ಕಾಮಗಾರಿ ಸ್ಥಗಿತ: ನೀರಿಗೆ ಸಮಸ್ಯೆ ಉಲ್ಬಣ

6
ಅಜ್ಜಿಮುಟ್ಟ-ನೆಲ್ಲಿಗೆಮೊಟ್ಟೆ ಗ್ರಾಮಸ್ಥರ ಆರೋಪ

ಕಾಮಗಾರಿ ಸ್ಥಗಿತ: ನೀರಿಗೆ ಸಮಸ್ಯೆ ಉಲ್ಬಣ

Published:
Updated:
Deccan Herald

ನಾಪೋಕ್ಲು: ಕುಡಿಯುವ ನೀರು ಪೂರೈಸುವ ಸಲುವಾಗಿ ನಾಲ್ಕು ವರ್ಷಗಳ ಹಿಂದೆ ಜಾಕ್‌ವೆಲ್, ಟ್ರಾನ್ಸ್‌ಫಾರ್ಮರ್‌ ಅಳವಡಿಸಿದ್ದು ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದ್ದರಿಂದ ಅಜ್ಜಿಮುಟ್ಟ-ನೆಲ್ಲಿಗೆಮೊಟ್ಟೆಯ ಗ್ರಾಮಸ್ಥರು ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಗ್ರಾಮದ 50 ಮನೆಗಳಿಗೆ ಕುಡಿಯುವ ನೀರು ಪೂರೈಸಲು ಪಂಚಾಯಿತಿ ವತಿಯಿಂದ ಕಾವೇರಿ ನದಿ ತೀರದಲ್ಲಿ ಜಾಕ್‌ವೆಲ್ ನಿರ್ಮಿಸಲಾಗಿತ್ತು, ಈಗ ಅದು ಕಾಡಿನಿಂದ ಆವೃತ್ತಗೊಂಡಿದೆ. ನೀರು ಪೂರೈಕೆಗೆ ವಿದ್ಯುತ್ ಕಲೆಕ್ಷನ್‌ಗೆ ಹೊಸ ಟ್ರಾನ್ಸ್‌ಫಾರ್ಮರ್‌ ಕೂಡ ಅಳವಡಿಸಲಾಗಿದೆ. ಆದರೆ ಟ್ರಾನ್ಸ್‌ಫಾರ್ಮರ್‌ನಿಂದ ಜಾಕ್‌ವೆಲ್‌ವರೆಗಿನ ವಿದ್ಯುತ್ ಕಂಬಗಳಿಗೆ ತಂತಿ ಅಳವಡಿಸುವ ಕಾರ್ಯ ಆಗಿಲ್ಲ. ಕಾಮಗಾರಿ ಆರಂಭಿಸುವ ಮೊದಲು ಸಣ್ಣ ಟ್ಯಾಂಕ್‌ಗೆ ನೀರು ಪೂರೈಸಲಾಗುತ್ತಿತ್ತು. ಆದರೆ, ಕಾಮಗಾರಿ ಆರಂಭಿಸಿದ ನಂತರ ಅದಕ್ಕೂ ನೀರು ಪೂರೈಸುವುದನ್ನು ಸ್ಥಗಿತಗೊಳಿಸಿದ್ದಾರೆ. ಇದರಿಂದ ಸಮಸ್ಯೆ ಉಲ್ಬಣಿಸಿದೆ ಎಂದು ಟಿ.ಬಿ.ಜಗದೀಶ್ ಆರೋಪಿಸಿದ್ದಾರೆ.

ಒಂದೆಡೆ ಕುಡಿಯುವ ನೀರಿಗೆ ಸಮಸ್ಯೆಯಾದರೆ ಮತ್ತೊಂದೆಡೆ ಗ್ರಾಮದ ರಸ್ತೆಯೂ ಹದಗೆಟ್ಟಿದೆ. ಇಲ್ಲಿನ ಪಳ್ಳಿರಾಣೆ ಮಸೀದಿಯಿಂದ  ಒಂದು ಕಿ.ಮೀ. ರಸ್ತೆಗೆ ಜಲ್ಲಿ ಕಲ್ಲು ಹಾಕಿ ಹಲವು ವರ್ಷಗಳೇ ಕಳೆದರೂ ಡಾಂಬರು ಹಾಕಿಲ್ಲ. ಈಗ ಈ ರಸ್ತೆಯಲ್ಲಿ ವಾಹನ ಸಂಚರಿಸುತ್ತಿಲ್ಲ. ಜನರು ನಡೆದಾಡಲೂ ಸಹ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಈ ರಸ್ತೆಯು ಕಾವೇರಿ ನದಿಯ ಮತ್ತೊಂದು ಬದಿಯ ಕಾರುಗುಂದ ಮತ್ತು ಚೇರಂಬಾಣೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಬೇಸಿಗೆಯಲ್ಲಿ ಕಾಲ್ನಡಿಗೆಯಲ್ಲಿ ನದಿ ದಾಟಿ ಸಾಗುವ ಮಂದಿ ಮಳೆಗಾಲದಲ್ಲಿ ದೋಣಿಯನ್ನು ಆಶ್ರಯಿಸುತ್ತಾರೆ. ಈ ರಸ್ತೆ ಸರಿಯಿದ್ದರೆ ಕಾರುಗುಂದ ಮತ್ತು ಚೇರಂಬಾಣೆ ಗ್ರಾಮಸ್ಥರಿಗೂ ಅನುಕೂಲವಾಗಿದೆ. ಆದರೆ ರಸ್ತೆ ಹದಗೆಟ್ಟಿದ್ದು ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ ಎಂದು ಗ್ರಾಮಸ್ಥ ಅಪ್ಪಿ ಹೇಳಿದರು.

ಕುಡಿಯುವ ನೀರಿನ ಸಮಸ್ಯೆ ಹೇಳ ತೀರದಾಗಿದೆ. ಬೇಸಿಗೆಯಲ್ಲಿ ಕಾವೇರಿ ನದಿಯಿಂದ ನೀರು ಹೊತ್ತು ತರುವ ಪರಿಸ್ಥಿತಿ ಎದುರಾಗಿದೆ. ಅರ್ಧಕ್ಕೆ ನಿಂತ ಕಾಮಗಾರಿಯನ್ನು ಪೂರ್ಣಗೊಳಿಸಿ ಗ್ರಾಮಸ್ಥರ ಬವಣೆ ನೀಗಿಸಿ ಎಂದು ಅಜ್ಜಿಮುಟ್ಟ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಸಂಬಂಧಿಸಿದ ಇಲಾಖೆಯವರು ಕುಡಿಯುವ ನೀರಿನ ಪೂರೈಕೆಗೆ ಮತ್ತು ರಸ್ತೆ ದುರಸ್ತಿಗೆ ಕೂಡಲೇ ಕ್ರಮಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಆಗ್ರಹಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !