ಸುಂಟಿಕೊಪ್ಪ: ಹೋಬಳಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಜನ ಆತಂಕದಲ್ಲಿ ಬದುಕು ಸಾಗಿಸುವ ಸ್ಥಿತಿ ಎದುರಾಗಿದೆ.
ಸಮೀಪದ ಕಂಬಿಬಾಣೆಯ ಅತ್ತೂರು ನಲ್ಲೂರು ಗ್ರಾಮದ ಟಿ.ಸಿ.ಎಲ್. ತೋಟದಲ್ಲಿ ಕಾಡಾನೆಯೊಂದು ಕಾರ್ಮಿಕ ವಿಜಯಕುಮಾರ್ ಎಂಬುವವರ ಮೇಲೆ ದಾಳಿ ಮಾಡಿ ಗಾಯಗೊಳಿರುವ ಘಟನೆ ಬುಧವಾರ ಬೆಳಿಗ್ಗೆ 7 ಗಂಟೆಗೆ ನಡೆದಿದೆ.
ಎಂದಿನಂತೆ ತೋಟಕ್ಕೆ ಹೋಗುತ್ತಿದ್ದ ಕಾರ್ಮಿಕ ವಿಜಯಕುಮಾರ್ ಅವರ ಮೇಲೆ ಕಾಡಾನೆ ಎರಗಿದೆ. ತಳ್ಳಿದ ರಭಸಕ್ಕೆ ಚರಂಡಿಯ ಬಳಿ ಬಿದ್ದ ಅವರನ್ನು ಕೋರೆಯಿಂದ ತಿವಿಯಲು ಯತ್ನಿಸಿದೆ. ಬಿದ್ದ ರಭಸಕ್ಕೆ ಎದೆಯ ಭಾಗಕ್ಕೆ ಪೆಟ್ಟಾಗಿದ್ದು, ಗಾಯಳುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಅರಣ್ಯಾಧಿಕಾರಿ ದೇವಯ್ಯ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಕಂಬಿಬಾಣೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಧುನಾಗಪ್ಪ ಅವರು, ಈ ಭಾಗದಲ್ಲಿ ಒಂಟಿಸಲಗವೊಂದು ಕಳೆದ ಹಲವು ತಿಂಗಳುಗಳಿಂದ ದಾಂದಲೆ ನಡೆಸುತ್ತಿದ್ದು, ತೋಟಗಳಲ್ಲಿ ಬೆಳೆದ ಫಸಲುಭರಿತ ಬೆಳೆಗಳನ್ನು ತುಳಿದು ನಷ್ಟಪಡಿಸುತ್ತಿದೆ. ಮನೆಗಳ ಗೇಟುಗಳನ್ನು ಮುರಿದು ಹಾಕುತ್ತಿದೆ. ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಡಿಆರ್‌ಎಫ್‌ಒ ದೇವಯ್ಯ ‘ಪ್ರಜಾವಾಣಿ’ಗೆ ಮಾಹಿತಿ ನೀಡಿ, ಈ ಕಾಡಾನೆಯ ದಾಂದಲೆ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ನೀಡಲಾಗುವುದು. ಹಾಗೆಯೇ ಗ್ರಾಮ ಪಂಚಾಯಿತಿಯಿಂದಲೂ ವರದಿ ಪಡೆದುಕೊಂಡು ತುರ್ತು ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.