ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಡಿಯುವ ರೈತರೇ ನಿಜವಾದ ಸಂಶೋಧಕರು: ಡಾ.ಹೇಮ್ಲಾ ನಾಯಕ

ಪೊನ್ನಂಪೇಟೆಯಲ್ಲಿ ಜರುಗಿದ ಕೃಷಿ ಕ್ಷೇತ್ರೋತ್ಸವ
Last Updated 6 ಡಿಸೆಂಬರ್ 2022, 11:15 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ‘ನಾಲ್ಕು ಗೋಡೆಗಳ ಮಧ್ಯೆ ಸಂಶೋಧನೆ ನಡೆಸಿ ಪಡೆಯುವ ಪಿಎಚ್‌.ಡಿ ಪದವೀಧರರಿಗಿಂತ ಹೊಲ ಗದ್ದೆಗಳಲ್ಲಿ ದುಡಿಯುವ ರೈತರೇ ನಿಜವಾದ ಸಂಶೋಧಕರು’ ಎಂದು ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶಕ ಡಾ.ಹೇಮ್ಲಾ ನಾಯಕ ಹೇಳಿದರು.

ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಕೃಷಿ ವಿಸ್ತರಣಾ ಘಟಕ ಮಡಿಕೇರಿ, ಕೃಷಿ ತೋಟಗಾರಿಕೆ, ಅರಣ್ಯ, ಪಶುಸಂಗೋಪನೆ, ಮೀನುಗಾರಿಕೆ ಇಲಾಖೆ ವತಿಯಿಂದ ಸೋಮವಾರ ನಡೆದ ‘ಕೃಷಿ ಮಹೋತ್ಸವ ಹಾಗೂ ವಿಶ್ವ ಮಣ್ಣು ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.

‘ಬದಲಾಗುತ್ತಿರುವ ಹವಾಮಾನದ ಸಂದರ್ಭದಲ್ಲಿ ರೈತರು ಹಿಂದಿನಂತೆ ಕೇವಲ ಒಂದು ಅಥವಾ ಎರಡು ಬಗೆಯ ಬೆಳೆಗಳನ್ನು ನಂಬಿಕೊಂಡಿದ್ದರೆ ಆದಾಯಕ್ಕಿಂತ ನಷ್ಟವೇ ಹೆಚ್ಚಾಗಲಿದೆ. ಹವಾಮಾನ ವೈಪರೀತ್ಯ ಮತ್ತು ಬೆಲೆಯ ಏರಳಿತದಿಂದ ಒಂದು ಬೆಳೆ ಕೈ ಕೊಟ್ಟರೂ ಮತ್ತೊಂದು ಬೆಳೆ ಕೈಹಿಡಿದರೆ ಮಾತ್ರ ರೈತರಿಗೆ ಉಳಿಗಾಲವಿದೆ. ಹೀಗಾಗಿ, ರೈತರು ತಮಗೆ ಒಂದು ಅಥವಾ ಎರಡೇ ಎಕರೆ ಭೂಮಿ ಇದ್ದರೂ ಅದರಲ್ಲಿಯೇ ಮಿಶ್ರ ಬೇಸಾಯ ಕೈಗೊಳ್ಳಬೇಕು’ ಎಂದು ಹೇಳಿದರು.

‘ಪಶುಪಾಲನೆ, ಕೋಳಿ ಸಾಕಣೆ, ಜೇನು ಕೃಷಿ ಮೊದಲಾದವು ರೈತರಿಗೆ ಉತ್ತಮ ಆದಾಯ ತರಲಿವೆ. ಮಣ್ಣಿನ ಸಾರವನ್ನು ನಾಶಪಡಿಸಿ ಬರಡುಗೊಳಿಸುವ ರಾಸಾಯನಿಕ ಗೊಬ್ಬರವನ್ನು ಆದಷ್ಟು ಪ್ರಮಾಣದಲ್ಲಿ ಕಡಿಮೆಗೊಳಿಸಿ ಸಾವಯವ ಗೊಬ್ಬರದ ಮೂಲಕ ಕೃಷಿ ಕೈಗೊಳ್ಳುವುದು ಒಳ್ಳೆಯದು. ಇದರಿಂದ ಖರ್ಚು ತಗ್ಗಲಿದೆ’ ಎಂದು ಸಲಹೆ ನೀಡಿದರು.

‘ರಾಜ್ಯೋತ್ಸವ ಪ್ರಶಸ್ತಿ’ ಪಡೆದುದಕ್ಕೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಸೋಮೇಂಗಡ ಗಣೇಶ್ ತಿಮ್ಮಯ್ಯ, ‘ಮಣ್ಣಿನಲ್ಲಿ ಸಾವಿರಾರು ಕೋಟಿ ಜೀವಾಣುಗಳಿವೆ. ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕದಿಂದ ಅವುಗಳೆಲ್ಲ ನಾಶವಾಗುತ್ತಿವೆ. ಯಾವುದೇ ಕೃಷಿ ಕೈಗೊಳ್ಳುವ ಮುನ್ನ ಮಣ್ಣು ಪರೀಕ್ಷೆ ಮಾಡಿಸಿಕೊಳ್ಳುವುದು ಮುಖ್ಯ. ನಾವು ಬದುಕಬೇಕು ಎಂದರೆ ಎಲ್ಲ ಕೆಲಸ ಮಾಡಲು ಸಿದ್ದರಿರಬೇಕು. ನಮ್ಮ ಮಕ್ಕಳು ಆರೋಗ್ಯವಾಗಿರಬೇಕಾದರೆ ಸ್ವಂತ ಕೃಷಿ ಮಾಡಬೇಕು’ ಎಂದು ಹೇಳಿದರು.

ಕೃಷಿ ಮಹೋತ್ಸವ ಉದ್ಘಾಟಿಸಿದ ವಿಶ್ವವಿದ್ಯಾನಿಲಯದ ಸಂಶೋಧನಾ ನಿರ್ದೇಶಕ ಡಾ.ಮೃತ್ಯಂಜಯ ಸಿ.ವಾಲಿ ಮಾತನಾಡಿ, ‘ಇತ್ತೀಚಿನ ವರ್ಷಗಳಲ್ಲಿ ಕೆಂಪು ಭತ್ತದ ತಳಿಯನ್ನು ಕಂಡು ಹಿಡಿಯಲಾಗಿದೆ. ಇದರಲ್ಲಿ ಸತು ಮತ್ತು ಕಬ್ಬಿಣಾಂಶ ಹೆಚ್ಚಿರುವುದರಿಂದ ಆರೋಗ್ಯಕ್ಕೆ ಉತ್ತಮವಾಗಿದೆ. ಮನುಷ್ಯ ಕೃಷಿಯನ್ನು ಬಿಟ್ಟರೂ ಕೃಷಿ ಆತನನ್ನು ಬಿಡಲಾರದು. ಸಮಗ್ರ ಕೃಷಿ ಮೂಲಕ ಆದಾಯವನ್ನು ದ್ವಿಗುಣಪಡಿಸಿಕೊಳ್ಳಬೇಕು’ ಎಂದು ಹೇಳಿದರು.

ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ರಾಮಕೃಷ್ಣ ಹೆಗಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT