ಮಡಿಕೇರಿ: ‘ತಂದೆ ಇಲ್ಲದ ಮಕ್ಕಳ ಖಾತೆಗೆ ವರ್ಷಕ್ಕೆ ₹24 ಸಾವಿರ ವಿದ್ಯಾರ್ಥಿ ವೇತನದ ಸೌಲಭ್ಯವಿದೆ’ ಎಂಬ ಸಂದೇಶ ವಾಟ್ಸ್‌ಆ್ಯಪ್‌ಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ನೂರಾರು ಸಂಖ್ಯೆಯಲ್ಲಿ ಜನರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸುಮಾರು 350ಕ್ಕೂ ಅಧಿಕ ಮಂದಿ ಅರ್ಜಿ ಹಾಕಿದ್ದಾರೆ.
ಈ ಯೋಜನೆಯ ಸೌಲಭ್ಯ ಪಡೆಯಲು ಸಾರ್ವಜನಿಕರು ಯಾವುದೇ ಮಧ್ಯವರ್ತಿಗಳನ್ನು ಅಥವಾ ಏಜೆನ್ಸಿಗಳನ್ನು ಸಂಪರ್ಕಿಸಬೇಕಿಲ್ಲ. ಬದಲಿಗೆ, ನೇರವಾಗಿ ನಗರದ ಕಾನ್ವೆಂಟ್ ಜಂಕ್ಷನ್‌ನಲ್ಲಿರುವ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿಗೆ ಬಂದರೆ ಸಾಕು ಅಲ್ಲಿಯೇ ಅರ್ಜಿ ನೀಡಿ ಸ್ವೀಕರಿಸಲಾಗುತ್ತದೆ.
ಈ ಕುರಿತು ‘ಪ್ರಜಾವಾಣಿ’ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಈರಾಸ್ವಾಮಿ ಅವರನ್ನು ಸಂಪರ್ಕಿಸಿದಾಗ ಅವರು, ‘18 ವರ್ಷದೊಳಗಿನ ಮಕ್ಕಳನ್ನು ಕೌಟುಂಬಿಕ ಹಾಗೂ ವಿಸ್ತೃತ ಕುಟುಂಬದ ವಾತಾವರಣದಲ್ಲಿ ಆರೈಕೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ‘ಮಿಷನ್ ವಾತ್ಸಲ್ಯ’ ಯೋಜನೆಯಡಿಯಲ್ಲಿ ‘ಪ್ರಾಯೋಜಕತ್ವ’ ಕಾರ್ಯಕ್ರಮವನ್ನು ಪ್ರತೀ ಜಿಲ್ಲೆಯಾದ್ಯಂತ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಅನುಷ್ಠಾನ ಮಾಡಲಾಗುತ್ತಿದೆ. ಇದರನ್ವಯ ಮಾನದಂಡಗಳಿಗೆ ಒಳಪಟ್ಟ ಮಕ್ಕಳಿಗೆ ಮಾಸಿಕ ₹ 4 ಸಾವಿರ (ವರ್ಷಕ್ಕೆ ₹ 48 ಸಾವಿರ) ವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಆದರೆ, ಈ ಯೋಜನೆಯಡಿ ಸೌಲಭ್ಯ ಪಡೆಯಲು ಯಾವುದೇ ಶುಲ್ಕ ಪಾವತಿಸುವ ಅಗತ್ಯವಿರುವುದಿಲ್ಲ. ಆದರೆ, ಇದಕ್ಕೆಂದೇ ಕೆಲವೊಂದು ವಿಶೇಷ ಮಾನದಂಡಗಳಿವೆ’ ಎಂದು ಹೇಳಿದರು.
‘ಕೊಡಗು ಜಿಲ್ಲೆಯಾದ್ಯಂತ ತಂದೆ ಇಲ್ಲದ ಮಕ್ಕಳ ಖಾತೆಗೆ ವರ್ಷಕ್ಕೆ ₹ 24 ಸಾವಿರ ಸ್ಕಾಲರ್‌ಶಿಪ್ ಸೌಲಭ್ಯವಿದ್ದು, ಜನಸಾಮಾನ್ಯರಿಗೆ ಈ ವಿಚಾರ ತಿಳಿದೇ ಇಲ್ಲ. ಆದ್ದರಿಂದ ತಮಗೆ ಗೊತ್ತಿರುವ ಯಾವುದಾದರೂ ತಂದೆ ಇಲ್ಲದ ಮಕ್ಕಳಿದ್ದಲ್ಲಿ ಅವರ ಪೋಷಕರಿಗೆ ಕೂಡಲೇ ಅರ್ಜಿ ಸಲ್ಲಿಸಲು ತಿಳಿಸಿ’ ಎಂಬ ಸಂದೇಶ ವಾಟ್ಸ್‌ಆ್ಯಪ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ಸಾರ್ವಜನಿಕರನ್ನು ಗೊಂದಲಕ್ಕೀಡುಮಾಡಿದೆ. ಸಾರ್ವಜನಿಕರು ಈ ರೀತಿಯ ಸಂದೇಶಕ್ಕೆ ಹಾಗೂ ಆಮಿಷಗಳಿಗೆ ನಂಬಿ ಮಧ್ಯವರ್ತಿಗಳಿಗೆ ಹಣ ನೀಡಿ ಮೋಸ ಹೋಗಬಾರದು’ ಎಂದು ಮನವಿ ಮಾಡಿದರು.
‘ಆದ್ದರಿಂದ ಅರ್ಹ ಫಲಾನುಭವಿಗಳು ನೇರವಾಗಿ ‘ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ, ಶಾಂತಿನಿಲಯ, ಕಾನ್ವೆಂಟ್ ಜಂಕ್ಷನ್, ಮಡಿಕೇರಿ’ ಇಲ್ಲಿಗೆ ಕಚೇರಿ ವೇಳೆಯಲ್ಲಿ ಭೇಟಿ ನೀಡಿ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ದಾಖಲಾತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು. ಫಲಾನುಭವಿಗಳು ಅಥವಾ ಫಲಾನುಭವಿಗಳ ಪೋಷಕರು ನೇರವಾಗಿ ಬಂದು ಅರ್ಜಿ ಸಲ್ಲಿಸಬಹುದು’ ಎಂದು ಅವರು ತಿಳಿಸಿದ್ದಾರೆ.
ಮಾಹಿತಿಗೆ ‘ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ, ಶಾಂತಿ ನಿಲಯ, ಕಾನ್ವೆಂಟ್ ಜಂಕ್ಷನ್, ಮಡಿಕೇರಿ (ದೂ: 08272-228800) ಈ ಕಚೇರಿಯನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.