ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: ಕ್ರೀಡಾ ತವರಿಗೆ ಟರ್ಫ್‌ ಮೈದಾನದ ನಿರೀಕ್ಷೆ

ತಾಲ್ಲೂಕು ಕೇಂದ್ರವಾದ ಸೋಮವಾರಪೇಟೆಯಲ್ಲಿ ಇಲ್ಲ ಸುಸಜ್ಜಿತ ಕ್ರೀಡಾಂಗಣ
Last Updated 24 ಜನವರಿ 2019, 6:30 IST
ಅಕ್ಷರ ಗಾತ್ರ

ಸೋಮವಾರಪೇಟೆ: ಕ್ರೀಡಾಪಟುಗಳ ಜಿಲ್ಲೆಯಲ್ಲಿ ತಾಲ್ಲೂಕು ಕೇಂದ್ರವಾದ ಸೋಮವಾರಪೇಟೆಯಲ್ಲಿ ಇಂದಿಗೂ ಸುಸಜ್ಜಿತ ಕ್ರೀಡಾಂಗಣ ಇಲ್ಲ. ಇದರಿಂದ ಕ್ರೀಡಾಪಟುಗಳಿಗೆ ತೊಂದರೆ ಆಗಿದೆ.

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ನೀಡಿದ ಈ ಪಟ್ಟಣದಲ್ಲಿ ಕ್ರೀಡೆಯ ಬೆಳವಣಿಗೆಗೆ ಯಾವುದೇ ಉತ್ತೇಜನ ಸಿಗದಿರುವುದು ದುರಂತವೇ ಸರಿ ಎಂದು ಕ್ರೀಡಾಪಟುಗಳು ನೋವು ತೋಡಿಕೊಳ್ಳುತ್ತಾರೆ.

ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿ ಎರಡು ಮೈದಾನಗಳಿವೆ. ಈ ಮೈದಾನದಲ್ಲಿ ಆಟ ಕಲಿತ ಅನೇಕರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸಾಧನೆಯನ್ನೇ ಮಾಡಿದ್ದಾರೆ. ಬಿ.ಪಿ.ಗೋವಿಂದ, ಗಣೇಶ್, ಅರ್ಜುನ್ ಹಾಲಪ್ಪ, ಎಸ್.ವಿ.ಸುನಿಲ್, ವಿಕ್ರಂಕಾಂತ್ ಅವರಂತಹ ಹಲವು ಅಂತರರಾಷ್ಟ್ರೀಯ ಹಾಕಿ ಆಟಗಾರರು ಈ ಮೈದಾನದಲ್ಲೇ ಆಟ ಕಲಿತು ಜಿಲ್ಲೆಯ ಹೆಸರನ್ನು ವಿದೇಶದಲ್ಲಿಯೂ ಪಸರಿಸಿರುವುದು ಹೆಮ್ಮೆಯ ವಿಷಯ. ಆದರೆ, ಪದವಿಪೂರ್ವ ಕಾಲೇಜು ಮೈದಾನಕ್ಕೆ ‘ಆಸ್ಟ್ರೋ ಟರ್ಫ್’ ಹಾಕುವ ನಿಟ್ಟಿನಲ್ಲಿ ಕಳೆದ 6 ವರ್ಷಗಳ ಹಿಂದೆ ಸಿದ್ಧತೆಗಳು ಪ್ರಾರಂಭವಾಗಿ, ಇಂದಿಗೂ ಹಾಗೆಯೇ ಉಳಿದಿರುವುದರಿಂದ ಯಾವುದೇ ಪ್ರಯೋಜನಕ್ಕೆ ಬಾರದ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ದಿನಂಪ್ರತಿ ನೂರಾರು ಮಕ್ಕಳು, ಯುವಕರು ಈ ಮೈದಾನದಲ್ಲಿ ಆಟವಾಡುತ್ತಾರೆ. ಬೇಸಿಗೆ ಹಾಕಿ ತರಬೇತಿ ಶಿಬಿರಗಳು ನಡೆಯುತ್ತಿವೆ. ವರ್ಷಕೊಮ್ಮೆ ಹಾಕಿ ಟೂರ್ನಿ ನಡೆಯುತ್ತಿತ್ತು. ಅಲ್ಲದೆ, ಫುಟ್‌ಬಾಲ್‌, ಕ್ರಿಕೆಟ್ ಸೇರಿದಂತೆ ಹಲವು ಕ್ರೀಡಾಕೂಟಗಳು ನಡೆಯುತ್ತಿದ್ದವು. ಇದೀಗ ಮೈದಾನದ ಕೊರತೆಯಿಂದ ಎಲ್ಲ ಕ್ರೀಡೆಗಳು ಸ್ಥಗಿತಗೊಂಡಿವೆ. ಯಾವುದೇ, ಟೂರ್ನಿ ನಡೆಸಲು ಮುಂದಾಗುವ ಸಂಘಟಕರು ಮೈದಾನವನ್ನು ಸ್ವಂತ ಖರ್ಚಿನಲ್ಲಿ ದುರಸ್ತಿ ಪಡಿಸಿಕೊಂಡು ಟೂರ್ನಿ ನಡೆಸಬೇಕಾದ ಅನಿವಾರ್ಯತೆಯಿದೆ.

ಸುಮಾರು 30 ವರ್ಷಗಳ ಹಿಂದೆ ₹ 6 ಲಕ್ಷ ವೆಚ್ಚದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿದ ಇಲ್ಲಿನ ಕ್ರೀಡಾಂಗಣ ಯಾರಿಗೂ ಉಪಯೋಗಕ್ಕೆ ಬಾರದೆ ನಿರುಪಾಯುಕ್ತವಾಗಿ ಭೂತ ಬಂಗಲೆಯಂತಾಗಿದೆ. 1988ರಲ್ಲಿ ಅಂದಿನ ಜಿಲ್ಲಾ ಪರಿಷತ್ ಅಧ್ಯಕ್ಷರಾಗಿದ್ದ ಜೆ.ಎ. ಕರುಂಬಯ್ಯ ಹಾಗೂ ಜಿಲ್ಲಾ ಪರಿಷತ್ ಸದಸ್ಯರಾಗಿದ್ದ ಸ್ಥಳೀಯರಾದ ಎನ್.ಎಂ. ರಾಜಶೇಖರ್ ಇದಕ್ಕೆ ಶಂಕುಸ್ಥಾಪನೆ ಮಾಡಿದ್ದರು. ನಂತರ ದಿನಗಳಲ್ಲಿ ಕಾಮಗಾರಿಯೂ ನಡೆದಿತ್ತು.

ಕ್ರೀಡಾಂಗಣದ ಗ್ಯಾಲರಿಯಲ್ಲಿ ಕುಳಿತವರಿಗೆ ಬಿಸಿಲು ನೇರವಾಗಿ ಕಣ್ಣಿಗೆ ಹೊಡೆಯುವುದರಿಂದ ಪ್ರೇಕ್ಷಕರಿಗೆ ಪಂದ್ಯ ವೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಈ ಕ್ರೀಡಾಂಗಣದ ಗ್ಯಾಲರಿಗೆ ಹೊಂದಿಕೊಂಡಿರುವ ಮೈದಾನ ಅತಿ ಚಿಕ್ಕದಾದ್ದರಿಂದ ಇದರಲ್ಲಿ ಕ್ರಿಕೆಟ್, ಫುಟ್‌ಬಾಲ್‌ ಅಥವಾ ಹಾಕಿಯಂತಹ ಪ್ರಮುಖ ಆಟವಾಡಲು ಜಾಗ ಸಾಕಾಗುವುದಿಲ್ಲ. ಆದ್ದರಿಂದ, ಈ ಕ್ರೀಡಾಂಗಣವನ್ನು ಬಳಸದಂತಹ ಸ್ಥಿತಿ ನಿರ್ಮಾಣವಾಗಿದೆ. ಬದಲಿಗೆ ಈಗ ಕ್ರೀಡಾಂಗಣವಿರುವ ವಿರುದ್ಧ ದಿಕ್ಕಿಗೆ ಇದನ್ನು ನಿರ್ಮಿಸಿದ್ದರೆ, ಬಿಸಿಲಿನಿಂದ ಪ್ರೇಕ್ಷಕರಿಗೆ ರಕ್ಷಣೆಯಾದರೂ ಸಿಗುತ್ತಿತ್ತು. ಅಲ್ಲದೇ, ಮೈದಾನದ ವಿಸ್ತಿರ್ಣವೂ ಜಾಸ್ತಿಯಾಗುತ್ತಿತ್ತು.

ಕ್ರೀಡಾಂಗಣ ಗ್ಯಾಲರಿಯ ಕೆಳಭಾಗದಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿದ್ದರೂ ಅವುಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ಕೆಳಗಡೆ ಖಾಲಿಯಿರುವ ಜಾಗಕ್ಕೆ ಬಾಗಿಲುಗಳನ್ನು ಮುಚ್ಚುವ ವ್ಯವಸ್ಥೆ ಇಲ್ಲವಾದ್ದರಿಂದ ಈ ಸ್ಥಳವೀಗ ಅನೈತಿಕ ಚಟುವಟಿಕೆಗಳಿಗೆ ಆಶ್ರಯ ತಾಣವಾಗಿದೆ. ಎಲ್ಲೆಂದರಲ್ಲಿ ಕಸ–ಕಡ್ಡಿಯನ್ನು ಬಿಸಾಕಿ ಗಲೀಜು ಮಾಡಲಾಗಿದೆ. ಪಕ್ಕದಲ್ಲಿಯೇ ವ್ಯಾಯಾಮ ಶಾಲೆಯೊಂದನ್ನು ಕೂಡ ನಿರ್ಮಿಸಲಾಗಿದೆ. ಅಲ್ಲಿ ಜಿಮ್‌ಗೆ ಸಂಬಂಧಿಸಿದ ಹಲವಾರು ಉಪಕರಣಗಳನ್ನು ಇಡಲಾಗಿದೆ.

ಸೋಮವಾರಪೇಟೆ ನಗರದ ಸುತ್ತಮುತ್ತ ಸುಮಾರು 10 ಎಕರೆ ಜಾಗವನ್ನು ಗುರುತಿಸಿ, 400 ಮೀಟರ್‌ ಟ್ರ್ಯಾಕ್ ಹಾಗೂ ಕ್ರೀಡಾಂಗಣ ನಿರ್ಮಿಸಲು ನಕ್ಷೆ ತಯಾರಿಸಿಕೊಡಲು ಲೋಕೋಪಯೋಗಿ ಇಲಾಖೆಗೆ ಕ್ರೀಡೆ ಮತ್ತು ಯುವಜನ ಸೇವಾ ಇಲಾಖೆ ವತಿಯಿಂದ ಮನವಿಯೊಂದು ಹೋಗಿದೆ. ಅದು ಕಾರ್ಯಗತವಾಗುವುದೇ ಎಂಬುದು ಕ್ರೀಡಾಪ್ರೇಮಿಗಳ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT