ಸಮಸ್ಯೆಗಳ ನಡುವೆ ಮಿಂದೇಳುತ್ತಿರುವ ಬಿಳಿಗೇರಿ ಗ್ರಾಮಸ್ಥರು

7

ಸಮಸ್ಯೆಗಳ ನಡುವೆ ಮಿಂದೇಳುತ್ತಿರುವ ಬಿಳಿಗೇರಿ ಗ್ರಾಮಸ್ಥರು

Published:
Updated:
Deccan Herald

ಸೋಮವಾರಪೇಟೆ: ಇಲ್ಲಿಗೆ ಸಮೀಪದ ಕಿರಗಂದೂರು ಗ್ರಾಮ ಪಂಚಾಯಿತಿಗೆ ಹೊಂದಿಕೊಂಡಿರುವ ಬಿಳಿಗೇರಿ ಗ್ರಾಮದಲ್ಲಿ ಪ್ರಸಕ್ತ ಸಾಲಿನಲ್ಲಿ 3325 ಮಿ.ಮೀ. ಮಳೆಯಾಗಿದ್ದು, ಸುಮಾರು 70 ವರ್ಷಗಳ ದಾಖಲೆಯನ್ನು ಅಳಿಸಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಕಳೆದ ವರ್ಷ ಇದೇ ಸಮಯಕ್ಕೆ 1775 ಮಿ.ಮೀ. ಮಳೆಯಾಗಿತ್ತು. ಆದರೆ 75 ದಿನಗಳ ಹಿಂದೆ ಪ್ರಾರಂಭವಾಗಿರುವ ಮುಂಗಾರಿನ ಮಳೆ, ಇಲ್ಲಿನ ಜನರನ್ನು ಪರದಾಡುವಂತೆ ಮಾಡಿದೆ. ಸಮಸ್ಯೆಗಳ ನಡುವೆಯೇ ದಿನಗಳನ್ನು ಮುಂದೂಡುವಂತೆ ಮಾಡಿದೆ.

ಗಾಳಿ, ಮಳೆಗೆ ಒಂದೂವರೆ ತಿಂಗಳ ಹಿಂದೆ ವಿದ್ಯುತ್ ತಂತಿಗಳ ಮೇಲೆ ಮರಗಳು ಉರುಳಿ ಮಾರ್ಗ ಕಡಿತಗೊಂಡು ಇದುವರೆಗೆ ಗ್ರಾಮಸ್ಥರು ಕತ್ತಲೆಯಲ್ಲಿಯೇ ಕಾಲ ಕಳೆಯುವಂತಾಗಿದೆ. ಗ್ರಾಮಕ್ಕೆ ಸರಬರಾಜಾಗುವ ವಿದ್ಯುತ್ ಮಾರ್ಗ ಕಾಫಿ ತೋಟದ ಒಳಗೆ ಹಾದು ಬಂದಿರುವುದರಿಂದ ಜೋರು ಗಾಳಿ ಮಳೆ ಬಂದ ಸಂದರ್ಭ ಮಾರ್ಗದ ಮೇಲೆ ಮರಗಳು ಉರುಳಿ ತಿಂಗಳುಗಟ್ಟಲೆ ವಿದ್ಯುತ್ ಇಲ್ಲದೆ ಇರಬೇಕಾಗಿದೆ. ಮಾರ್ಗವನ್ನು ಮುಖ್ಯರಸ್ತೆಯ ಬದಿಯಲ್ಲಿ ಅಳವಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.

ರಸ್ತೆಗಳು ಗುಂಡಿ ಬಿದ್ದು ಅದೆಷ್ಟೋ ಸಮಯ ಕಳೆದಿದ್ದರೂ, ಇಲ್ಲಿಯವರೆಗೆ ಸರಿಪಡಿಸಿಲ್ಲ. ಮಾದಾಪುರ ಗ್ರಾಮದಿಂದ ಬಿಳಿಗೇರಿಗೆ ಸಂಪರ್ಕಿಸುವ ಮಾರ್ಗದ ನಂದಿಮೊಟ್ಟೆ ಗ್ರಾಮದಲ್ಲಿ ರಸ್ತೆ ಮೇಲೆ ನೀರು ಹರಿಯುತ್ತಿರುವುದರಿಂದ ವಾಹನ ಸವಾರರು ಅಪಾಯದೊಂದಿಗೇ ವಾಹನ ಚಲಿಸಬೇಕಾಗಿದೆ. ಜೋರು ಮಳೆಯಾದ ಸಂದರ್ಭ ರಸ್ತೆ ಮೇಲೆ ಮೂರರಿಂದ ಐದು ಅಡಿಗಳಷ್ಟು ನೀರು ಹರಿಯುತ್ತಿದೆ. ಅಲ್ಲದೆ, ಇಲ್ಲಿ ಸುಮಾರು ₹ 40 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಸೇತುವೆ ಕುಸಿಯುವ ಭೀತಿಯಲ್ಲಿದೆ. ಇತ್ತೀಚೆಗೆ ಸೇತುವೆ ನಿರ್ಮಾಣವಾಗಿದ್ದು, ಮೋರಿ ಅಳವಡಿಸಿರುವುದರಿಂದ ಈಗಾಗಲೇ ಒಂದೆರಡು ಮೋರಿಗಳು ಕುಸಿಯುವ ಹಂತದಲ್ಲಿವೆ.

ಸೇತುವೆ ಕುಸಿದಲ್ಲಿ ಬಿಳಗೇರಿಗೆ ಸಂಪರ್ಕಿಸುವ ರಸ್ತೆ ಕಡಿತವಾಗುತ್ತದೆ ಎಂಬ ಆತಂಕ ಗ್ರಾಮಸ್ಥರದ್ದು. ಜೋರು ಮಳೆಯಾದ ಸಂದರ್ಭ ಮೋರಿಗೆ ಅಡ್ಡಲಾಗಿ ಮೇಲಿನಿಂದ ಮರಗಳು ಕೊಚ್ಚಿಬಂದು ಸಿಕ್ಕಿಹಾಕಿಕೊಳ್ಳುವುದರಿಂದ ನೀರು ರಸ್ತೆ ಮೇಲೆ ಹರಿಯುತ್ತಿದೆ.

ಪ್ರಸಕ್ತ ಸಾಲಿನ ಗಾಳಿ, ಮಳೆಗೆ ಕಾಫಿ, ಮೆಣಸು ಹಾಗೂ ಏಲಕ್ಕಿ ಕೃಷಿ ನೆಲಸಮವಾಗಿರುವುದೂ ಸಮಸ್ಯೆಯ ಸುಳಿಗೆ ಜನರನ್ನು ನೂಕಿದೆ.

 

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !