ಪಿಪಿಇ ಕಿಟ್ ಧರಿಸುತ್ತಾರೆ. ಉಳಿದಂತೆ ಮಾಸ್ಕ್, ಗ್ಲೌಸ್ ಸೇರಿದಂತೆ ಮತ್ತಿತರ ಸುರಕ್ಷತಾ ಕ್ರಮಗಳಿಂದ ತಮ್ಮ ಆರೋಗ್ಯದ ಕಡೆಯೂ ಕಾಳಜಿ ವಹಿಸುತ್ತಾರೆ.

ಇವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ದಿನಕ್ಕೆ ಎರಡು ಜೊತೆ ಪಿಪಿಇ ಕಿಟ್ ನೀಡುವ ಮೂಲಕ ವೈದ್ಯರು ಪ್ರೋತ್ಸಾಹ ನೀಡುತ್ತಿದ್ದಾರೆ.
ಸೋಮವಾರಪೇಟೆ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕದಲ್ಲೂ ಸೇವೆ ಸಲ್ಲಿಸುತ್ತಿರುವ ಇವರು, ಸೀಲ್‌ಡೌನ್‌ನಿಂದ ತೊಂದರೆಗೊಳಗಾದ ನೂರಾರು ಮನೆಗಳಿಗೆ ಉಚಿತವಾಗಿ ಆಹಾರ ಕಿಟ್‌ಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

‘ಇದುವರೆಗೆ ತನ್ನ ಕೈಯಿಂದ ಸುಮಾರು ₹40 ಸಾವಿರ ಖರ್ಚಾಗಿದೆ. ಈ ಸೇವೆಯಿಂದಾಗಿ ನನಗೆ ಹಾಗೂ ನನ್ನ ಕುಟುಂಬಕ್ಕೆ ತೃಪ್ತಿಯಿದೆ. 10 ವರ್ಷದ ಹಿಂದೆ ಮದ್ಯವ್ಯಸನಿಯಾಗಿ, ಕುಟುಂಬಕ್ಕೆ ಭಾರವಾಗಿದ್ದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನವಜೀವನ ಸಮಿತಿಯವರು ವ್ಯಸನದಿಂದ ಮುಕ್ತಿ ಮಾಡಿ, ಮನುಷ್ಯನನ್ನಾಗಿ ಮಾಡಿದರು. ಈಗ ಇನ್ನೊಬ್ಬರ ಜೀವ ಉಳಿಸುವ ಕಾರ್ಯಕ್ಕೆ ನನ್ನನ್ನು ತೊಡಗಿಸಿಕೊಂಡಿದ್ದೇನೆ’ ಎಂದು ರಾಮದಾಸ್ ಸಂತಸ ಹಂಚಿಕೊಂಡರು.

ಅಗತ್ಯವಿದ್ದವರು ಇವರ ಮೊಬೈಲ್ ಸಂಖ್ಯೆ: 96321 02124 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT