ಶನಿವಾರ, ಮೇ 8, 2021
24 °C

ವನ್ಯಜೀವಿ ಹಾವಳಿ ತಪ್ಪಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ವನ್ಯಜೀವಿಗಳಿಂದ ಕೊಡಗಿನ ರೈತರನ್ನು ರಕ್ಷಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಪ್ರಾಂತ ರೈತ ಸಂಘದ ಕೊಡಗು ಘಟಕ ಆಗ್ರಹಿಸಿದೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾ ಸಂಚಾಲಕ ಈ.ರಾ ದುರ್ಗಾಪ್ರಸಾದ್, ಪೊನ್ನಂಪೇಟೆ ತಾಲ್ಲೂಕಿನಲ್ಲಿ ಹುಲಿ ದಾಳಿಗೆ ಮನುಷ್ಯರು, ಜಾನುವಾರುಗಳು ಬಲಿಯಾಗುತ್ತಿದ್ದು, ಜನರು ಆತಂಕದಲ್ಲಿದ್ದಾರೆ. ಕಾಡಾನೆಗಳ ಕಾಟ ಜಿಲ್ಲೆಯಾದ್ಯಂತ ಮುಂದುವರಿದಿದ್ದು, ಜೀವ ಹಾನಿಯೊಂದಿಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ವನ್ಯ ಪ್ರಾಣಿಗಳ ನಿರಂತರ ದಾಳಿಯಿಂದ ರೈತರು, ಕಾರ್ಮಿಕರು ಕಂಗೆಟ್ಟು ಹೋಗಿದ್ದಾರೆ. ಜಿಲ್ಲೆಯ ಜನರು ಅನುಭವಿಸುತ್ತಿರುವ ಸಂಕಷ್ಟಗಳಿಗೆ ರಾಜ್ಯ ಸರ್ಕಾರ ಹಾಗೂ ಇಲ್ಲಿನ ಶಾಸಕರೇ ನೇರ ಕಾರಣ ಎಂದು ಆರೋಪಿಸಿದರು.

ಕಾಡಾನೆ ದಾಳಿಯಿಂದ ಮರಣ ಹೊಂದಿವರ ಕುಟುಂಬಕ್ಕೆ ಸರ್ಕಾರ ₹20 ಲಕ್ಷ ಪರಿಹಾರ ನೀಡಬೇಕು, ಕುಟುಂಬದವರಿಗೆ ಸರ್ಕಾರಿ ಉದ್ಯೋಗ ಒದಗಿಸಬೇಕು. ಆನೆ ದಾಳಿಯಿಂದ ಅಂಗವಿಕಲರಾದವರಿಗೆ ₹10 ಲಕ್ಷ ಪರಿಹಾರ ಕೊಡಬೇಕು ಎಂದು ಕೋರಿದರು.

ತೋಟಗಳಲ್ಲಿ ಕಾರ್ಮಿಕರು ಕೆಲಸ ಮಾಡುವ ಸಂದರ್ಭ ಅವರ ರಕ್ಷಣೆಗೆ ಅರಣ್ಯ ಇಲಾಖೆಯ ಗನ್‌ಮ್ಯಾನ್‌ಗಳನ್ನು ನೇಮಿಸಬೇಕು. ಆನೆ ಹಾವಳಿ ಹೆಚ್ಚಿರುವ ಪ್ರದೇಶಗಳಲ್ಲಿ ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಮತ್ತು ಮರಳಿ ಕರೆತರಲು ಅರಣ್ಯ ಇಲಾಖೆ ವಾಹನ ವ್ಯವಸ್ಥೆ ಮಾಡಬೇಕು. ಆನೆ ದಾಳಿಯಿಂದ ತೋಟಗಳಲ್ಲಿ ಕಾಫಿ ಗಿಡ ಹಾಳಾದರೆ ಸರ್ಕಾರ ಒಂದು ಗಿಡಕ್ಕೆ ₹25,000 ಪರಿಹಾರ ನೀಡಬೇಕು. ಭತ್ತ ಬೆಳೆ ಹಾಳಾದರೆ ಎಕರೆಯೊಂದಕ್ಕೆ ₹60,000 ನೀಡಬೇಕು. ಬಾಳೆಯನ್ನು ನಾಶ ಮಾಡಿದರೆ ಒಂದು ಎಕರೆಗೆ ₹ 50 ಸಾವಿರ ನೀಡಬೇಕು. ಸಿಲ್ವರ್ ಮರಕ್ಕೆ ₹15 ಸಾವಿರ, ತೆಂಗಿಗೆ ₹ 25 ಸಾವಿರ ಹಾಗೂ ಅಡಿಕೆಗೆ ₹15 ಸಾವಿರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಸಂಘದ ಪ್ರಮುಖರಾದ ಹನೀಫ್ ಮಾತನಾಡಿ, ವನ್ಯ ಪ್ರಾಣಿಗಳ ಹಾವಳಿಯಿಂದ ಜಿಲ್ಲೆಯ ಜನತೆ ಸಮಸ್ಯೆ ಎದುರಿಸುತ್ತಿದ್ದರೂ ಶಾಸಕರು ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ. ಈಗಾಗಲೇ ಸಾಕಷ್ಟು ನಷ್ಟ ಸಂಭವಿಸಿದ್ದು, ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಇದೇ ಮುಂದುವರಿದಲ್ಲಿ ಜಿಲ್ಲೆಯ ರೈತರು ಕೃಷಿಯನ್ನೇ ಕೈಬಿಡುವ ಅನಿವಾರ್ಯತೆ ಸೃಷ್ಟಿಯಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಮುಖರಾದ ಕೆ.ಎ ಹಂಸ, ಎಂ.ಎ ಬಾಬುಟಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು