ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಪೋಕ್ಲು: ಗ್ರಾಮಸ್ಥರ ನೀರಿನ ಬವಣೆ ಬಗೆಹರಿದೀತೇ?

ಬೇತು ಗ್ರಾಮಕ್ಕೆ ನೀರು ಸರಬರಾಜು ಯೋಜನೆಗೆ ಕಾಯಕಲ್ಪ
Last Updated 24 ಆಗಸ್ಟ್ 2020, 17:13 IST
ಅಕ್ಷರ ಗಾತ್ರ

ನಾಪೋಕ್ಲು: 50 ಸಾವಿರ ಲೀಟರ್ ಸಂಗ್ರಹಣಾ ಸಾಮರ್ಥ್ಯದ ಟ್ಯಾಂಕ್, ಅದಕ್ಕೆ ನೀರು ತುಂಬಿಸಲು ತೋಟಗದ್ದೆಗಳಲ್ಲಿ ಅಳವಡಿಸಿದ ಪೈಪ್‌ಲೈನ್, ಹೊಳೆಯ ಬದಿಯಲ್ಲಿ ನಿರ್ಮಿಸಿದ ಜಾಕ್‌ವೆಲ್.. ಆದರೂ ಹಲವು ಪ್ರದೇಶಕ್ಕೆ ನೀರಿಲ್ಲ.

ಇವು ಸಮೀಪದ ಬೇತು ಗ್ರಾಮಕ್ಕೆ ಕಲ್ಪಿಸಲಾದ ನೀರು ಸರಬರಾಜು ಯೋಜನೆಯ ವ್ಯವಸ್ಥೆ. ವ್ಯವಸ್ಥೆ ಸರಿಯಿಲ್ಲದ್ದರಿಂದ ಗ್ರಾಮಸ್ಥರ ನೀರಿನ ಬವಣೆಗೆ ಕೊನೆಯೇ ಇಲ್ಲದಾಗಿತ್ತು.

ಪೈಪ್‌ಲೈನ್ ಒಡೆದರೆ ದುರಸ್ತಿಯ ಸಮಸ್ಯೆ, ಪಂಪ್‌ಸೆಟ್ ಕೆಟ್ಟರೆ ಮಳೆಗಾಲದಲ್ಲಿ ಹೊಳೆಯ ಬದಿಗೆ ಹೋಗುವಂತಿಲ್ಲ. ವಿದ್ಯುತ್ ಪರಿವರ್ತಕ ಕೆಟ್ಟರೆ ಸರಿಪಡಿಸುವವರಿಲ್ಲ. ಒಟ್ಟಿನಲ್ಲಿ ಗ್ರಾಮದ ಜನರಿಗೆ ವ್ಯವಸ್ಥಿತ ನೀರು ಸರಬರಾಜು ಕನಸಿನ ಮಾತಾಗಿದೆ.

ಪಟ್ಟಣಕ್ಕೆ ಹೊಂದಿಕೊಂಡಿರುವ ಬೇತು ಗ್ರಾಮದ ಜನರ ನೀರಿನ ಬವಣೆ ಇಂದು ನಿನ್ನೆಯದಲ್ಲ. ಗ್ರಾಮದಲ್ಲಿ ಹಲವು ವರ್ಷಗಳ ಹಿಂದೆ ಸ್ವಜಲಧಾರಾ ಯೋಜನೆಯಡಿ ಬೃಹತ್ ಟ್ಯಾಂಕ್ ಅನ್ನು ನಿರ್ಮಿಸಲಾಯಿತು. ಈ ಟ್ಯಾಂಕ್‌ಗೆ ನೀರು ಪೂರೈಕೆಗಾಗಿ ದೂರದ ಕಕ್ಕಬ್ಬೆ ಹೊಳೆಯ ಬದಿಯಲ್ಲಿ ಜಾಕ್‌ವೆಲ್ ನಿರ್ಮಿಸಿ ನೀರು ಪೂರೈಕೆ ಕೈಗೊಳ್ಳಲಾಯಿತು. ಯೋಜನೆಯಿಂದ ಗ್ರಾಮಸ್ಥರಿಗೆ ಪ್ರಯೋಜನವಾಗಿತ್ತು. ಆದರೆ, ಪದೇ ಪದೇ ಪೈಪ್‌ಲೈನ್ ಸಮಸ್ಯೆಯಿಂದಾಗಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿತ್ತು. ನಂತರ ಸಮಸ್ಯೆ ಮುಂದುವರೆದು ಕಳೆದೊಂದು ವರ್ಷದಿಂದ ನೀರು ಪೂರೈಕೆ ಆಗದೇ ಜನರು ಬವಣೆ ಹೇಳತೀರದಾಗಿದೆ. ಅಲ್ಲಲ್ಲಿ ಇರುವ ಕೊಳವೆಬಾವಿಗಳಿದ್ದರೂ ಪ್ರಯೋಜನವಿಲ್ಲದಾಗಿದೆ.

ನೀರು ಪೂರೈಸಲು ಗ್ರಾಮ ಪಂಚಾಯಿತಿ ವತಿಯಿಂದ ಕಕ್ಕಬ್ಬೆ ಹೊಳೆಯ ಬದಿ ಅನುಕೂಲಕರ ಸ್ಥಳದಲ್ಲಿ ಜಾಕ್‌ವೆಲ್ ನಿರ್ಮಿಸಲು ಯೋಜನೆ ಹಾಕಿಕೊಂಡಿತು. ರಸ್ತೆಯ ಬದಿಯಲ್ಲಿ ಪೈಪ್‌ಲೈನ್ ಅಳವಡಿಸಿ ನೀರು ಪೂರೈಕೆ ಮಾಡಲು ನಿರ್ಮಿಸಲಾಯಿತು. ಜಾಕ್‌ವೆಲ್ ಮಾತ್ರ ನಿರ್ಮಾಣಗೊಂಡರೂ ಕಾರಣಾಂತರಗಳಿಂದ ವಿದ್ಯುತ್ ಪಂಪ್ ಸ್ಥಳಾಂತರ, ಪೈಪ್‌ಲೈನ್ ಅಳವಡಿಕೆ ಸೇರಿದಂತೆ ಯಾವ ಕೆಲಸವೂ ಅರಂಭಗೊಳ್ಳದೇ ಯಥಾಸ್ಥಿತಿ ಮುಂದುವರೆದಿದೆ.

ಸಾಕಷ್ಟು ಸಮಸ್ಯೆಗೆ ಕಾರಣವಾದ ಸ್ವಜಲಧಾರಾ ಯೋಜನೆಯನ್ನು ಬದಿಗೊತ್ತಿ ಪರ್ಯಾಯ ವ್ಯವಸ್ಥೆಗೆ ಮುಂದಾಗಿರುವುದು ಗ್ರಾಮದ ಜನತೆಗೆ ಸ್ವಲ್ಪ ನೆಮ್ಮದಿ ತಂದಿದೆ.

ಈಚೆಗೆ ಕೈಗೊಂಡ ಕೆಲವು ಯೋಜನೆಗಳು ಜನರ ನೀರಿನ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ನೀಗುತ್ತಿವೆ. ಇದೀಗ ಕೆಲವು ಭಾಗಗಳಿಗೆ ನೀರು ಸರಬರಾಜು ಮಾಡಲು ಪರ್ಯಾಯ ವ್ಯವಸ್ಥೆ ಕೈಗೊಳ್ಳಲಾಗಿದೆ. ಪರಿಶಿಷ್ಟ ಜಾತಿ ಕಾಲೊನಿಗೆ ಕೊಳವೆಬಾವಿ, ಸಂಗ್ರಹ ಟ್ಯಾಂಕ್, ಪೈಪ್‌ಲೈನ್ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ₹ 5 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗಿದ್ದು ನೀರಿನ ಸಮಸ್ಯೆ ಸ್ವಲ್ಪಮಟ್ಟಿಗೆ ಬಗೆಹರಿದಂತಾಗಿದೆ.

ಹೊಳೆಯ ನೀರನ್ನು ಬಳಸುವ ಯೋಜನೆಯನ್ನು ಕೈಬಿಟ್ಟು ಸ್ವಜಲಧಾರಾ ಯೋಜನೆಯಡಿ ನಿರ್ಮಿಸಿದ ಟ್ಯಾಂಕ್ ಅನ್ನು ಬಳಸಿಕೊಳ್ಳಲು ಯೋಜಿಸಲಾಗಿದೆ. ಮತ್ತೊಂದು ಕೊಳವೆಬಾವಿ ಕೊರೆಸಿ ನೀರು ಪೂರೈಕೆಗೆ ಕ್ರಮ ಕೈಗೊಂಡರೆ ನೀರಿನ ಬವಣೆ ಅಂತ್ಯ ಕಾಣಬಹುದು ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT