19 ವರ್ಷಗಳಿಂದ ಯೋಗ ತರಬೇತಿ

7
ವಿರಾಜಪೇಟೆ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿನ ಕಾವೇರಿ ಯೋಗ ಕೇಂದ್ರ

19 ವರ್ಷಗಳಿಂದ ಯೋಗ ತರಬೇತಿ

Published:
Updated:
ವಿರಾಜಪೇಟೆ ಪಟ್ಟಣದ ಕಾವೇರಿ ಯೋಗ ಕೇಂದ್ರದಲ್ಲಿ ಉಚಿತ ಯೋಗ ತರಬೇತಿ ನೀಡಲಾಗುತ್ತಿದೆ

ವಿರಾಜಪೇಟೆ: ಸಾವಿರಾರು ವರ್ಷಗಳ ಇತಿಹಾಸವಿರುವ ‘ಯೋಗ’ ಭಾರತ ವಿಶ್ವಕ್ಕೆ ನೀಡಿದ ಅಮೂಲ್ಯ ಕೊಡುಗೆ. ಜೂನ್‌ 21 ಅನ್ನು ಅಂತರರಾಷ್ಟ್ರೀಯ ಯೋಗ ದಿನವೆಂದು ವಿಶ್ವಸಂಸ್ಥೆ ಘೋಷಿಸಿದ ಬಳಿಕ ಯೋಗ ಇಂದು ವಿಶ್ವ ಮಾನ್ಯತೆಯನ್ನು ಪಡೆದುಕೊಂಡಿದೆ. ಆದರೂ ಭಾರತವು ಸೇರಿದಂತೆ ಹಲವೆಡೆ ಯೋಗಭ್ಯಾಸವು ಜೂನ್‌ 21ಕ್ಕೆ ಮಾತ್ರ ಸೀಮಿತಗೊಂಡಿದೆ.

ಆದರೆ, ಈ ಮಾತಿಗೆ ಅಪವಾದ ಎಂಬಂತೆ ಪಟ್ಟಣದಲ್ಲಿನ ಯೋಗ ಕೇಂದ್ರವೊಂದು ಸುಮಾರು ಎರಡು ದಶಕಗಳಿಂದ ಉಚಿತ ಯೋಗ ತರಬೇತಿ ನೀಡುತ್ತಿದೆ.

ಹೌದು, ಪಟ್ಟಣದ ಕಾವೇರಿ ಯೋಗ ಕೇಂದ್ರವೇ ಕಳೆದ 19 ವರ್ಷಗಳಿಂದ ಪ್ರತಿನಿತ್ಯ ಉಚಿತ ತರಬೇತಿಯನ್ನು ನೀಡುತ್ತಾ ಕಾರ್ಯ ನಿರ್ವಹಿಸುತ್ತಿರುವುದು. ಪಟ್ಟಣದ ಅಪ್ಪಯ್ಯಸ್ವಾಮಿ ರಸ್ತೆಯಲ್ಲಿನ ಕಾವೇರಿ ಆಶ್ರಮದ ಸಭಾಂಗಣದಲ್ಲಿ ಪ್ರತಿನಿತ್ಯ ಮುಂಜಾನೆ 5.50ರಿಂದ 7.15ರವರೆಗೆ ಯೋಗ ತರಬೇತಿ ಹಾಗೂ ಅಭ್ಯಾಸವನ್ನು ಯೋಗಕೇಂದ್ರದ ವತಿಯಿಂದ ಮಾಡಲಾಗುತ್ತಿದೆ.

2000ರಲ್ಲಿ ಪಟ್ಟಣಕ್ಕೆ ಬ್ಯಾಂಕ್‌ವೊಂದರ ಅಧಿಕಾರಿಯಾಗಿ ಆಗಮಿಸಿದ ಮೈಸೂರಿನ ಪ್ರಹ್ಲಾದ್ ಎಂಬುವವರು ಈ ಯೋಗ ಕೇಂದ್ರವನ್ನು ಮೊದಲು ಆರಂಭಿಸಿ, ಸುತ್ತಮುತ್ತಲಿನ ಆಸಕ್ತರಿಗೆ ಉಚಿತವಾಗಿ ಯೋಗ ತರಬೇತಿಯನ್ನು ನೀಡಿದರು.

ಸುಮಾರು 2 ವರ್ಷಗಳ ಬಳಿಕ ವರ್ಗಾವಣೆಗೊಂಡದ್ದರಿಂದ ಪ್ರಹ್ಲಾದ್ ಅವರು ಬೇರೆಡೆ ತೆರಳಬೇಕಾಯಿತು. ಈ ಸಂದರ್ಭ ಯೋಗಕೇಂದ್ರದಲ್ಲಿ ಅಭ್ಯಾಸ ಮಾಡುತ್ತಿದ್ದ ಪಟ್ಟಣದ ಅಪ್ಪಯ್ಯಸ್ವಾಮಿ ರಸ್ತೆಯ ಹೊಸ ಬಡಾವಣೆಯ ಸೀತಾರಾಂ ರೈ ಅವರು 2002ರಿಂದ ಕೇಂದ್ರದಲ್ಲಿ ನಿರಂತರವಾಗಿ ಉಚಿತವಾಗಿ ಯೋಗ ತರಬೇತಿಯನ್ನು ನೀಡುತ್ತಿದ್ದಾರೆ.

ಇಲ್ಲಿಯವರೆಗೂ ಸುಮಾರು 2 ಸಾವಿರದಷ್ಟು ಮಂದಿ ಯೋಗ ಕೇಂದ್ರದಿಂದ ಪ್ರಯೋಜನವನ್ನು ಪಡೆದಿದ್ದಾರೆ. ಇದೀಗ ಸುಮಾರು 40ರಿಂದ 50 ಯೋಗಪಟುಗಳು ಕೇಂದ್ರ ಪ್ರಯೋಜವನ್ನು ಪಡೆಯುತ್ತಿದ್ದಾರೆ. ಕೇಂದ್ರದಲ್ಲಿ ಮಹಿಳೆಯರು- ಪುರುಷರು, ಜಾತಿ ಧರ್ಮದ ಬೇಧವಿಲ್ಲದೆ 8ರಿಂದ 80 ವರ್ಷ ವಯಸ್ಸಿನ ಉತ್ಸಾಹಿ ಯೋಗಾಸಕ್ತರು ಯೋಗಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರತಿನಿತ್ಯ ಕೇಂದ್ರದಲ್ಲಿ ಪ್ರಾಣಾಯಾಮ, ಸೂರ್ಯ ನಮಸ್ಕಾರ ಸೇರಿದಂತೆ ಕೆಲವು ಆಸನಗಳನ್ನು ಅಭ್ಯಾಸಿಸಲಾಗುವುದು.

ಕೆಲವೆಡೆ ಯೋಗಾಸಕ್ತರಿದ್ದರೂ ಉಚಿತವಾಗಿ ಹೇಳಿ ಕೊಡುವವರಿಲ್ಲ. ಉಚಿತವಾಗಿ ಹೇಳಿಕೊಟ್ಟರೂ ಯೋಗಾಸಕ್ತರಿರುವುದಿಲ್ಲ. ಇದ್ದರೂ ವರ್ಷದ 12 ತಿಂಗಳು ಆಸಕ್ತಿ ಉಳಿಯುವುದಿಲ್ಲ ಎಂಬ ಮಾತಿಗೆ ಅಪವಾದ ಎಂಬಂತಿದೆ ಕಾವೇರಿ ಯೋಗಕೇಂದ್ರ. ಯೋಗಕೇಂದ್ರದ ಯೋಗಪಟುಗಳು ರಾಷ್ಟ್ರ, ರಾಜ್ಯಮಟ್ಟದ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ, ಉತ್ತಮ ಸಾಧನೆ ಮಾಡಿರುತ್ತಾರೆ. ಜತೆಗೆ, ರಾಜ್ಯದ ವಿವಿಧೆಡೆಗಳಲ್ಲಿ ನಡೆದ ಯೋಗ ಶಿಬಿರದಲ್ಲಿ ಭಾಗವಹಿಸಿ ತಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚಿದ್ದಾರೆ. ಪ್ರತಿ ವರ್ಷ ಯೋಗಕೇಂದ್ರದ ವಾರ್ಷಿಕೋತ್ಸವವನ್ನು ಆಯೋಜಿಸುವುದರೊಂದಿಗೆ ಕಳೆದ ನಾಲ್ಕು ವರ್ಷಗಳಿಂದ ವಿಶ್ವ ಯೋಗದಿನವನ್ನು ಕೇಂದ್ರದಲ್ಲಿ ಆಚರಿಸಲಾಗುತ್ತಿದೆ.

‘ಕಾವೇರಿ ಆಶ್ರಮದ ವಿವೇಕಾನಂದ ಶರಣು ಸ್ವಾಮೀಜಿ ಅವರು ಯೋಗಾಭ್ಯಾಸ ನಡೆಸಲು ಉಚಿತವಾಗಿ ಸಭಾಂಗಣವನ್ನು ಒದಗಿಸುವುದರೊಂದಿಗೆ, ಯೋಗದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. ಸ್ವಾಮೀಜಿ ಅವರ ಸಹಕಾರದಿಂದ ಯೋಗಕೇಂದ್ರ ಉತ್ತಮವಾಗಿ ನಡೆಯುತ್ತಿದೆ’ ಎಂದು ಕಾವೇರಿ ಯೋಗ ಕೇಂದ್ರದ ಯೋಗಗುರು ಸೀತಾರಾಂ ರೈ ಹೇಳಿದರು.

ದೈಹಿಕ, ಮಾನಸಿಕ ಆರೋಗ್ಯದ ದೃಷ್ಟಿಯಿಂದ ಯೋಗಾಭ್ಯಾಸ ಮಾಡಬೇಕು. ಆರೋಗ್ಯ ಕೆಟ್ಟ ಮೇಲೆ ಯೋಗ ಆರಂಭಿಸದೇ ಸರಿಯಿರುವಾಗಲೇ ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು.
ಸೀತಾರಾಂ ರೈ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !