ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು | ನಿಸರ್ಗದ ನಡುವೆ ಕಣ್ಮನ ಸೆಳೆಯುವ ಜಲಧಾರೆಗಳು

‘ಚಿಂಗಾರ’, ಚೇಲಾವರ ಸೊಬಗು ನೋಡಬನ್ನಿ
Last Updated 13 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ನಾಪೋಕ್ಲು: ಎಂಟತ್ತು ದಿನಗಳು ಸುರಿದ ಭಾರಿ ಮಳೆಗೆ ಬೆಟ್ಟಶ್ರೇಣಿಗಳಲ್ಲಿನ ಜಲಧಾರೆಗಳು ಧುಮ್ಮಿಕ್ಕಿ ಹರಿಯುತ್ತಿವೆ. ಕೆಲವು ಬಂಡೆಗಳ ಮೇಲಿನಿಂದ ಭೋರ್ಗರೆಯುತ್ತಿದ್ದರೆ, ಮತ್ತೆ ಕೆಲವು ಕೊರಕಲಿನ ಹಾದಿಯಲ್ಲಿ ಬೆಳ್ನೊರೆಯಾಗಿ ಸಾಗಿ ತಳ ಸೇರುತ್ತಿವೆ.

ಗ್ರಾಮೀಣ ಪ್ರದೇಶಗಳಲ್ಲಿ ಗಿರಿಶಿಖರಗಳಿಂದ ಸಾಗಿ ಬರುವ ಶುಭ್ರ ಬೆಳ್ನೊರೆ ಎತ್ತರದ ಬೆಟ್ಟದಿಂದ ಜಾರಿ ಕಣಿವೆಗಳೆಡೆಯಲ್ಲಿ ಹಾದು ಹೋಗುವ ದೃಶ್ಯ ನಯನಮನೋಹರ. ಸುತ್ತಲೂ ಹಸಿರು ಹೊತ್ತ ಕಾಡಿನ ನಡುವೆ ಹರಿಯುವ ಈ ಜಲಪಾತಗಳ ಮೋಹಕತೆ ಎಲ್ಲರನ್ನೂ ಆಕರ್ಷಿಸುತ್ತದೆ. ದಟ್ಟ ಮರಗಳ ನಡುವೆ ಮಳೆಗಾಲದಲ್ಲಿ ತುಂಬಿ ಹರಿಯುವಾಗ ಕಣ್ತುಂಬಿಕೊಳ್ಳುವುದು ಮುದ ನೀಡುತ್ತದೆ.

ಕಾಡಿನ ನಡುವೆ ಹತ್ತಾರು ಜಲಪಾತಗಳು ಮನಸೆಳೆಯುತ್ತಿವೆ. ಅವುಗಳಲ್ಲಿ ಯವಕಪಾಡಿಯ ಚಿಂಗಾರ ಜಲಪಾತವೂ ಒಂದು. ಎತ್ತರದ ಬೆಟ್ಟಸಾಲುಗಳ ಕಣಿವೆಗಳಲ್ಲಿ ಉಗಮಿಸಿ ಹರಿದು ಬರುವ ಜಲಧಾರೆಯಿಂದ ಉದ್ಭವಿಸಿದ ಚಿಂಗಾರ ಜಲಪಾತವೀಗ ಬೋರ್ಗರೆದು ಧುಮ್ಮಿಕ್ಕುತ್ತಿದೆ.

ಬಂಡೆಗಲ್ಲುಗಳ ಮೇಲಿನಿಂದ ಧುಮ್ಮಿಕ್ಕುವ ಈ ಜಲಪಾತ ಮನಮೋಹಕ. ಹಸಿರುರಾಶಿಯ ನಡುವೆ ಬೆಳ್ನೊರೆಯ ಈ ಜಲಪಾತದ ಸೊಬಗು ವರ್ಣಿಸಲಸದಳ. ವೀಕ್ಷಕರ ನೋಟಕ್ಕೆ ಸುಲಭದಲ್ಲಿ ಸಿಕ್ಕದೇ ದೂರವೇ ಉಳಿದಿರುವ ಜಲಪಾತ ಈಗ ರಭಸದಿಂದ ಧುಮ್ಮಿಕ್ಕುತ್ತಿದೆ. ಮಳೆಗಾಲದಲ್ಲಿ ಚಿಂಗಾರ ಜಲಧಾರೆಯ ಸೊಬಗು ಸವಿಯಬಹುದು.

ಎಲ್ಲೆಲ್ಲೂ ಹಸಿರು ಸಿರಿ. ನಡುವೆ ಜಲಪಾತದ ಬೆಳ್ನೊರೆ. ಇದರ ನೋಟ ಹತ್ತಿರಕ್ಕೆ ತೆರಳಿದರಷ್ಟೇ ಕಾಣಸಿಗುತ್ತದೆ. ಹಸಿರು ವೃಕ್ಷಗಳ ನಡುವೆ ಸಿಕ್ಕ ಇಳಿಜಾರಿನಲ್ಲಿ ಬಂಡೆಗಲ್ಲುಗಳ ಮೇಲೆ ಚೆಂದದ ನೋಟ ಸವಿಯಲು ಎರಡು ಕಣ್ಣುಗಳು ಸಾಲವು. ಈ ಜಲಪಾತ ಹೊರಸೂಸುವ ಚೆಲುವು ಮಾತ್ರ ಆಕರ್ಷಣೀಯ. ಮತ್ತೆ ಮೇಲಕ್ಕೆ ಸಾಗಿದರೆ ನೀಲಕಂಡಿ ಜಲಪಾತ, ಬಲಕ್ಕೆ ಹೊರಳಿದರೆ ಮಾದಂಡ ಅಬ್ಬಿಯ ನೋಟ ಮನಸೂರೆಗೊಳ್ಳುತ್ತದೆ.

ತಡಿಯಂಡಮೋಳ್ ಬೆಟ್ಟಸಾಲಿನ ಜಲಪಾತಗಳು ಹಲವಾದರೆ ಇತ್ತ ಪೇರೂರು ಗ್ರಾಮದ ಬೆಟ್ಟದಲ್ಲಿ ಹಲವು ಜಲಪಾತಗಳು ಮೈದುಂಬಿಕೊಂಡಿವೆ. ಇವು ಅಪರೂಪದ ಜಲಧಾರೆಗಳು. ಸ್ಥಳೀಯರಿಗೆ ಮಾತ್ರ ಪರಿಚಿತವಾಗಿರುವ ಈ ಅನಾಮಧೇಯ ಜಲಪಾತಗಳು ಕಾಡಿನ ನಡುವೆ ಸೌಂದರ್ಯ ಸೂಸುತ್ತಿವೆ. ಒಂದಲ್ಲ, ಎರಡಲ್ಲ ಸಪ್ತಜಲಧಾರೆಗಳು ಬೆಟ್ಟಸಾಲುಗಳಿಂದ ಕೆಳಗಿಳಿದು ನದಿಯಾಗಿ ಹರಿಯುತ್ತಿವೆ.

ನೆಲಜಿ ಗ್ರಾಮದಲ್ಲಿ ಮಲ್ಮ ಬೆಟ್ಟದಿಂದ ಹರಿದು ಬರುವ ಜಲಧಾರೆಯೊಂದು ಗ್ರಾಮದ ಚೀಯಕಪೂವಂಡ ಕುಟುಂಬಸ್ಥರ ಜಾಗದಲ್ಲಿ ಸುಮಾರು 100 ಅಡಿ ಎತ್ತರದಿಂದ ಧುಮ್ಮಿಕ್ಕುತ್ತಿದೆ. ಬಂಡೆಗಲ್ಲುಗಳ ಮೇಲೆ ಭೋರ್ಗರೆವ ಜಲಧಾರೆ ಮನಸೆಳೆಯುತ್ತಿದೆ. ಮಳೆಗಾಲದಲ್ಲಿ ಮಾತ್ರ ಕಾಣುವ ಈ ಅಪೂರ್ವ ಜಲಧಾರೆಯ ಸೊಬಗು ವರ್ಣನಾತೀತ.

ಇವೆಲ್ಲಾ ಅಪರೂಪದ ಜಲಪಾತಗಳಾದರೆ ಚೆಯ್ಯಂಡಾಣೆ ಬಳಿಯ ಚೇಲಾವರ ಜಲಪಾತ ಪ್ರವಾಸಿ ನಕ್ಷೆಯಲ್ಲಿ ವಿಶೇಷ ಸ್ಥಾನ ಪಡೆದಿದೆ. ಕೊರೊನಾ ಭೀತಿಯಿಂದಾಗಿ ಈ ವರ್ಷ ಜಲಪಾತಗಳ ಸೌಂದರ್ಯ ಸವಿಯಲು ಪ್ರವಾಸಿಗರು ತೆರಳುತ್ತಿಲ್ಲ. ಹಾಗಾಗಿ ಜಲಧಾರೆಗಳು ಬೆಡಗು ಭಿನ್ನಾಣದಿಂದ ಹರಿದು ಭೂರಮೆಯ ಒಡಲು ಸೇರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT