ಗೋಣಿಕೊಪ್ಪಲು: ಕನ್ನಡ ಜ್ಯೋತಿ ರಥಯಾತ್ರೆ ಶನಿವಾರ ದಕ್ಷಿಣ ಕೊಡಗಿನ ಆನೆಚೌಕೂರು ಹೆಬ್ಬಾಲಿಗೆ ಆಗಮಿಸಿದಾಗ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪೊನ್ನಂಪೇಟೆ ತಾಲ್ಲೂಕು ಆಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಆನೆಚೌಕೂರು ಅರಣ್ಯ ಗೇಟಿನಲ್ಲಿ ಭುವನೇಶ್ವರಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ರಥವನ್ನು ಜಿಲ್ಲೆಗೆ ಸ್ವಾಗತಿಸಿದರು. ಪಿರಿಯಾಪಟ್ಟಣ ಮೂಲಕ ದಕ್ಷಿಣ ಕೊಡಗಿಗೆ ಆಗಮಿಸಿ ರಥದೊಂದಿಗೆ ಡೊಳ್ಳುಕುಣಿತದ ಕಲಾವಿದರು ಮೆರವಣಿಗೆಗೆ ಕಳೆ ತುಂಬಿದರು.
ಮಧ್ಯಾಹ್ನ 12.30ಕ್ಕೆ ಗೋಣಿಕೊಪ್ಪಲು ಪಟ್ಟಣಕ್ಕೆ ಬಂದ ರಥಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಉಪಾಧ್ಯಕ್ಷೆ ಮಂಜುಳಾ, ಮುಖಂಡರಾದ ಶಿವಾಜಿ ಹಾಗೂ ಗ್ರಾಮ ಪಂಚಾಯಿತಿ ಮತ್ತು ಪೊನ್ನಂಪೇಟೆ ತಾಲ್ಲೂಕು ಪಂಚಾಯಿತಿ ಸದಸ್ಯರು ಬಸ್ ನಿಲ್ದಾಣದಲ್ಲಿ ಪುಷ್ಪಾರ್ಚನೆ ಮಾಡಿದರು. ಕನ್ನಡ ಗೀತೆಗಳು ಮೊಳಗಿದವು, ಕನ್ನಡ ಬಾವುಟ ಹಾರಾಡಿದವು.
ರಥಯಾತ್ರೆ ಕುರಿತು ತಹಶೀಲ್ದಾರ್ ಮೋಹನ್ ಕುಮಾರ್ ಮಾತನಾಡಿ, ‘ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸರ್ಕಾರ ‘ಕರ್ನಾಟಕ 50ರ’ ಸಂಭ್ರಮ ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಿಗೂ ಕನ್ನಡ ಜ್ಯೋತಿ ರಥಯಾತ್ರೆ ಕಳೆದ ನವೆಂಬರ್‌ನಿಂದ ಸಂಚರಿಸುತ್ತಿದೆ’ ಎಂದರು.
‘ದಕ್ಷಿಣ ಕೊಡಗಿನ ಆನೆಚೌಕೂರು ಮೂಲಕ ಕೊಡಗಿಗೆ ಆಗಮಿಸಿರುವ ಕನ್ನಡ ಜ್ಯೋತಿ ರಥ ವಿರಾಜಪೇಟೆ ಮೂಲಕ ಮಡಿಕೇರಿಗೆ ತೆರಳಿ ಬಳಿಕ ಕುಶಾಲನಗರದ ಮೂಲಕ ಹಾಸನ ಜಿಲ್ಲೆಗೆ ತಲುಪಲಿದೆ’ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಮಾತನಾಡಿ, ‘ಕನ್ನಡ ನೆಲ ಜಲದ ಬಗ್ಗೆ ಜನತೆಯಲ್ಲಿ ಅಭಿಮಾನ ಮೂಡಿಸುವ ನಿಟ್ಟಿನಲ್ಲಿ ರಥಯತ್ರೆ ನಡೆಯುತ್ತಿದೆ. ಇದಕ್ಕೆ ಉತ್ತಮ ಸ್ಪಂದನೆ ದೊರೆತಿರುವುದು ಸಂತಸದ ವಿಷಯ’ ಎಂದು ಹೇಳಿದರು.
ಗೋಣಿಕೊಪ್ಪಲಿನಿಂದ ಪೊನ್ನಂಪೇಟೆಗೆ ತೆರಳಿದ ರಥಕ್ಕೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣೀರ ಹರೀಶ್ ಪುಷ್ಪಾರ್ಚನೆ ಮಾಡಿದರು. ತಾಲ್ಲೂಕು ಪಂಚಾಯಿತಿ ಇಒ ಕೊಣಿಯಂಡ ಅಪ್ಪಣ್ಣ, ಸಾಹಿತಿ ಜೆ.ಸೋಮಣ್ಣ, ತಾಲ್ಲೂಕು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಎಂ.ಕೆ.ದೀನಾ, ಬಿಇಒ ಪ್ರಕಾಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಣಜೂರು ಮಂಜುನಾಥ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ. ಚಂದ್ರಕುಮಾರ್, ಕಂದಾಯ ಅಧಿಕಾರಿ ಸುಧೀಂದ್ರ, ಶಿರಸ್ತೇದಾರ್ ಶರೀಫ್, ಗ್ರಾಮ ಸಹಾಯಕರಾದ ಎಚ್.ವೈ.ನಾಗರಾಜು, ಎಚ್.ಎಂ.ಸರೋಜಿನಿ, ಜತಿನ್, ಪೂವಯ್ಯ, ಮುಕುಂದ, ರಾಜೇಶ್, ಚೇತನ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.