ಕುಸಿಯುವ ಭೀತಿಯಲ್ಲಿ ಮರಳು ಚೀಲಗಳ ತಾತ್ಕಾಲಿಕ ತಡೆಗೋಡೆ

7
ಮಾಕುಟ್ಟ: ಆಧುನಿಕ ಮಾದರಿಯ ಕಾಮಗಾರಿಗೆ ಸಿದ್ದತೆ

ಕುಸಿಯುವ ಭೀತಿಯಲ್ಲಿ ಮರಳು ಚೀಲಗಳ ತಾತ್ಕಾಲಿಕ ತಡೆಗೋಡೆ

Published:
Updated:
Deccan Herald

ವಿರಾಜಪೇಟೆ: ಕಳೆದ ಜೂನ್ ತಿಂಗಳಿನಲ್ಲಿ ಸುರಿದ ಭಾರಿ ಮಳೆಗೆ ಭೂಕುಸಿತವಾಗಿ ಸಂಪರ್ಕ ಕಡಿತಗೊಂಡಿದ್ದ ಕೊಣನೂರು-ಮಾಕುಟ್ಟ ಅಂತರರಾಜ್ಯ ಹೆದ್ದಾರಿಯಲ್ಲಿ ರಸ್ತೆ ಕೊಚ್ಚಿಹೋದ ಕಡೆಗಳಲ್ಲಿ ಆಧುನಿಕ ಮಾದರಿಯ ಕಾಮಗಾರಿ ನಡೆಸಲು ಲೋಕೋಪಯೋಗಿ ಇಲಾಖೆ ಮುಂದಾಗಿದೆ. 

ಭಾರಿಮಳೆಗೆ ಮಾಕುಟ್ಟ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಭೂಕುಸಿತದಿಂದ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಇದರಿಂದಾಗಿ ತಿಂಗಳುಗಳ ಕಾಲ ಈ ರಸ್ತೆಯಲ್ಲಿ ಸಂಪರ್ಕ ಕಡಿತಗೊಂಡು ಎರಡೂ ರಾಜ್ಯದ ಜನತೆ ಸಂಕಷ್ಟ ಅನುಭವಿಸುವಂತಾಗಿತ್ತು. ಇದರಿಂದಾಗಿ ತುರ್ತು ಕಾಮಗಾರಿ ಕೈಗೊಂಡ ಲೋಕೋಪಯೋಗಿ ಇಲಾಖೆ ರಸ್ತೆ ಕುಸಿತಗೊಂಡಿರುವ ಕಡೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮರಳಿನ ಚೀಲಗಳನ್ನಿರಿಸಿ ಸರಕು ಸಾಗಣಿಕೆಯ ಭಾರಿ ವಾಹನಗಳನ್ನು ಹೊರತುಪಡಿಸಿ ಉಳಿದ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಈ ನಡುವೆ ತಂತ್ರಜ್ಞರ ತಂಡಗಳು ಸ್ಥಳಕ್ಕೆ ತೆರಳಿ, ಪರಿಶೀಲನೆ ನಡೆಸಿ ಕಾಮಗಾರಿ ಕುರಿತಂತೆ ಸಲಹೆ ಸೂಚನೆ ನೀಡಿದ್ದವು.

ಈ ಕುರಿತಂತೆ ಕಾರ್ಯ ಪ್ರವೃತ್ತವಾಗಿರುವ ಇಲಾಖೆಯು ಹೆಚ್ಚು ಭೂಕುಸಿತ ಸಂಭವಿಸಿರುವ ಕಡೆಗಳಲ್ಲಿ ರಸ್ತೆಗಳಿಗೆ ಕಲ್ಲಿನ ತಡೆಗೋಡೆ ನಿರ್ಮಿಸಿ ಗೇಬಿಯನ್ ಮೆಸ್ ಹಾಕಲು ಲೋಕೋಪಯೋಗಿ ಇಲಾಖೆ ಯೋಜನೆ ರೂಪಿಸಿ ಕಾರ್ಯಪ್ರವೃತ್ತವಾಗಿದೆ.

ಗೇಬಿಯಸ್‌ ಮೆಸ್‌ ಎಂದರೆ ರಬ್ಬರ್‌ ಕೋಟಿಂಗ್‌ (ಕವಚ) ಹೊಂದಿರುವ ಕಬ್ಬಿಣದ ಜಾಲರಿಯಾಗಿದೆ. ಈ ಕಬ್ಬಿಣದ ಜಾಲರಿಯು ತನ್ನ ಹೊರಮೈಗೆ ರಬ್ಬರ್ ಕೋಟಿಂಗ್ ಹೊಂದಿರುವುದರಿಂದ ತುಕ್ಕು ಹಿಡಿಯುವುದಿಲ್ಲ. ಇದರಿಂದಾಗಿ ಇದು ದೀರ್ಘಕಾಲ ಬಾಳಿಕೆ ಬರುತ್ತದೆ ಎಂದು ಹೇಳಲಾಗಿದೆ. ಈ ರೀತಿಯ ಮೆಸ್ ಈಗ ಗುಜರಾತಿನಲ್ಲಿ ಮಾತ್ರ ಲಭ್ಯವಿದ್ದು, ಅಲ್ಲಿಂದ ಸಾಕಷ್ಟು ಮೆಸ್‌ಗಳನ್ನು ವಿರಾಜಪೇಟೆಗೆ ತರಿಸಲಾಗಿದೆ.

ಯೋಜನೆಯಂತೆ ಭೂಕುಸಿತವುಂಟಾದ ಕಡೆಗಳಲ್ಲಿ ರಸ್ತೆಗಳಿಗೆ ಕಾಂಕ್ರೀಟ್ ತಡೆಗೋಡೆ ನಿರ್ಮಿಸುವ ಬದಲು ಕಲ್ಲುಗಳನ್ನು ಬಳಸಿ ತಡೆಗೋಡೆ ಕಟ್ಟಲಾಗುತ್ತದೆ. ಕಲ್ಲುಗಳು ಜಾರದಂತೆ ಗೇಬಿಯಸ್‌ ಮೆಸ್‌ಅನ್ನು ತಡೆಗೋಡೆಯ ಮೇಲ್ಭಾಗದಲ್ಲಿ ಅಳವಡಿಸಲಾಗುತ್ತದೆ. ಈ ಮೆಸ್‌ ಕಲ್ಲುಗಳು ಜಾರದಂತೆ ಭದ್ರವಾಗಿ ಬಿಗಿದುಕೊಂಡಿರುತ್ತದೆ.

ಕೇರಳದ ಗಡಿಭಾಗದಲ್ಲೂ ಈ ತಂತ್ರಜ್ಞಾನ ಬಳಕೆ: ನೆರೆಯ ಕೇರಳದ ಮಟ್ಟನೂರಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭಗೊಂಡಿರುವುದರಿಂದ ಮಾಕುಟ್ಟದ ಮುಂದಿನ ಗಡಿಭಾಗವಾದ ಕೂಟುಪೊಳೆವರೆಗಿನ ರಸ್ತೆಯನ್ನು ಕೇರಳ ಸರ್ಕಾರ ಮೇಲ್ದರ್ಜೆಗೇರಿಸುತ್ತಿದೆ. ಈ ಹಿನ್ನಲೆಯ ಆ ಭಾಗದ ರಸ್ತೆಯ ಕಡಿದಾದ ಪ್ರದೇಶ ಹಾಗೂ ನದಿ ತೀರದಲ್ಲಿ ಕಲ್ಲಿನ ತಡೆಗೋಡೆ ನಿರ್ಮಿಸಿ ಅಲ್ಲಿಯು ಗೇಬಿಯನ್ ಮೆಸ್ ಹಾಕಲಾಗುತ್ತಿದೆ.

ಅಪಾಯದಲ್ಲಿ ತಾತ್ಕಾಲಿಕ ತಡೆಗೋಡೆ: ಮಾಕುಟ್ಟ ರಸ್ತೆಯಲ್ಲಿ ಭೂಕುಸಿತ ಸಂಭವಿಸಿ ಸಂಪರ್ಕ ಕಡಿತಗೊಂಡಾಗ ಎರಡೂ ರಾಜ್ಯದ ಜನ ಸಾಕಷ್ಟು ಸಮಸ್ಯೆ ಅನುಭವಿಸಿದ್ದರು. ಆದರೆ ಕುಸಿತವಾದ ಕಡೆಗಳಲ್ಲಿ ಮರಳಿನ ಚೀಲಗಳನ್ನಿರಿಸಿ ತಾತ್ಕಾಲಿಕ ತಡೆಗೋಡೆಗಳನ್ನಿರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಭಾರಿ ಸರಕು ಸಾಗಣಿಕೆಯ ವಾಹನಗಳನ್ನು ಹೊರತುಪಡಿಸಿ ಉಳಿದ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ರಸ್ತೆಗಳ ಬದಿಗೆ ತಡೆಗೋಡೆಗಳ ರೂಪದಲ್ಲಿರಿಸಿರುವ ಮರಳಿನ ಚೀಲಗಳ ಹರಿದು ಮತ್ತೆ ಅಪಾಯದ ಸೂಚನೆ ನೀಡಿದೆ. ಶಾಶ್ವತ ಕಾಮಗಾರಿಯನ್ನು ಕೂಡಲೇ ಕೈಗೊಳ್ಳದಿದ್ದರೆ, ಇಲ್ಲವೆ ಮಳೆ ಬಂದರೆ ಮರಳು ಮತ್ತೆ ಹೊಳೆಪಾಲಾಗಿ ಮತ್ತೆ ರಸ್ತೆ ಕುಸಿಯುವ ಅಪಾಯವಿದೆ.

ಕೆಲವೇ ತಿಂಗಳುಗಳಲ್ಲಿ ಮರಳಿನ ಚೀಲಗಳು ದುಸ್ಥಿತಿಗೆ ಬರಲು ಬೇರೆಬೇರೆ ಕಾರಣಗಳತ್ತ ಸಾರ್ವಜನಿಕರು ಬೊಟ್ಟು ಮಾಡುತ್ತಾರೆ. ಭಾರಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡದಿದ್ದರೂ, ನಿಯಮ ಉಲ್ಲಂಘಿಸಿ ರಾತ್ರಿ ವೇಳೆ ಭಾರಿ ತೂಕದ ಸರಕು ಸಾಗಣಿಕೆಯ ವಾಹನಗಳು ಈ ಮಾರ್ಗದಲ್ಲಿ ಸಾಗುತ್ತಿರುವುದೇ ಮುಖ್ಯಕಾರಣವೆಂಬ ಆರೋಪ ಪ್ರಮುಖವಾಗಿ ಕೇಳಿ ಬರುತ್ತಿದೆ. ಜತೆಗೆ ಕಾಡುಪ್ರಾಣಿಗಳ ವಿಶೇಷವಾಗಿ ಮಂಗಗಳ ಹಾವಳಿಯು ಸೇರಿದೆ ಎನ್ನುವ ಮಾತುಕೂಡ ಕೇಳಿ ಬರುತ್ತಿದೆ. ಈ ಕುರಿತು ಜಿಲ್ಲಾಡಳಿತ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

**

‘ಮರಳುಚೀಲ ಹರಿದು ತಾತ್ಕಾಲಿಕ ತಡೆಗೋಡೆಗೆ ಹಾನಿಯಾಗಿರುವುದು ಗಮನಕ್ಕೆ ಬಂದಿದ್ದು, ಗೇಬಿಯಸ್‌ ಮೆಸ್‌ ಒಳಗೊಂಡ ಖಾಯಂ ತಡೆಗೋಡೆ ನಿರ್ಮಾಣ ಕಾರ್ಯ ಶೀಘ್ರದಲ್ಲಿ ಆರಂಭವಾಗಲಿದೆ
- ಮೂವೇರ ಸುರೇಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌, ವಿರಾಜಪೇಟೆ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !