ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರ ಕಾರ್ಮಿಕರಿಗೆ ನಿವೇಶನಕ್ಕೆ ಪ್ರಯತ್ನ

ನಗರದಲ್ಲಿ ನಡೆದ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಶ್ರೀವಿದ್ಯಾ ಭರವಸೆ
Last Updated 6 ಜುಲೈ 2018, 12:53 IST
ಅಕ್ಷರ ಗಾತ್ರ

ಮಡಿಕೇರಿ: ‘ಪೌರ ಕಾರ್ಮಿಕರು ನಗರ ಪ್ರದೇಶವನ್ನು ಪ್ರತಿನಿತ್ಯ ಶುಚಿಗೊಳಿಸುತ್ತಾರೆ. ಆದರೆ, ಅವರ ಬದುಕೇ ಸಂಕಷ್ಟಕ್ಕೆ ಸಿಲುಕಿಕೊಂಡಿರುವುದು ವಿಷಾದನೀಯ; ಅವರ ಬದುಕೂ ಸುಂದರವಾಗಿರಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್ ಹೇಳಿದರು.

ಜಿಲ್ಲಾಡಳಿತದ ವತಿಯಿಂದ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಶುಕ್ರವಾರ ನಡೆದ ಪೌರ ಕಾರ್ಮಿಕರಿಗೆ ಕಾನೂನುಗಳು, ಸರ್ಕಾರದ ವಿವಿಧ ಇಲಾಖೆಗಳು ನೀಡುತ್ತಿರುವ ಸೌಲಭ್ಯಗಳ ಅರಿವು ಮೂಡಿಸುವ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಕೆಲಸದ ಒತ್ತಡದಿಂದ ತಮ್ಮ ವೈಯಕ್ತಿಕ ಬದುಕನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಅದರ ಬಗ್ಗೆಯೂ ಹೆಚ್ಚು ಗಮನ ಹರಿಸಬೇಕು. ಕೆಲಸ ಮಾಡುವ ಜತೆಗೆ ಕೌಟುಂಬಿಕ ಜೀವನಕ್ಕೂ ಆದ್ಯತೆ ನೀಡಬೇಕು’ ಎಂದು ಕೋರಿದರು.

‘ಪೌರ ಕಾರ್ಮಿಕರು ಇತರರಂತೆ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು; ಸಮಾಜ ಚೆನ್ನಾಗಿರಬೇಕಾದರೆ ಪೌರ ಕಾರ್ಮಿಕರು ಸಹ ಉತ್ತಮ ಜೀವನ ನಡೆಸಬೇಕು. ಅವರಿಗೆ ನಿವೇಶನ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ’ ಎಂದು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಭರವಸೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ಪೌರ ಕಾರ್ಮಿಕರಿಗೆ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ತಲುಪಬೇಕು. ಇದರಿಂದ ಪೌರ ಕಾರ್ಮಿಕರು ಮುಖ್ಯವಾಹಿನಿಗೆ ಬರಲು ಸಾಧ್ಯ. ವೃತ್ತಿಯಲ್ಲಿ ಜೀವನೋತ್ಸಾಹ ಇರಬೇಕು. ಹಾಗೆಯೇ ವೈಯಕ್ತಿಕ ಬದುಕಿನ ಕಡೆಯೂ ಗಮನಹರಿಸಬೇಕು ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಾತನಾಡಿ, ಪೌರ ಕಾರ್ಮಿಕರು ಚಳಿ, ಮಳೆ, ಗಾಳಿ ಲೆಕ್ಕಿಸದೇ ಕರ್ತವ್ಯ ನಿರ್ವಹಿಸುತ್ತಾರೆ. ಇವರ ಸೇವೆಯಿಂದ ನಗರ, ಪಟ್ಟಣಗಳು ಶುಚಿಯಾಗಿ ಕಾಣುತ್ತವೆ ಎಂದು ಹೇಳಿದರು.

ಆ ನಿಟ್ಟಿನಲ್ಲಿ ಪೌರ ಕಾರ್ಮಿಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವತ್ತ ಆಸಕ್ತಿವಹಿಸಬೇಕು. ತಾವು ಆರೋಗ್ಯದಿಂದ ಕರ್ತವ್ಯ ನಿರ್ವಹಿಸಿದ್ದಲ್ಲಿ ನಗರ ಮತ್ತು ಪಟ್ಟಣವನ್ನು ಮತ್ತಷ್ಟು ಸುಂದರವಾಗಿಸಲು ಸಾಧ್ಯ ಎಂದು ಹೇಳಿದರು.
ಪೌರ ಕಾರ್ಮಿಕರು, ಆರ್ಥಿಕವಾಗಿ ಸಬಲರಾಗಬೇಕು. ಕುಡಿತದಿಂದ ದೂರವಿರಬೇಕು; ಪೌರ ಕಾರ್ಮಿಕರು ಕಾಲಿಗೆ ಶೂ, ಗ್ಲೌಸ್ ಬಳಸಿಯೇ ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಮಾತನಾಡಿ, ಪೌರ ಕಾರ್ಮಿಕರಿಗೆ ವಿದೇಶ ಪ್ರವಾಸಕ್ಕೆ ಸರ್ಕಾರವೇ ಅವಕಾಶ ಕಲ್ಪಿಸಿದೆ. ಮುಂದಿನ ದಿನಗಳಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಸಫಾಯಿ ಕರ್ಮಚಾರಿಗಳು ತಮ್ಮ ಕರ್ತವ್ಯ ಸಂದರ್ಭದಲ್ಲಿ ಗುಂಡಿಗಿಳಿದು ಹಲವು ಸಂದರ್ಭಗಳಲ್ಲಿ ಸಾವನ್ನಪ್ಪುತ್ತಿದ್ದಾರೆ; ಇದು ನಿಲ್ಲಬೇಕಿದೆ. ಪೌರ ಕಾರ್ಮಿಕರು ತಮ್ಮ ಬದುಕು ಉತ್ತಮಪಡಿಸಿಕೊಳ್ಳಲು ಮುಂದಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್ ಹೇಳಿದರು.

ವಕೀಲ ಕುಂಞ ಅಬ್ದುಲ್ಲಾ, ನಗರಸಭೆ ಸದಸ್ಯೆ ಅನಿತಾ ಪೂವಯ್ಯ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಗೋಪಾಲಕೃಷ್ಣ, ಪೌರಾಯುಕ್ತೆ ಬಿ.ಶುಭಾ, ನಗರಾಭಿವೃದ್ಧಿ ಕೋಶದ ಎಇಇ ಸ್ವಾಮಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಮಾಯಾದೇವಿ ಗಲಗಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT