ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 49.50 ಕೋಟಿ ಸಂಗ್ರಹ: ಆರೋಪ ಸತ್ಯಕ್ಕೆ ದೂರ: ಕೆ.ವಿಲಿಯಂ ಸ್ಪಷ್ಟನೆ

Last Updated 11 ಜೂನ್ 2020, 12:46 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ 2018ರ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಸುಮಾರು ₹ 49.50 ಕೋಟಿ ಸಂಗ್ರಹಿಸಲಾಗಿದೆಯೆಂಬ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಮೈಸೂರು ಪ್ರಾಂತ್ಯದ ಧರ್ಮಾಧ್ಯಕ್ಷ ಕೆ.ವಿಲಿಯಂ ಇಲ್ಲಿ ಗುರುವಾರ ಸ್ಪಷ್ಟನೆ ನೀಡಿದರು.

ನಗರದ ಸೇಂಟ್‌ ಮೈಕಲರ ದೇವಾಲಯದಲ್ಲಿ ಮಾತನಾಡಿದ ಅವರು, ‘ದೊಡ್ಡಮೊತ್ತದ ಹಣ ಸಂಗ್ರಹಿಸಲಾಗಿದೆ ಎಂಬುದು ಅಪ್ಪಟ ಸುಳ್ಳು. ಆರೋಪ ಮಾಡಿದವರೇ ಸತ್ಯವಾದ ಮಾಹಿತಿಯನ್ನು ನಿಮಗೂ ಕೊಡಬೇಕು, ನಮಗೂ ಕೊಡಬೇಕು. ಅವರ ಆರೋಪ ಆಶ್ಚರ್ಯ ಅನಿಸುತ್ತಿದೆ’ ಎಂದು ಹೇಳಿದರು.

‘ನಾನು ಮಂಗಳೂರಿಗೆ ಹೋಗಿಯೇ ಇಲ್ಲ. ಅಲ್ಲಿ ಹಣ ಸಂಗ್ರಹಿಸಲಾಗಿದೆ ಎಂದು ಹೇಳಿದ್ದಾರೆ. ಇನ್ನು ಸಂತ್ರಸ್ತರ ಹಣ ಸಂಗ್ರಹಕ್ಕಾಗಿ ಸೋನು ನಿಗಮ್ ಅವರ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಕಾರ್ಯಕ್ರಮ ನಡೆದಿಲ್ಲ’ ಎಂದು ಸ್ಪಷ್ಪಡಿಸಿದರು.

ಕೊಡಗು ವಲಯದ ಗುರು ಫಾ.ಮೊದಲೈ ಮುತ್ತು ಮಾತನಾಡಿ, ಮೈಸೂರು ಧರ್ಮಕ್ಷೇತ್ರ ವತಿಯಿಂದ ಹಟ್ಟಿಹೊಳೆ ಚರ್ಚ್‌ಗೆ ಸೇರಿದ 5 ಎಕರೆ ಜಾಗದಲ್ಲಿ ಸಂತ್ರಸ್ತರಿಗೆ ಮನೆ ನಿರ್ಮಿಸುವ ಯೋಜನೆ ರೂಪಿಸಲಾಗಿತ್ತು. ಯೋಜನೆಗೆ ಚರ್ಚ್‍ಗಳಿಂದ ದೇಣಿಗೆ ಸಂಗ್ರಹಿಸಲಾಗಿತ್ತು. 2019ರಲ್ಲಿ ಮನೆ ಕಟ್ಟಲು ನಿರ್ಧರಿಸಲಾಗಿತ್ತು. ಇದಕ್ಕಾಗಿ ಮಣ್ಣು ಪರೀಕ್ಷೆ ಸೇರಿದಂತೆ ಸರ್ಕಾರದ ಅನುಮತಿ ಪಡೆಯಲು ಶಿಫಾರಸು ಮಾಡಲಾಗಿತ್ತು. ಸರ್ಕಾರದಿಂದ ಕಳೆದ ಮೇ 16ರಂದು ಅನುಮತಿ ಸಿಕ್ಕಿದೆ. ಜಿಲ್ಲಾಧಿಕಾರಿ ಹಂತದಲ್ಲಿಯೇ ನಿಯಾಮಾನುಸಾರ ಪರಿಶೀಲಿಸಿ ಕ್ರಮ ವಹಿಸುವಂತೆ ಆದೇಶಿಸಲಾಗಿದೆ. ಕಾಮಗಾರಿ ನಡೆಸಲು ಜಿಲ್ಲಾಡಳಿತದ ಅನುಮತಿ ನಿರೀಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದರು.

ಯೋಜನೆಗೆ ₹ 49.50 ಕೋಟಿ ಸಂಗ್ರಹಿಸಲಾಗಿದೆ ಎಂದು ಆರೋಪಿಸಲಾಗಿದೆ. ಆದರೆ, ಈ ಯೋಜನೆಯ ಮೊತ್ತವೇ ₹ 3.93 ಕೋಟಿ ಎಂದು ಸ್ಪಷ್ಟಪಡಿಸಿದರು.

ಮೂಲಸೌಲಭ್ಯದೊಂದಿಗೆ ಸುಮಾರು 35 ಮನೆ ನಿರ್ಮಿಸಿಕೊಡಲು ಯೋಜನೆ ರೂಪಿಸಿದ್ದೇವೆ. ₹49.50 ಕೋಟಿಯಷ್ಟು ಹಣ ಜಿಲ್ಲಾಡಳಿತಕ್ಕೂ ಕೂಡ ಸಂಗ್ರಹ ಮಾಡಲು ಸಾಧ್ಯವಾಗಿಲ್ಲ. ನಮಗೆ ಸಂಗ್ರಹ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

‘ನಮ್ಮ ಧರ್ಮಾಧ್ಯಕ್ಷರ ಹೆಸರು ಕೆಡಿಸಲು ಈ ರೀತಿ ಆರೋಪ ಮಾಡಿರುವ ಸಾಧ್ಯತೆಯಿದೆ’ ಎಂದು ನುಡಿದರು.

ಬಿಜೆಪಿ ಅಲ್ಪಸಂಖ್ಯಾತ ಕ್ರೈಸ್ತ ಘಟಕದ ರಾಜ್ಯ ಅಧ್ಯಕ್ಷ ಜಾಯಿನಸ್ ಡಿಸೋಜ ಮಾತನಾಡಿ, ಕೆಲವರು ಹತಾಶ ಮನೋಭಾವದಿಂದ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

ಮಡಿಕೇರಿ ಧರ್ಮಕೇಂದ್ರದ ಗುರು ಫಾ.ಆಲ್ಪ್ರೆಡ್ ಜಾನ್ ಮೆಂಡೋನ್ಸಾ, ಸಹಾಯಕ ಗುರು ಫಾ.ನವೀನ್‍ಕುಮಾರ್ ಹಾಜರಿದ್ದರು.

ಏನಿದು ವಿವಾದ?
ಕೊಡಗು ಜಿಲ್ಲೆಯಲ್ಲಿ 2018ರಲ್ಲಿ ಸಂಭವಿಸಿದ್ದ ಪ್ರಕೃತಿ ವಿಕೋಪ ಸಂತ್ರಸ್ತರಿಗೆ, ಮನೆ ನಿರ್ಮಿಸಿಕೊಡಲು ಮೈಸೂರು ಬಿಷಪ್ ಕೆ. ವಿಲಿಯಂ ಅವರು ₹ 49.50 ಕೋಟಿ ಸಂಗ್ರಹಿಸಿದ್ದಾರೆ ಎಂದು ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಒಬ್ಬರು ಆರೋಪಿಸಿದ್ದರು. ಕೊಡಗಿನಲ್ಲಿ ₹ 1.50 ಕೋಟಿ, ಮಂಗಳೂರಿನಲ್ಲಿ ₹ 3.50 ಕೋಟಿ, ಬೆಂಗಳೂರಿನಲ್ಲಿ ₹ 6 ಕೋಟಿ, ಸೋನು ನಿಗಮ್ ಕಾರ್ಯಕ್ರಮದ ಮೂಲಕ ₹ 13 ಕೋಟಿ ಸೇರಿದಂತೆ ಒಟ್ಟು ₹ 49.50 ಕೋಟಿ ಸಂಗ್ರಹಿಸಲಾಗಿದೆ ಎಂದು ಅವರು ಆಪಾದನೆ ಮಾಡಿದ್ದರು. ಈ ಹಣದ ಬಗ್ಗೆ ಮಾಹಿತಿ ನೀಡುವಂತೆ, ಮೈಕಲ್ ಎಫ್. ಸಾಲ್ಡಾನಾ ಬೆಂಗಳೂರಿನ ಬಿಷಪ್‍ಗೆ ಪತ್ರ ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT