ನೆರೆ ಸೃಷ್ಟಿಸಿದ್ದ ಹೊಳೆಯಲ್ಲಿ ಈಗ ನೀರಿನ ಕೊರತೆ

7
ಕುಗ್ಗಿದ ಮಳೆ: ಹಾರಂಗಿ ನದಿಯಲ್ಲಿ ಕಡಿಮೆಯಾದ ನೀರು

ನೆರೆ ಸೃಷ್ಟಿಸಿದ್ದ ಹೊಳೆಯಲ್ಲಿ ಈಗ ನೀರಿನ ಕೊರತೆ

Published:
Updated:
Deccan Herald

ಕುಶಾಲನಗರ: ಸಮೀಪದ ಕೂಡಿಗೆ ಬಳಿ ಕಾವೇರಿ ನದಿನೊಂದಿಗೆ ಸೇರ್ಪಡೆಯಾಗುವ ಹಾರಂಗಿ ನದಿಯಲ್ಲಿ ಈಗ ನೀರಿನ ಕೊರತೆ ಎದ್ದು ಕಾಣುತ್ತಿದೆ. ಮುಂದಿನ ದಿನಗಳಲ್ಲಿ ನದಿತೀರದ ಗ್ರಾಮಗಳ ಜನರಿಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ.

ಜಿಲ್ಲೆಯಲ್ಲಿ ಜೂನ್‌ನಲ್ಲಿ ವಾಡಿಕೆಯಂತೆ ಆರಂಭವಾದ ಮಳೆ ನಂತರ ಜುಲೈ ಮತ್ತು ಆಗಸ್ಟ್‌ನಲ್ಲಿ ವ್ಯಾಪಾಕವಾಗಿ ಸುರಿಯಿತು. ಇದರಿಂದ ಕೆ.ಆರ್.ಎಸ್ ಜಲಾಶಯದ ಪ್ರಮುಖ ಜಲಸಂಪನ್ಮೂಲವಾದ ಹಾರಂಗಿ ಜಲಾಶಯವು ಜುಲೈ ಮೊದಲ ವಾರವೇ ಭರ್ತಿಯಾಗಿತ್ತು. ಜಲಾಶಯಕ್ಕೆ ಈ ವರ್ಷ ಆಗಸ್ಟ್ ಅಂತ್ಯಕ್ಕೆ 70.75 ಟಿಎಂಸಿ ಅಡಿ ದಾಖಲೆ ಪ್ರಮಾಣದ ನೀರು ಹರಿದು ಬಂದಿತ್ತು.

ಜಲಾಶಯದಿಂದ ಆಗಸ್ಟ್ ಎರಡನೇ ವಾರ ಅಧಿಕ ಪ್ರಮಾಣದಲ್ಲಿ ನದಿಗೆ ನೀರು ಹರಿಬಿಟ್ಟಿದ್ದರಿಂದ ಹಾರಂಗಿ ನದಿ ಅಪಾಯದ ಮಟ್ಟ ಮೀರಿ ನದಿ ಅಂಚಿನ ಗ್ರಾಮಗಳು ಮುಳುಗಿ ಹೋಗಿದ್ದವು. ಕೂಡಿಗೆ ಬಳಿ ಹಾರಂಗಿ ನದಿಗೆ ನಿರ್ಮಿಸಿದ್ದ ಸೇತುವೆಯ ಮಟ್ಟಕ್ಕೆ ನೀರು ಹರಿಯುತ್ತಿದ್ದ ಹಿನ್ನೆಲೆಯಲ್ಲಿ ಮಡಿಕೇರಿ– ಹಾಸನ ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಲಾಗಿತ್ತು.

ಸೆಪ್ಟೆಂಬರ್‌ನಲ್ಲಿ ಮಳೆ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯದಲ್ಲಿನ ನೀರಿನ ಪ್ರಮಾಣದಲ್ಲೂ ಗಣನೀಯವಾಗಿ ಇಳಿಕೆ ಕಂಡು ಬಂದಿದೆ. 20 ದಿನಗಳ ಹಿಂದೆ ಜಲಾಶಯದ ಕ್ರಸ್ಟ್‌ಗೇಟ್‌ಗಳಿಂದ ನದಿಗೆ ಹರಿಸುತ್ತಿದ್ದ ನೀರನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಣೆಕಟ್ಟೆ ವಿಭಾಗದ ಸಹಾಯಕ ಎಂಜಿನಿಯರ್ ನಾಗರಾಜು ತಿಳಿಸಿದ್ದಾರೆ.

ಜಲಾಶಯದ ಗರಿಷ್ಠಮಟ್ಟ 2,859 ಅಡಿ ಇದ್ದು, ಇಂದಿನ ಮಟ್ಟ 2854.53 ಅಡಿಯಾಗಿದೆ. ಜಲಾಶಯದಲ್ಲಿ 6.9 ಟಿಎಂಸಿ ಅಡಿ ನೀರು ಸಂಗ್ರಹವಿದ್ದು, ಇದರಲ್ಲಿ 6.2 ಟಿಎಂಸಿ ಅಡಿ ನೀರು ಮಾತ್ರ ಬಳಕೆಗೆ ಲಭ್ಯವಿದೆ.

ಆಗಸ್ಟ್‌ನಲ್ಲಿ 80 ಸಾವಿರ ಕ್ಯುಸೆಕ್‌ ಒಳಹರಿವು ಇದ್ದ ಜಲಾಶಯದಲ್ಲಿ ಈಗ ಕೇವಲ 900 ಕ್ಯುಸೆಕ್‌ ಮಾತ್ರ ಇದೆ. ಕಾಲುವೆಗೆ 600 ಕ್ಯುಸೆಕ್‌ ನೀರನ್ನು ಹರಿಸಲಾಗುತ್ತಿದ್ದು, ನದಿಗೆ ಹರಿಸುತ್ತಿದ್ದ ನೀರನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ನದಿಯಲ್ಲಿ ನೀರು ಕೊರತೆ ಕಂಡುಬಂದಿದೆ.

ಕೂಡುಮಂಗಳೂರು ಹಾಗೂ ಕೂಡಿಗೆ ವ್ಯಾಪ್ತಿಯ ಅನೇಕ ಗ್ರಾಮಗಳು ಕುಡಿಯುವ ನೀರಿಗಾಗಿ ಹಾರಂಗಿ ನದಿಯನ್ನು ಅವಲಂಬಿಸಿವೆ. ಆದರೆ ಈಗ ಬೇಸಿಗೆಗೂ ಮುನ್ನವೇ ನದಿಯಲ್ಲಿ ನೀರು ಸಂಪೂರ್ಣ ಕ್ಷೀಣಿಸಿರುವುದರಿಂದ ನದಿದಂಡೆಯ ಗ್ರಾಮಗಳ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಕಂಡುಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !