ಮಡಿಕೇರಿ: ಪ್ರಾಕೃತಿಕವಾಗಿ ಅತಿ ಸೂಕ್ಷ್ಮ ಜಿಲ್ಲೆಯಾಗಿರುವ ಕೊಡಗಿನಲ್ಲಿ ಬೃಹತ್ ಪ್ರಮಾಣದ ಭೂಪರಿವರ್ತನೆಗೆ ಹಾಗೂ ಭೂ ವಿಲೇವಾರಿಗೆ ತಡೆ ಹಾಕದಿದ್ದರೆ ವಯನಾಡ್ ಮಾದರಿಯ ದುರಂತ ಸಂಭವಿಸಬಹುದು ಹಾಗೂ ಕೊಡವರು ತಮ್ಮ ನೆಲೆಯನ್ನು ಕಳೆದುಕೊಳ್ಳಬಹುದು ಎಂಬ ಆತಂಕವನ್ನು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ವ್ಯಕ್ತಪಡಿಸಿದರು.
ಹುದಿಕೇರಿಯಲ್ಲಿ ಅವರು ಸೋಮವಾರ ಮಾನವ ಸರಪಳಿ ರಚಿಸಿ, ದೊಡ್ಡ ಪ್ರಮಾಣದ ಭೂಪರಿವರ್ತನೆ ಮತ್ತು ಭೂವಿಲೇವಾರಿಯಿಂದಾಗುವ ಅನಾಹುತಗಳನ್ನು ಕುರಿತು ಮಾತನಾಡಿದರು.
‘ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯಲ್ಲಿ ತೊಡಗಿರುವ ಬಂಡವಾಳಶಾಹಿಗಳು ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸಮಾಜ ಸೇವೆಯ ಮುಖವಾಡ ತೊಟ್ಟು ಜಿಲ್ಲೆಯ ಜನರಿಗೆ ವೈದ್ಯಕೀಯ ಸೇವೆ, ಆಂಬ್ಯುಲೆನ್ಸ್, ಪ್ರಯಾಣಿಕರ ತಂಗುದಾಣ ಸೇರಿದಂತೆ ವಿವಿಧ ಆಮಿಷಗಳನ್ನೊಡ್ಡಿ ಸಮಾಜ ಸೇವೆಯ ನಾಟಕವಾಡುತ್ತಿದ್ದಾರೆ’ ಎಂದೂ ಅವರು ಆರೋಪಿಸಿದರು.
‘ಇವರಿಂದ ಉಂಟಾಗುತ್ತಿರುವ ಪ್ರಾಕೃತಿಕ ವಿಕೋಪದ ಅಪವಾದಗಳನ್ನು ಅಮಾಯಕ ಕೊಡವರ ಮೇಲೆ ಹೊರಿಸಲಾಗುತ್ತಿದೆ’ ಎಂದು ದೂರಿದ ಅವರು, ‘ಮಾಫಿಯಾಗಳು ನೀಡುವ ಆಮಿಷಗಳನ್ನು ತಿರಸ್ಕರಿಸಿ ಭೂಅಕ್ರಮಗಳ ವಿರುದ್ಧ ಕೊಡವರು ಜಾಗೃತರಾಗದಿದ್ದಲ್ಲಿ ಕೊಡವ ಲ್ಯಾಂಡ್‌ನ್ನು ಕಳೆದುಕೊಳ್ಳುವ ಹೀನಾಯ ಸ್ಥಿತಿ ಬರಬಹುದೆಂದೂ’ ಎಚ್ಚರಿಕೆ ನೀಡಿದರು.
ಹಸಿರ ಪರಿಸರ, ಜಲಪ್ರದೇಶಗಳ ಸಂರಕ್ಷಣೆಗಾಗಿ ಸರ್ಕಾರ ಸೂಕ್ಷ್ಮ ಪರಿಸರ ವಲಯ ಮತ್ತು ವಿಶ್ವ ಪಾರಂಪರಿಕ ತಾಣ ಕಾನೂನನ್ನು ಜಾರಿಗೆ ತಂದಿದೆ. ಆದರೆ, ಕೊಡಗಿನಲ್ಲಿ ಈ ಕಾನೂನು ಬಂಡವಾಳಶಾಹಿಗಳಿಗೆ ಅನ್ವಯವಾಗುತ್ತಿಲ್ಲ, ಬದಲಿಗೆ ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗದ ಮೇಲೆ ಹೇರಲಾಗುತ್ತಿದೆ ಎಂದು ಅವರು ಕಿಡಿಕಾರಿದರು.
ಆದಿಮಸಂಜಾತ ಕೊಡವ ಬುಡಕಟ್ಟು ಜನರು ಇಲ್ಲಿಯವರೆಗೆ ಹಸಿರಿನ ಕೊಡವ ಭೂಮಿಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಆದರೆ ಇಂದು ಭೂಮಾಫಿಯಾ, ರೆಸಾರ್ಟ್ ಮಾಫಿಯಾ, ವಿಲ್ಲಾ, ಟೌನ್ ಶಿಪ್, ಬೃಹತ್ ಭೂಪರಿವರ್ತನೆ, ಭೂವಿಲೇವಾರಿ ಮಾಫಿಯಾಗಳು ಹಾಗೂ ಕಪ್ಪುಹಣದ ಬಂಡವಾಳಶಾಹಿಗಳು ಕೊಡವಲ್ಯಾಂಡ್ ಅನ್ನು ನಾಶ ಮಾಡುತ್ತಿದ್ದಾರೆ ಮತ್ತು ಕೊಡವರನ್ನು ಬಲಿಪಶು ಮಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಬಂಡವಾಳಶಾಹಿಗಳಿಗೆ 99 ವರ್ಷಗಳಿಗೆ ಗುತ್ತಿಗೆ ಆಧಾರದಲ್ಲಿ ನೀಡಿರುವ ಸಾವಿರಾರು ಎಕರೆ ಭೂಮಿಯನ್ನು ಸರ್ಕಾರ ಮೊದಲು ವಶಕ್ಕೆ ಪಡೆಯಲಿ. ಜಿಲ್ಲೆಯಲ್ಲಿ ನಡೆದಿರುವ ಬೃಹತ್ ಭೂಪರಿವರ್ತನೆಗಳ ಕುರಿತು ಶ್ವೇತಪತ್ರ ಹೊರಡಿಸಲಿ ಎಂದೂ ಅವರು ಒತ್ತಾಯಿಸಿದರು.
ಸೆ.30ರಂದು ಶ್ರೀಮಂಗಲದಲ್ಲಿ ಶಾಂತಿಯುತ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಜನಜಾಗೃತಿ ಮಾನವ ಸರಪಳಿಯಲ್ಲಿ ಪಾಲ್ಗೊಂಡಿದ್ದ ಸಿಎನ್‌ಸಿ ಪ್ರಮುಖರು ಹಾಗೂ ಗ್ರಾಮಸ್ಥರು ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ನಿರ್ಣಯ ಕೈಗೊಂಡು ಸಿಎನ್‌ಸಿ ಹೋರಾಟಕ್ಕೆ ಬೆಂಬಲ ಸೂಚಿಸಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಬೊಜ್ಜಂಗಡ ಯಶ್ಮಾ, ಚಕ್ಕೇರ ಜಾನ್ಸಿ, ಮಂಡಂಗಡ ತಾರಾ, ಚಂಗುಲಂಡ ಸೂರಜ್, ಬೊಜ್ಜಂಗಡ ಸುನಿಲ್, ಕೋಳೇರ ರಾಜ, ಬೊಜ್ಜಂಗಡ ಬೋಪಣ್ಣ, ಬೊಜ್ಜಂಗಡ ತಮ್ಮಯ್ಯ, ದಡ್ಡೇರ ಸುರೇಶ್, ನೂರೇರ ಚಿಟ್ಟಿಯಪ್ಪ, ಮಂಡೇಚಂಡ ಪೊನ್ನಪ್ಪ, ಮಂಡಂಗಡ ಬೋಪಣ್ಣ, ಬಲ್ಯಮಿದೇರಿರ ಪ್ರಕಾಶ್, ಚಕ್ಕೇರ ರಮೇಶ್, ಬಲ್ಯಮಾಡ ಸೋಮಯ್ಯ, ಬಲ್ಯಮಾಡ ನಂಜಪ್ಪ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.