ಮಡಿಕೇರಿ: ಜೀವನದಿ ಕಾವೇರಿ, ಲಕ್ಷ್ಮಣತೀರ್ಥ, ಪಯಸ್ವಿನಿ... ಹೀಗೆ ಸಾಲು ಸಾಲು ನದಿ, ಉಪನದಿಗಳ ತವರು ಎನಿಸಿದ ಕೊಡಗು ರಾಜ್ಯದ ಇತರ ಜಿಲ್ಲೆಗಳಂತೆ ಜಲಕ್ಷಾಮದ ಪರಿಸ್ಥಿತಿಯನ್ನು ಅನುಭವಿಸುತ್ತಿದೆ. ಹಿಂದೆ ಬಿರು ಬೇಸಿಗೆ ಎಷ್ಟೇ ಕಾಡಿದರೂ ಈ ಪರಿಯಲ್ಲಿ ನೀರಿನ ಕೊರತೆಯಾಗುತ್ತಿರಲಿಲ್ಲ ಎಂದು ಹಿರಿಯರು ಹೇಳುತ್ತಾರೆ. ಆದರೆ, ಈ ವರ್ಷ ಎರಡು ತಿಂಗಳು ಮಳೆ ಬಾರದ ಕಾರಣಕ್ಕೆ ನದಿ, ತೊರೆ, ತೋಡುಗಳು ಮಾತ್ರವಲ್ಲ ಅಂತರ್ಜಲವೂ ಬರಿದಾಗಿದೆ.
ಬತ್ತುತ್ತಿರುವ ಕೊಳವೆಬಾವಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಉತ್ತಮ ಫಸಲನ್ನು ಪಡೆಯುವುದಿರಲಿ, ಕನಿಷ್ಠ ತೋಟದಲ್ಲಿರುವ ಗಿಡಗಳನ್ನು ಉಳಿಸಿಕೊಳ್ಳಲು ಕೊಳವೆಬಾವಿಗಳನ್ನು ಕೊರೆಯುವಂತಹ ಸ್ಥಿತಿ ಎದುರಾಗಿದೆ. ಮೊದಲೆಲ್ಲ ಗರಿಷ್ಠ ಎಂದರೆ 300 ಅಡಿಗೆ ಸಿಗುತ್ತಿದ್ದ ನೀರು ಈಗ 600 ಅಡಿ ಕೊರೆದರೂ ದುರ್ಲಭ ಎನಿಸುವಂತಾಗಿದೆ. ನೀರು ಸಿಗದೇ ರೈತರ ಸ್ಥಿತಿ ನಿಜಕ್ಕೂ ಶೋಚನೀಯ ಹಂತಕ್ಕೆ ತಲುಪಿದೆ.
ಈ ವರ್ಷ ಮಾರ್ಚ್ ಮಧ್ಯಭಾಗ ಕಳೆದರೂ ‘ಹೂಮಳೆ’ ಇನ್ನೂ ಬಂದಿಲ್ಲ. ಎಲ್ಲೆಡೆ ನೀರಿನ ಹರಿವು ಸ್ತಬ್ಧಗೊಳ್ಳುತ್ತಿದೆ. ಪ್ರವಾಹ ಸೃಷ್ಟಿಸುತ್ತಿದ್ದ ಭಾಗಮಂಡಲದ ಕಾವೇರಿ, ಕನ್ನಿಕೆಯರು, ಗೋಣಿಕೊಪ್ಪಲಿನ ಕೀರೆಹೊಳೆ, ಲಕ್ಷ್ಮಣತೀರ್ಥ ನದಿಗಳಲ್ಲಿ ಈಗ ಮೊಣಕಾಲುದ್ದು ನೀರು ಮಾತ್ರವೇ ಇದೆ. ಜಲಚರಗಳು ಬದುಕಲು ಹೆಣಗಾಡುವಂತಹ ಸ್ಥಿತಿ ಸೃಷ್ಟಿಯಾಗಿದೆ. ಇದು ಕೊಡಗಿನ ಜನತೆಗೆ ಜಲಸಾಕ್ಷರತೆ ನೀಡಲು ಸಕಾಲ ಎನಿಸಿದೆ.
ಇಂದು ವಿಶ್ವ ಜಲದಿನ: ಹನಿ ನೀರಿಗೆ ನೂರು ಬೆಲೆ
‘ಶಾಂತಿಗಾಗಿ ನೀರು’ ಎಂಬ ಘೋಷವಾಕ್ಯದೊಂದಿಗೆ ವಿಶ್ವ ಜಲ ದಿನ (ಮಾರ್ಚ್ 22) ಮತ್ತೊಮ್ಮೆ ಬಂದಿದೆ. ನೀರು ನಮ್ಮ ಶಾಂತಿಗೆ ಕಾರಣವಾಗಬೇಕೇ ಹೊರತು ಎಂದೂ ಕೂಡ ಸಂಘರ್ಷಕ್ಕೆ ಕಾರಣವಾಗಬಾರದು ಎಂಬುದು ಈ ಘೋಷಣೆಯ ಹಿಂದಿನ ತತ್ವ. ಕೊಡಗು ಜಿಲ್ಲೆಯಲ್ಲಿ ಈ ಬಾರಿ ಹಲವೆಡೆ ನೀರಿಗೆ ತತ್ವಾರ ಉಂಟಾಗಿದೆ. ವಿಶೇಷವಾಗಿ ಕೃಷಿ ಭೂಮಿಗಳು ಒಣಗುತ್ತಿವೆ. ಜಿಲ್ಲೆಯ ಭತ್ತದ ಗದ್ದೆಗಳು ನೀರು ಹಿಂಗಿಸುವ ತಾಣಗಳಾಗದೆ ಉಪಯೋಗ ರಹಿತ ಸ್ಥಳಗಳಾಗುತ್ತಿವೆ. ಏರುತ್ತಿರುವ ಉತ್ಪಾದನಾ ವೆಚ್ಚ ಕಾರ್ಮಿಕರ ಕೊರತೆ ಹವಾಮಾನ ವೈಪರೀತ್ಯ ಮತ್ತಿತರ ಕಾರಣಗಳಿಂದ ಭತ್ತದ ಕೃಷಿಕರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖಗೊಳ್ಳುತ್ತಿದೆ. ಇದರಿಂದ ಅಂತರ್ಜಲವೂ ಇಳಿಮುಖವಾಗುತ್ತಿದೆ. ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ರೈತರು ಭತ್ತದ ಕೃಷಿ ಮಾಡುತ್ತಿದ್ದರು. ಗದ್ದೆಗಳಲ್ಲಿ ನೀರು ಹಿಂಗಿಸುತ್ತಿದ್ದರು. ಪರಿಣಾಮ ಬೇಸಿಗೆ ಅವಧಿಯಲ್ಲಿ ನೀರಿಗೆ ಹಾಹಾಕಾರ ಉಂಟಾಗುತ್ತಿರಲಿಲ್ಲ. ಇದೀಗ ಭತ್ತದ ಗದ್ದೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಮುಖಗೊಳ್ಳುತ್ತಿದ್ದು ಎಲ್ಲೆಲ್ಲೂ ನೀರಿನ ಕೊರತೆ ಉಂಟಾಗುತ್ತಿದೆ. ನೀರನ್ನು ಭೂಮಿಯಲ್ಲಿ ಹಿಂಗಿಸುವ ಕಾರ್ಯ ಆಗುತ್ತಿಲ್ಲ. ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಿ ಅವರು ಕೃಷಿ ಮಾಡಲಾಗದೇ ಪಾಳು ಬಿಟ್ಟಿರುವ ಗದ್ದೆಗಳಲ್ಲಿ ಮತ್ತೆ ಕೃಷಿ ಮಾಡುವಂತಹ ಕ್ರಮಗಳನ್ನು ಕೈಗೊಳ್ಳಬೇಕು. ಮತ್ತೆ ಕೊಡಗಿನ ಎಲ್ಲ ಗದ್ದೆಗಳಲ್ಲೂ ಭತ್ತದ ಪೈರು ಚಿಗುರೊಡೆಯುವಂತೆ ಮಾಡುವ ಜವಾಬ್ದಾರಿ ಕೇವಲ ರೈತರ ಮೇಲಲ್ಲ ಹೆಚ್ಚಾಗಿ ಸರ್ಕಾರದ ಮೇಲಿದೆ ಎಂಬುದನ್ನು ಜನಪ್ರತಿನಿಧಿಗಳೂ ಮರೆಯಬಾರದು.
ಲಕ್ಷ್ಮಣತೀರ್ಥ ಕೀರೆಹೊಳೆಯ ಮಡಿಲಿನಲ್ಲಿ ನೀರಿಗೆ ಬರ!
ಗೋಣಿಕೊಪ್ಪಲು: ಲಕ್ಷ್ಮಣತೀರ್ಥ ನದಿ ಹಾಗೂ ಕೀರೆಹೊಳೆಯ ಮಡಿಲು ಎನಿಸಿದ ಗೋಣಿಕೊಪ್ಪಲು ಪೊನ್ನಂಪೇಟೆ ಭಾಗದಲ್ಲಿ ಈಗ 3ರಿಂದ 4 ದಿನಗಳಿಗೆ ಒಮ್ಮೆ ಕುಡಿಯುವ ನೀರು ಸರಬರಾಜು ಮಾಡುವ ಸ್ಥಿತಿ ಒದಗಿದೆ. ಬಾಳೆಲೆ ತಿತಿಮತಿ ಪಾಲಿಬೆಟ್ಟ ಅರುವತ್ತೊಕ್ಕಲು ಆಮ್ಮತ್ತಿ ಅತ್ತೂರು ಕಿರುಗೂರು ನಲ್ಲೂರು ಭಾಗಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗುವ ಎಲ್ಲ ಸಾಧ್ಯತೆಗಳೂ ಗೋಚರಿಸುತ್ತಿವೆ. ಸುಮಾರು 40 ವರ್ಷಗಳ ಹಿಂದೆ ಗೋಣಿಕೊಪ್ಪಲು ಪಟ್ಟಣದ ಜನರಿಗೆ ಕುಡಿಯುವ ನೀರಿನ ಪ್ರಮುಖ ಮೂಲವಾಗಿದ್ದ ಕೀರೆಹೊಳೆ ಈಗ ಸಂಪೂರ್ಣ ಬರಿದಾಗಿದೆ. 20 ವರ್ಷಗಳ ಹಿಂದೆ ಲಕ್ಷ್ಮಣತೀರ್ಥ ಹಾಗೂ ಕೀರೆಹೊಳೆಗಳು ಬೇಸಿಗೆ ಕಳೆದು ಮುಂಗಾರು ಮಳೆ ಆರಂಭವಾಗುವವರೆಗೂ ಹರಿಯುತ್ತಿದ್ದವು. ಆದರೆ ಈ ವರ್ಷ ಮಾತ್ರ ಸಂಪೂರ್ಣವಾಗಿ ಜೀವಂತಿಕೆ ಕಳೆದು ಕೊಂಡಿವೆ. ಅಮ್ಮತ್ತಿ ಭಾಗದಲ್ಲಿ ಹುಟ್ಟಿ ಕಾಫಿ ತೋಟದ ನಡುವೆ ಹರಿದು ಗೋಣಿಕೊಪ್ಪಲು ಭಾಗದಲ್ಲಿ ಮೈ ದಳೆದು ಕಿರುಗೂರು ನಲ್ಲೂರು ಮಾರ್ಗವಾಗಿ ಸಾಗಿ ಬೇಸಗೂರು ಬಳಿ ಲಕ್ಷ್ಮಣ ತೀರ್ಥ ನದಿ ಸೇರುತ್ತಿದ್ದ ಕೀರೆಹೊಳೆ ಒಣಗಿ ಹೋಗಿದೆ. ಈ ನದಿಯ ಹೊಂಡಗಳಲ್ಲಿ ಮಾತ್ರ ಪಕ್ಷಿಗಳು ಕುಡಿಯುವಷ್ಟು ನೀರು ಮಾತ್ರ ಹಳದಿ ಬಣ್ಣದಲ್ಲಿ ನಿಂತಿದೆ. ಮತ್ತೊಂದು ಕಡೆ ಬ್ರಹ್ಮಗಿರಿ ಪರ್ವತದಲ್ಲಿ ಜನಿಸಿ ಶ್ರೀಮಂಗಲ ನಾಲ್ಕೇರಿ ಕಾನೂರು ಕೊಟ್ಟಗೆರಿ ಬಾಳೆಲೆ ನಿಟ್ಟೂರು ಮಾರ್ಗವಾಗಿ ಹರಿಯುವ ಲಕ್ಷ್ಮಣತೀರ್ಥ ನದಿಯೂ ಈಗ ಬತ್ತಿ ಹೋಗಿ 2 ತಿಂಗಳು ಕಳೆದಿದೆ. ಗೋಣಿಕೊಪ್ಪಲಿನ ಸ್ಟಂಟ್ ಮಾಸ್ಟರ್ ಹಾಗೂ ಸಿನಿಮಾ ನಟ ಫಾಯಾಜ್ ಖಾನ್ (60) ಅವರು ಕೀರೆಹೊಳೆಯಲ್ಲಿನ ನೀರನ್ನು ನೋಡಿಕೊಂಡೇ ತಲೆ ಬಾಚುತ್ತಿದ್ದರು. ಅಷ್ಟು ಪರಿಶುದ್ಧವಾದ ಹೊಳೆ ಇಂದು ಸಂಪೂರ್ಣ ಮಲೀನವಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.
ಎಂದೂ ಬತ್ತಿರದ ಕೆರೆಗಳು ಬತ್ತುತ್ತಿವೆ!
ಸೋಮವಾರಪೇಟೆ: ತಾಲ್ಲೂಕಿನಲ್ಲಿ ಈ ವರ್ಷದ ಬೇಸಿಗೆಯಲ್ಲಿ ಎಂದೂ ಬತ್ತಿರದ ಕೆರೆಗಳು ಬತ್ತುತ್ತಿದ್ದು ಆತಂಕ ಮೂಡಿಸಿದೆ. ಕಳೆದ ಬಾರಿಯ ಮುಂಗಾರು ಕೈಕೊಟ್ಟಿದ್ದರಿಂದ ತೀವ್ರ ಬರಗಾಲ ಕಾಡುತ್ತಿವೆ. ತಾಲ್ಲೂಕಿನಾದ್ಯಂತ ಹೊಳೆ ತೊರೆಗಳು ತನ್ನ ಹರಿವನ್ನು ಸ್ಥಗಿತಗೊಳಿಸಿದ್ದರೆ ಕೆರೆ ಕಟ್ಟೆಗಳು ಒಣಗಿದ್ದು ಜನ-ಜನುವಾರುಗಳು ಕುಡಿಯುವ ನೀರಿಗಾಗಿ ಹಪಾಹಪಿಸುತ್ತಿವೆ. ಕಾಡು ಪ್ರಾಣಿಗಳು ಕುಡಿಯುವ ನೀರಿಗಾಗಿ ಅಲೆಯುತ್ತಿದ್ದರೆ ಕೆಲವೆಡೆ ಮನುಷ್ಯರು ಸಹ ಪರದಾಡುತ್ತಿರುವುದನ್ನು ಕಾಣಬಹುದು. ಯಥೇಚ್ಛವಾಗಿ ನೀರಿದ್ದಾಗ ಅದನ್ನು ಸರಿಯಾಗಿ ಬಳಸುವುದು ಮತ್ತು ಮುಂದಿನ ದಿನಗಳ ಬಳಕೆಗೆ ಜಾಗರೂಕತೆಯಿಂದ ಕಾಪಾಡಿಕೊಳ್ಳುವುದು ನಮ್ಮಲ್ಲಿ ಇಂದಿಗೂ ಕಂಡುಬಂದಿಲ್ಲ. ಅವಶ್ಯಕತೆಗೂ ಮೀರಿ ಅಂತರ್ಜಲ ಹೊರ ತೆಗೆದು ದುರ್ಬಳಕೆ ಮಾಡಿಕೊಳ್ಳುವುದು ಹೆಚ್ಚಾಗಿದೆ. ಆದರೆ ಹೆಚ್ಚಿನವರು ಅನಾವಶ್ಯಕವಾಗಿ ಹರಿಯುವ ನೀರನ್ನು ಭೂಮಿಗೆ ಹಿಂಗಿಸುವ ಕೆಲಸ ಮಾಡುತ್ತಿಲ್ಲ. ಇದರಿಂದಾಗಿ ಅಂತರ್ಜಲವೂ ಕುಸಿಯುತ್ತಿದೆ. ಹೆಚ್ಚಿನ ಕೊಳವೆ ಬಾವಿಗಳಲ್ಲಿ ಒಂದೆರಡು ಗಂಟೆ ಮಾತ್ರ ಹೊರಗೆ ನೀರು ತೆಗೆಯಲು ಸಾಧ್ಯವಾಗುತ್ತಿದೆ. ಬಿಸಿಲು ಇದೇ ರೀತಿಯಲ್ಲಿ ಮುಂದುವರೆದಲ್ಲಿ ಇನ್ನೂ ಸಂಕಷ್ಟಕ್ಕೀಡಾಗಬೇಕಾದ ಪರಿಸ್ಥಿತಿ ಎಲ್ಲರದ್ದಾಗಿದೆ. ಗ್ರಾಮೀಣ ಭಾಗಗಳಲ್ಲಿ ಹಲವು ಕೆರೆಗಳು ಬತ್ತಿ ಹೋಗಿರುವುದರಿಂದ ದಿನನಿತ್ಯಕ್ಕೆ ಬಳಸುವ ನೀರಿಗೆ ಪರದಾಡುವಂತಾಗಿದೆ. ಯಾವ ಬೇಸಿಗೆಯಲ್ಲಿಯೂ ಬತ್ತದ ಕೆರೆಗಳು ಈ ವರ್ಷ ಒಣಗಿಹೋಗಿವೆ. ಗಣಗೂರು ಗ್ರಾಮದ ಊರುಬಾಗಿಲು ಕೆರೆಯಲ್ಲಿ ಎಲ್ಲ ವರ್ಷಗಳಲ್ಲಿಯೂ ನೀರನ್ನು ಕಾಣಬಹುದಾಗಿತ್ತು. ಆದರೆ ಈ ಭಾರಿ ಫೆಬ್ರವರಿಯಲ್ಲಿಯೇ ಒಣಗಿಹೋಗಿದೆ ಎಂದು ಗಣಗೂರಿನ ದುಶ್ಯಂತ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.